ಕನ್ನಡಪ್ರಭ ವಾರ್ತೆ ಕಾರವಾರ
ಅಂಕೋಲಾ ತಾಲೂಕಿನ ಶಿರೂರು ಬಳಿ ಹರಿಯುವ ಗಂಗಾವಳಿ ನದಿಯಲ್ಲಿ ಶೇಖರಣೆಗೊಂಡಿರುವ ಅಪಾರ ಪ್ರಮಾಣದ ಮಣ್ಣನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ಮಂಗಳವಾರ ಬ್ಯಾತಿಮೆಟ್ರಿಕ್ ಸರ್ವೇ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲಾಯಿತು.ನದಿಯಲ್ಲಿ ಹೂಳು ಮತ್ತು ಮಣ್ಣು ಎಷ್ಟು ಪ್ರಮಾಣದಲ್ಲಿ ಜಮಾವಣೆಯಾಗಿದೆ ಹಾಗೂ ನದಿಯ ಆಳವೆಷ್ಟು ಎಂಬುದನ್ನು ನಿಖರವಾಗಿ ಅಳೆಯಲು ಈ ಸರ್ವೇ ನಡೆಸಲಾಗಿದೆ. ಬಂದರು ಇಲಾಖೆಯ ಎಂಜಿನಿಯರ್ ರಾಜ್ ಕುಮಾರ್ ಹಾಗೂ ಜಿಲ್ಲಾಧಿಕಾರಿ ಕಚೇರಿಯ ಪ್ರಾಕೃತಿಕ ವಿಕೋಪ ನಿರ್ವಹಣಾ ವಿಭಾಗದ ಸಹಾಯಕ ನಿರ್ದೇಶಕ ಪ್ರಶಾಂತ್ ಅವರ ಸಮ್ಮುಖದಲ್ಲಿ ಈ ಸಮೀಕ್ಷಾ ಕಾರ್ಯ ಜರುಗಿತು. ಅಧಿಕಾರಿಗಳು ಸ್ಥಳದಲ್ಲೇ ಇದ್ದು, ಮುಂದಿನ ಕಾರ್ಯಾಚರಣೆಯ ರೂಪುರೇಷೆಗಳ ಬಗ್ಗೆ ಚರ್ಚೆ ನಡೆಸಿದರು.
ಬ್ಯಾತಿಮೆಟ್ರಿಕ್ ಸರ್ವೇ ಮೂಲಕ ಲಭ್ಯವಾಗುವ ವರದಿ ಆಧಾರದ ಮೇಲೆ ಮಣ್ಣು ತೆರವು ಕಾರ್ಯದ ಸ್ಪಷ್ಟ ಚಿತ್ರಣ ಸಿಗಲಿದೆ. ಇನ್ನು 3ರಿಂದ 4 ದಿನಗಳಲ್ಲಿ ಅಗತ್ಯವಿರುವ ಬೃಹತ್ ಯಂತ್ರೋಪಕರಣಗಳನ್ನು ಸ್ಥಳಕ್ಕೆ ತರಿಸಿ, ನದಿಯಲ್ಲಿ ಶೇಖರಣೆಗೊಂಡಿರುವ ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇಂದು ವಿದ್ಯುತ್ ವ್ಯತ್ಯಯಕಾರವಾರ ಉಪ ವಿಭಾಗ ವ್ಯಾಪ್ತಿಯಲ್ಲಿ ಜಂಗಲ್ ಕಟಿಂಗ್ ಮತ್ತು ಲೈನ್ ನಿರ್ವಹಣಾ ಕಾಮಗಾರಿ ಇರುವುದರಿಂದ ಮೇ 20 ರಂದು ಬೆಳಗ್ಗೆ 9.30ರಿಂದ ಸಂಜೆ 6 ಗಂಟೆಯವರೆಗೆ ಕೆ.ಎಚ್.ಬಿ ಫೀಡರಿನ ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಜೊತೆಗೆ ಕಾರವಾರ ತಾಲೂಕು ವ್ಯಾಪ್ತಿಯಲ್ಲಿ ಬರುವ 33 ಕೆವಿ ಹಣಕೋಣ ವಿದ್ಯುತ್ ಉಪ ಕೇಂದ್ರದ ತುರ್ತು ನಿರ್ವಹಣಾ ಕಾಮಗಾರಿ ಇರುವುದರಿಂದ ಮೇ 20 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೂ ಸದಾಶಿವಗಡ, ಹಳಗಾ, ಅಸ್ನೋಟಿ, ಮಾಜಾಳಿ, ಮುಡಗೇರಿ, ಹಣಕೋಣ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ಕಾರವಾರ ಹೆಸ್ಕಾಂ, ಕಾರ್ಯನಿರ್ವಾಹಕ ಎಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
