ಹೊಸಕೋಟೆ: ಭಾರತೀಯ ಚುನಾವಣಾ ಆಯೋಗದ ನಿರ್ದೇಶನದಂತೆ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಜಾರಿಗೊಳಿಸುವ ಕಾರ್ಯಕ್ಕೆ ಸಾರ್ವಜನಿಕರು ಸಹಕರಿಸಬೇಕು ಎಂದು ತಾಲೂಕು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆಯ ಪ್ರಮುಖ ಉದ್ದೇಶ ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸುವುದು ಹಾಗೂ ಅನರ್ಹ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕುವುದಾಗಿದೆ. 18 ವರ್ಷ ತುಂಬಿರುವ ಅರ್ಹ ನಾಗರಿಕರನ್ನು ಮತದಾರರ ಪಟ್ಟಿಗೆ ಸೇರಿಸಲಾಗುವುದು. ಮರಣ ಹೊಂದಿರುವವರು, ಶಾಶ್ವತವಾಗಿ ಸ್ಥಳಾಂತರಗೊಂಡವರು, ವಿವಾಹದ ನಂತರ ಬೇರೆ ಕ್ಷೇತ್ರಕ್ಕೆ ತೆರಳಿರುವವರು ಹಾಗೂ ಒಂದಕ್ಕಿಂತ ಹೆಚ್ಚು ಕಡೆ ಹೆಸರು ಹೊಂದಿರುವ ನಕಲಿ ಮತದಾರರ ಹೆಸರು ಪರಿಶೀಲನೆ ನಂತರ ಪಟ್ಟಿಯಿಂದ ತೆಗೆದು ಹಾಕಲಾಗುವುದು ಎಂದು ಹೇಳಿದರು.ಪ್ರಸ್ತುತ 2025ರ ಮತದಾರರ ಪಟ್ಟಿಯಲ್ಲಿರುವ ಪ್ರತಿಯೊಬ್ಬ ಮತದಾರರನ್ನು ಅವರ ಕುಟುಂಬ ಸದಸ್ಯರೊಂದಿಗೆ ಜೋಡಿಸುವ “ಮ್ಯಾಪಿಂಗ್ " ಕಾರ್ಯ ಕೈಗೊಳ್ಳಲಾಗಿದೆ. ತಂದೆ-ಮಕ್ಕಳು, ಅಜ್ಜ-ಮೊಮ್ಮಕ್ಕಳು ಹಾಗೂ ವಿವಾಹದ ನಂತರ ಸ್ಥಳಾಂತರಗೊಂಡಿರುವ ಕುಟುಂಬ ಸದಸ್ಯರ ಮಾಹಿತಿಯನ್ನು ಜೋಡಿಸಲಾಗುತ್ತಿದೆ ಎಂದರು.
ತಹಸೀಲ್ದಾರ್ ಶೀತಲ್ ಮಾತನಾಡಿ, ಹಲವು ವರ್ಷಗಳಿಂದ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ನಡೆದಿಲ್ಲವಾದ್ದರಿಂದ ಚುನಾವಣಾ ಆಯೋಗ ಈ ಬಾರಿ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯ ಕೈಗೊಂಡಿದೆ. ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 2,46,143 ಮತದಾರರಿದ್ದು, 293 ಮತಗಟ್ಟೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 244 ಗ್ರಾಮೀಣ ಹಾಗೂ ೪೯ ನಗರ ಮತಗಟ್ಟೆಗಳು ಸೇರಿವೆ. ಇದುವರೆಗೆ 2,21,500ಕ್ಕೂ ಹೆಚ್ಚು ಮತದಾರರ ಮ್ಯಾಪಿಂಗ್ ಕಾರ್ಯ ಪೂರ್ಣಗೊಂಡಿದ್ದು, ಉಳಿದ ಮತದಾರರ ಮಾಹಿತಿ ಶೀಘ್ರ ಪೂರ್ಣಗೊಳಿಸಲಾಗುವುದು ಎಂದರು.ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಮಾತನಾಡಿ, ನಗರ ಪ್ರದೇಶಗಳಲ್ಲಿ ಜನರ ಸ್ಥಳಾಂತರ ಪ್ರಮಾಣ ಹೆಚ್ಚಿರುವುದರಿಂದ ಕೆಲವು ಮತದಾರರ ಮ್ಯಾಪಿಂಗ್ ಕಾರ್ಯ ಬಾಕಿಯಿದೆ. ಆದಾಗ್ಯೂ ಜಿಲ್ಲಾಮಟ್ಟದಲ್ಲಿ ಕ್ಷೇತ್ರ ಉತ್ತಮ ಪ್ರಗತಿ ಸಾಧಿಸಿದೆ. ಜೂನ್ 19ರೊಳಗೆ ಮ್ಯಾಪಿಂಗ್ ಪೂರ್ಣಗೊಳ್ಳಲಿದ್ದು, ಜೂನ್ 20ರಿಂದ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಲಿದೆ. ಜೂನ್ 20ರಿಂದ 29ರವರೆಗೆ ಬೂತ್ ಮಟ್ಟದ ಅಧಿಕಾರಿಗಳಿಗೆ ವಿಶೇಷ ತರಬೇತಿ ನೀಡಲಾಗುವುದು. ನಂತರ ಜೂನ್ 30ರಿಂದ ಜುಲೈ 29ರವರೆಗೆ ಬಿಎಲ್‌ಒಗಳು ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಪ್ರತಿ ಕುಟುಂಬಕ್ಕೂ ವಿಶೇಷ ನಮೂನೆಗಳನ್ನು ವಿತರಿಸಿ ಮತದಾರರ ವಿವರಗಳನ್ನು ಸಂಗ್ರಹಿಸಲಾಗುವುದು. ಇದೇ ಅವಧಿಯಲ್ಲಿ ಮತಗಟ್ಟೆಗಳ ಮರು ಹೊಂದಾಣಿಕೆ ಕಾರ್ಯ ನಡೆಯಲಿದೆ. ಮತದಾರರ ಸಂಖ್ಯೆ ಹಾಗೂ ಭೌಗೋಳಿಕ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಬದಲಾವಣೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ವೇಳೆ ತಾಪಂ ಇಒ ಮುನಿಯಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪದ್ಮನಾಭ ಇತರ ಅಧಿಕಾರಿಗಳು ಹಾಜರಿದ್ದರು.
ಫೋಟೋ: 1 ಹೆಚ್‌ಎಸ್‌ಕೆ 2
ಹೊಸಕೋಟೆ ತಾಲೂಕು ಕಚೇರಿಯಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ತಾಲೂಕು ಮತದಾರರ ನೋಂದಣಾಧಿಕಾರಿ ಶಿವಕುಮಾರ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.