ಸ್ಟೀಲ್ ಕಾರ್ಖಾನೆ ವಿರೋಧಿಸಿ ಹೋರಾಟಕ್ಕೆ ಸಿದ್ಧತೆ

| Published : Feb 05 2025, 12:32 AM IST

ಸಾರಾಂಶ

ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡು ತಲೆ ಎತ್ತುತ್ತಿರುವ ಸ್ಟೀಲ್ ಕಾರ್ಖಾನೆ ವಿರುದ್ಧ ಹೋರಾಟಕ್ಕೆ ತೆರೆಮರೆಯಲ್ಲಿ ಭಾರಿ ಸಿದ್ಧತೆ ನಡೆದಿದೆ. ಶೀಘ್ರದಲ್ಲಿಯೇ ದೊಡ್ಡ ಹೋರಾಟ ರೂಪುಗೊಳ್ಳಲಿದೆ.

ಪಕ್ಷಾತೀತ ನಾಯಕರು, ಹಲವು ಸಂಘಟನೆಗಳ ಬೆಂಬಲ

ಕೊಪ್ಪಳಕ್ಕೆ ಹೊಂದಿಕೊಂಡು ಕಾರ್ಖಾನೆ ಬೇಡವೇ ಬೇಡ

ಸೋಮರಡ್ಡಿ ಅಳವಂಡಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಜಿಲ್ಲಾ ಕೇಂದ್ರ ಕೊಪ್ಪಳ ನಗರಕ್ಕೆ ಹೊಂದಿಕೊಂಡು ತಲೆ ಎತ್ತುತ್ತಿರುವ ಸ್ಟೀಲ್ ಕಾರ್ಖಾನೆ ವಿರುದ್ಧ ಹೋರಾಟಕ್ಕೆ ತೆರೆಮರೆಯಲ್ಲಿ ಭಾರಿ ಸಿದ್ಧತೆ ನಡೆದಿದೆ. ಶೀಘ್ರದಲ್ಲಿಯೇ ದೊಡ್ಡ ಹೋರಾಟ ರೂಪುಗೊಳ್ಳಲಿದೆ.

ಒಂದು ಸಾವಿರ ಎಕರೆ ಪ್ರದೇಶದಲ್ಲಿ ತಲೆ ಎತ್ತುತ್ತಿರುವ ಸ್ಟೀಲ್ ಕಾರ್ಖಾನೆ ಬರೋಬ್ಬರಿ 5 ಮಿಲಿಯನ್ ಟನ್ ಪ್ರತಿ ದಿನ ಉತ್ಪಾದನೆ ಸಾಮರ್ಥ್ಯ ಹೊಂದಿದ್ದು, ಇದು ರಾಜ್ಯದ 2ನೇ ದೊಡ್ಡ ಸ್ಟೀಲ್ ಕಾರ್ಖಾನೆಯಾಗಲಿದೆ. ಇದು ಉತ್ಪಾದನೆ ಪ್ರಾರಂಭಿಸಿದರೆ ಜಿಲ್ಲಾ ಕೇಂದ್ರ ಕೊಪ್ಪಳ ನಗರವನ್ನೇ ಸ್ಥಳಾಂತರ ಮಾಡಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಇಲ್ಲದಿದ್ದರೆ ಕೊಪ್ಪಳ ಕಪ್ಪಾಗಿ ಜನರು ಉಸಿರುಗಟ್ಟುವ ವಾತಾವರಣದಲ್ಲಿ ಬದುಕಬೇಕಾಗುತ್ತದೆ. ಹೀಗಾಗಿ, ಇದರ ವಿರುದ್ಧ ದೊಡ್ಡ ಹೋರಾಟಕ್ಕೆ ಕೊಪ್ಪಳ ಜಿಲ್ಲೆಯ ಜನರು ಸಜ್ಜಾಗುತ್ತಿದ್ದಾರೆ.

ನಾಡಿನ ಸಾಹಿತಿಗಳ ಬೆಂಬಲಕ್ಕೆ ಕೋರಿಕೆ:

ಈ ಸ್ಟೀಲ್‌ ಕಾರ್ಖಾನೆ ಕೈಬಿಡುವಂತೆ ಆಗ್ರಹಿಸಿ ನಡೆಸುವ ಹೋರಾಟಕ್ಕೆ ನಾಡಿನ ಸಾಹಿತಿಗಳು ಬೆಂಬಲ ನೀಡುವಂತೆ ಸಾಹಿತ್ಯ ಅಕಾಡೆಮಿ ಕಾರ್ಯಕ್ರಮದಲ್ಲಿಯೇ ಹೋರಾಟಗಾರ ಅಲ್ಲಮಪ್ರಭು ಬೆಟ್ಟದೂರು ಕರೆ ನೀಡಿದ್ದಾರೆ. ಇದು ಅತ್ಯಂತ ಅಪಾಯಕಾರಿಯಾಗಿರುವುದರಿಂದ ಕೊಪ್ಪಳ ಜನತೆಯ ಹೋರಾಟಕ್ಕೆ ನಾಡಿನ ಎಲ್ಲ ಸಾಹಿತಿಗಳು ಬೆಂಬಲ ನೀಡಬೇಕು ಎಂದು ಬಹಿರಂಗ ವೇದಿಕೆಯಲ್ಲೇ ಕರೆ ನೀಡಿದ್ದರು.

ತೆರೆಮರೆಯಲ್ಲಿ ಹೋರಾಟಕ್ಕೆ ಸಜ್ಜು:

ಈ ನಡುವೆ ಪಕ್ಷಾತೀತವಾಗಿ ಹೋರಾಟ ರೂಪಿಸಲು ತೆರೆಮರೆಯಲ್ಲಿ ಭಾರಿ ಸಿದ್ಧತೆ ನಡೆಯುತ್ತಿದೆ. ಇದಕ್ಕೆ ಸ್ಥಳೀಯ ಜನಪ್ರತಿನಿಧಿಗಳು ತೆರೆಮರೆಯಲ್ಲಿಯೇ ಬೆಂಬಲ ಸೂಚಿಸಿದ್ದು, ನಾವು ಹೋರಾಟ ಪ್ರಾರಂಭವಾಗುತ್ತಿದ್ದಂತೆ ನಿಮ್ಮೊಂದಿಗೆ ಸೇರಿಕೊಳ್ಳುತ್ತೇವೆ, ಮೊದಲು ಜನಾಂದೋಲನ ರೂಪಿಸಿ ಎಂದು ಹೇಳಿದ್ದಾರೆ.

ಈ ಕುರಿತು ಕೊಪ್ಪಳದ ಪ್ರಮುಖ ವ್ಯಕ್ತಿಯೋರ್ವರು ಸಚಿವ ಎಂ.ಬಿ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವರನ್ನು ಸಹ ಸಂಪರ್ಕ ಮಾಡಿ, ಇದನ್ನು ಹೇಗಾದರೂ ತಡೆಗಟ್ಟಿ ಎಂದು ಮನವಿ ಮಾಡಿದ್ದಾರೆ. ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರನ್ನು ಸಹ ಸಂಪರ್ಕ ಮಾಡಿ, ಕೊಪ್ಪಳ ಬಳಿ ತಲೆ ಎತ್ತುತ್ತಿರುವ ಸ್ಟೀಲ್ ಕಾರ್ಖಾನೆಗೆ ಕಡಿವಾಣ ಹಾಕಿ ಎಂದು ಕೇಳಿಕೊಂಡಿದ್ದಾರೆ. ಇದಕ್ಕೆ ಸಚಿವರು ಸಕಾರಾತ್ಮಕವಾಗಿಯೇ ಪ್ರತಿಕ್ರಿಯಿಸಿದ್ದು, ಜನವಸತಿ ಪ್ರದೇಶಕ್ಕೆ ಹೊಂದಿಕೊಂಡು ಸ್ಟೀಲ್ ಕಾರ್ಖಾನೆ ಪ್ರಾರಂಭಿಸಲು ಬರುವುದೇ ಇಲ್ಲ, ಅದು ಹೇಗೆ ಇವರಿಗೆ ಸ್ಥಳೀಯ ಪರಿಸರ ಇಲಾಖೆಯ ಅಧಿಕಾರಿಗಳು ಅನುಮತಿ ನೀಡಿದರು ಎಂದು ಸಹ ಪ್ರಶ್ನೆ ಮಾಡಿದ್ದಾರೆ. ಇದು, ಕೊಪ್ಪಳ ಹೋರಾಟಗಾರರ ಆತ್ಮಬಲ ಹೆಚ್ಚಿಸುವಂತೆ ಮಾಡಿದೆ.

ಹಳ್ಳಿ ಹಳ್ಳಿಯಲ್ಲಿ ಜಾಗೃತಿ:

ಹೋರಾಟದ ಕುರಿತು ಹಳ್ಳಿ ಹಳ್ಳಿಯಲ್ಲಿ ಜಾಗೃತಿ ಮೂಡಿಸುವ ಕುರಿತು ಸಹ ಚರ್ಚಿಸಲಾಗಿದ್ದು, ಪೂರ್ವಭಾವಿ ಸಭೆ ಕರೆದು, ಹೋರಾಟದ ರೂಪರೇಷ ಸಿದ್ಧ ಮಾಡಲು ತಯಾರಿ ಮಾಡಿಕೊಳ್ಳಲಾಗುತ್ತಿದೆ.

ಯಾಕೆ ಬೇಡ ಕಾರ್ಖಾನೆ:

ಜಿಲ್ಲಾ ಕೇಂದ್ರ ಕೊಪ್ಪಳಕ್ಕೆ ಹೊಂದಿಕೊಂಡೆ ಕಾರ್ಖಾನೆಯ ಕಾಂಪೌಂಡ್ ಇದೆ. ಜಿಲ್ಲಾಧಿಕಾರಿ ಕಚೇರಿಯಿಂದ ಕೂಗಳತೆ ದೂರದಲ್ಲಿದೆ. ಜನವಸತಿ ಪ್ರದೇಶಕ್ಕೆ ಹೊಂದಿಕೊಂಡೇ ಇದೆ. ಹೀಗಿರುವಾಗ ಇಲ್ಲಿ ಸ್ಟೀಲ್ ಕಾರ್ಖಾನೆ ಪ್ರಾರಂಭಿಸಿದರೆ ಜನರು ಬದುಕುವುದಾದರೂ ಹೇಗೆ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ. ಈಗಾಗಲೇ ಇರುವ ಕಾರ್ಖಾನೆಗಳಿಂದ ಬರುತ್ತಿರುವ ಧೂಳಿನಿಂದಲೇ ಜನರು ಹಲವು ಸಮಸ್ಯೆ ಎದುರಿಸುತ್ತಿದ್ದಾರೆ. ಈಗ ಮತ್ತೊಂದು ಕಾರ್ಖಾನೆ ಸ್ಥಾಪಿಸುವುದು ಎಷ್ಟು ಸರಿ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

ಕೊಪ್ಪಳಕ್ಕೆ ಹೊಂದಿಕೊಂಡು ಕಾರ್ಖಾನೆ ಸ್ಥಾಪನೆಯಾದರೆ ನಾವು ಇಲ್ಲಿ ಜೀವಿಸಲು ಸಾಧ್ಯವೇ ಇಲ್ಲ. ಆದ್ದರಿಂದ ಹೋರಾಟ ಮಾಡುವುದು ಅನಿವಾರ್ಯವಾಗಿದ್ದು, ಈಗಾಗಲೇ ಅನೇಕರನ್ನು ಸಂಪರ್ಕ ಮಾಡಿದ್ದು, ಬೆಂಬಲಿಸುವುದಾಗಿ ಹೇಳಿದ್ದಾರೆ ಎನ್ನುತ್ತಾರೆ ಕೊಪ್ಪಳದ ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಸಜ್ಜನ.