ಹಾಸನದ ಜಯನಗರ ಬಡಾವಣೆಯಲ್ಲಿ ಮಿಯಾವಾಕಿ ಪುಟ್ಟಡವಿ ನಿರ್ಮಾಣಕ್ಕೆ ತಯಾರಿ ಆರಂಭ

| Published : Jun 15 2024, 01:02 AM IST

ಹಾಸನದ ಜಯನಗರ ಬಡಾವಣೆಯಲ್ಲಿ ಮಿಯಾವಾಕಿ ಪುಟ್ಟಡವಿ ನಿರ್ಮಾಣಕ್ಕೆ ತಯಾರಿ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನದ ಜಯನಗರ ಬಡಾವಣೆಯಲ್ಲಿ ಮಿಯಾವಾಕಿ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭಗೊಂಡಿತು. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸುಮಾರು 250ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಬಡಾವಣೆಯ ಪುಟಾಣಿಗಳಾದ ಮೋನಾಕ್ಷಿ, ರಂಜನ್, ಪಾಂಚಜನ್ಯ, ನೇಸರ ಹಾಗೂ ಶುಭ ಗಿಡ ನೆಡುವುದರ ಮೂಲಕ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭವಾಯಿತು.

ನಿರ್ಮಾಣ ಕಾರ್ಯ । ಅರಣ್ಯೀಕರಣ ಪ್ರಕ್ರಿಯೆಗೆ ಚಾಲನೆ । 250ಕ್ಕೂ ಅಧಿಕ ಜಾತಿಯ ಗಿಡಗಳನ್ನು ನೆಟ್ಟ ಪುಟಾಣಿಗಳು । 30ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿ

ಕನ್ನಡಪ್ರಭ ವಾರ್ತೆ ಹಾಸನ

ನಗರದ ಜಯನಗರ ಬಡಾವಣೆಯಲ್ಲಿ ಹಸಿರುಭೂಮಿ ಪ್ರತಿಷ್ಠಾನ, ಭಾರತ ಜ್ಞಾನ ವಿಜ್ಞಾನ ಸಮಿತಿ ಜಯನಗರ ಘಟಕ, ಮುಂಜಾನೆ ಮಿತ್ರರು ಹಾಗೂ ಸ್ಥಳೀಯ ನಾಗರಿಕರ ಸಹಭಾಗಿತ್ವದಲ್ಲಿ ಮಿಯಾವಾಕಿ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭಗೊಂಡಿತು. ಶುಕ್ರವಾರ ಬೆಳಿಗ್ಗೆ 6 ಗಂಟೆಯಿಂದ ಸುಮಾರು 250ಕ್ಕೂ ಅಧಿಕ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು. ಬಡಾವಣೆಯ ಪುಟಾಣಿಗಳಾದ ಮೋನಾಕ್ಷಿ, ರಂಜನ್, ಪಾಂಚಜನ್ಯ, ನೇಸರ ಹಾಗೂ ಶುಭ ಗಿಡ ನೆಡುವುದರ ಮೂಲಕ ಪುಟ್ಟಡವಿ ನಿರ್ಮಾಣ ಕಾರ್ಯ ಆರಂಭವಾಯಿತು.

ಈ ಪ್ರಕ್ರಿಯೆಯಲ್ಲಿ ರಾಜೀವ್ ಎಂಜಿನೀಯರಿಂಗ್ ಕಾಲೇಜಿನ ಸುಮಾರು 30 ವಿದ್ಯಾರ್ಥಿಗಳು ಪಾಲ್ಗೊಂಡು ಗಿಡಗಳಗನ್ನು ನೆಟ್ಟರು.

ಪುಟ್ಟಡವಿ ನಿರ್ಮಾಣ ಸಂಚಾಲಕ, ಮುಂಜಾನೆ ಮಿತ್ರರು ಅಧ್ಯಕ್ಷ ಸಿ.ಬಿ.ವೆಂಕಟೇಗೌಡ ಅರಣ್ಯೀಕರಣ ಪ್ರಕ್ರಿಯೆಗೆ ಚಾಲನೆ ನೀಡಿ, ‘ಹಾಸನ ನಗರ ಕಳೆದ ತಿಂಗಳು ದಾಖಲೆಯ 41 ಡಿಗ್ರಿ ಉಷ್ಣತೆಯನ್ನು ದಾಖಲಿಸಿತು. ಇಡೀ ತಿಂಗಳು ಹಾಸನ ನಗರದ ಜನತೆ ಬಿಸಿಗಾಳಿಯಿಂದ ತತ್ತರಿಸಿದರು. ನಗರವನ್ನು ತಂಪಾಗಿಡಲು ಅಗತ್ಯವಾದ ಮರಗಿಡಗಳು ಹಾಸನ ನಗರದಲ್ಲಿ ಇಲ್ಲ. ಇದ್ದ ಮರಗಿಡಗಳೆಲ್ಲಾ ಅವೈಜ್ಞಾನಿಕ ಅಭಿವೃದ್ಧಿ ಎಂಬ ಹೆಬ್ಬಾವಿಗೆ ಬಲಿಯಾಗಿವೆ. ಆ ಕಾರಣಕ್ಕೆ ಹಾಸನ ನಗರ ಬಿಸಿಲ ಬೇಗೆಯಿಂದ ತತ್ತರಿಸಿತು. ಹಾಸನ ನಗರದಲ್ಲಿ ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ ಪುಟ್ಟಡವಿ ನಿರ್ಮಾಣ ಕಾರ್ಯ ಪ್ರಾರಂಭಿಸುವ ಆಂದೋಲನವನ್ನು ಹಸಿರುಭೂಮಿ ಪ್ರತಿಷ್ಠಾನವು ವಿವಿಧ ಸಂಘ ಸಂಸ್ಥೆಗಳನ್ನು ಒಳಗೊಂಡು ಪ್ರಾರಂಭಿಸಿದೆ’ ಎಂದು ಹೇಳಿದರು.

ಬಿಜಿವಿಎಸ್ ಜಿಲ್ಲಾಧ್ಯಕ್ಷ ಗುರುರಾಜು ಮಾತನಾಡಿ, ‘ಮಾನವನ ಸುಸ್ಥಿರ ಬದುಕಿಗೆ ನಿಗದಿತ ವೇಳೆ‌ ಹಾಗೂ ಸಮಯದಲ್ಲಿ ಮಳೆ, ಬೆಳೆ ಆಗಬೇಕು. ಆದರೆ ಹವಾಮಾನ ವ್ಯತ್ಯಯದಿಂದ ಇಡೀ ಮಾನವನ ನಡಾವಳಿ ದಿಕ್ಕುತಪ್ಪಿದೆ. ಅದಕ್ಕೆ ಮೂಲ ಕಾರಣ ಭೂಗೋಳ ಬಿಸಿ. ಈ ಬಿಸಿಯನ್ನು ನಿಯಂತ್ರಣಕ್ಕೆ ತರಲು ಪರಿಸರ ಪೂರಕ ಅಭಿವೃದ್ಧಿ ಮಾನದಂಡ ಹಾಗೂ ಅರಣ್ಯೀಕರಣದ ಅಭಿವೃದ್ಧಿಯಿಂದ ಮಾತ್ರ ಸಾಧ್ಯ. ಈ ಪರಿಸರ ಸುಸ್ಥಿರಕ್ಕೆ ಶೇ.33 ಕಾಡಿರಬೇಕು. ಈಗ ಇರುವುದು ಶೇ.18 ಮಾತ್ರ, ಪುಟ್ಟಡವಿ ನಿರ್ಮಾಣ ಕಾರ್ಯ ಈ ಅರಣ್ಯ ಏರಿಕೆಗೆ ಪುಟ್ಟದಾದ ಕೊಡುಗೆ ಕೊಡಲಿದೆ’ ಎಂದು ಹೇಳಿದರು.

ಹಸಿರುಭೂಮಿ ಪ್ರತಿಷ್ಠಾನದ ‘ಹಸಿರುಸಿರಿ’ ಸಂಚಾಲಕ ಪುರುಶೋತ್ತಮ ಗಿಡನೆಡುವ ಮಾದರಿ ವಿವರಿಸಿ ನಗರದ ನಡುವೆ ನಿರ್ಮಾಣವಾಗುವ ಕಾಡು ನಗರ ವಾಸಿಗಳಿಗೆ ಶುದ್ಧಗಾಳಿ ನೀಡಿ ನೆಮ್ಮದಿಯ ಜೀವನ ನೀಡುತ್ತದೆ ಎಂದರು.

ಬಿಜಿವಿಎಸ್ ಜಿಲ್ಲಾ ಉಪಾಧ್ಯಕ್ಷ ಡಾ.ಮಂಜುನಾಥ್, ಕಾರ್ಯದರ್ಶಿ ಅಹಮದ್ ಹಗರೆ, ಜಯನಗರ ಬಿಜಿವಿಎಸ್ ಘಟಕದ ಅಧ್ಯಕ್ಷೆ ಶಾರದಾ, ಕಾರ್ಯದರ್ಶಿ ಮೋನಿಕಾ, ಸಹಕಾರ್ಯದರ್ಶಿ ಆಶಾ, ಸದಸ್ಯ ಧರ್ಮಾನಂದ, ಗೀತಾ ಹಸಿರುಭೂಮಿ ಪ್ರತಿಷ್ಠಾನದ ಸದಸ್ಯರಾದ ಅಪ್ಪಾಜಿಗೌಡ, ಶಿವಶಂಕರಪ್ಪ, ಗಿರಿಜಾಂಬಿಕ, ಚಂದ್ರಶೇಖರ್, ಮಮತಾ ಪಾಟೀಲ್, ನೇತ್ರ, ಶಿವು, ಮಧುಕಾವ್ಯ, ಶುಭ, ಯೋಗೇಶ್, ರೇಖಾ ರಂಗಸ್ವಾಮಿ, ತಾರಾ ಪ್ರಸಾದ್, ಚೇತನ, ಶಿವಕುಮಾರ್, ಮಮತಾ, ಆದರ್ಶ, ಶಿಲ್ಪ, ಚಂದನ, ಮೀನ, ಕೇಶವಮೂರ್ತಿ, ಕವಿತಾ, ಮ್ಯಾಥ್ಸ್ ಅಕಾಡೆಮಿಯ ವೇದಾ ಇದ್ದರು.