ಪ್ರಸಕ್ತ ವರ್ಷ ಮುಂಗಾರು, ಹಿಂಗಾರು ಮಳೆಯಿಲ್ಲದೆ ಬರದ ಛಾಯೆ ಆವರಿಸಿದ್ದು, ಅನಾವೃಷ್ಟಿಯಿಂದ ಬೆಳೆಹಾನಿಯಾನಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದ ಕರಾಳ ಛಾಯೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ಮೇಲೂ ಆವರಿಸಿದೆ. ಆದರೂ ರೈತರು, ಸಾರ್ವಜನಿಕರು ಹಬ್ಬದ ತಯಾರಿ ನಡೆಸುತ್ತಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಾದಗಿ
ಪ್ರಸಕ್ತ ವರ್ಷ ಮುಂಗಾರು, ಹಿಂಗಾರು ಮಳೆಯಿಲ್ಲದೆ ಬರದ ಛಾಯೆ ಆವರಿಸಿದ್ದು, ಅನಾವೃಷ್ಟಿಯಿಂದ ಬೆಳೆಹಾನಿಯಾನಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರಗಾಲದ ಕರಾಳ ಛಾಯೆ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮದ ಮೇಲೂ ಆವರಿಸಿದೆ. ಆದರೂ ರೈತರು, ಸಾರ್ವಜನಿಕರು ಹಬ್ಬದ ತಯಾರಿ ನಡೆಸುತ್ತಿದ್ದಾರೆ.ರೈತರು ವಾಹನಗಳಿಗೆ ಪೇಂಟ್ ಹಚ್ಚಿ ಪರಪರಿ, ಜರಿ ಕಟ್ಟಿ ಶೃಂಗಾರಗೊಳಿಸುತ್ತಿದ್ದರೆ, ಅಂಗಡಿ ಮುಂಗಟ್ಟುಗಳ ಸ್ವಚ್ಛತೆ, ಬಣ್ಣ, ಲೈಟಿಂಗ್ಸ್ ಅಲಂಕಾರದಿಂದ ಕಂಗೊಳಿಸುತ್ತಿವೆ. ಮಾರುಕಟ್ಟೆಯಲ್ಲಿ ನಕ್ಷತ್ರ ದೀಪಗಳು, ಹಸಿರು ಪಟಾಕಿ, ಮಿನುಗುವ ಲೈಟ್ಗಳು, ದೀಪಾವಳಿ ಸ್ವಾಗತ ಕೋರುವ ಬಾಗಿಲು ಅಲಂಕಾರಕ ವಸ್ತುಗಳು, ಟ್ರ್ಯಾಕ್ಟರ್, ವಾಹನ ಅಲಂಕಾರಿಕ ಸಾಮಗ್ರಿಗಳು ಅಂಗಡಿಗಳಲ್ಲಿ ತೂಗು ಬಿಟ್ಟು ಗ್ರಾಹಕರನ್ನು ಆಕರ್ಷಿಸುತ್ತಿವೆ. ಈ ಬಾರಿ ಖರೀದಿಗೆ ಗ್ರಾಹಕರ ಸಂಖ್ಯೆ ಕಡಿಮೆ ಇದೆ ಎನ್ನುತ್ತಾರೆ ವ್ಯಪಾರಸ್ಥ ಶ್ರೀಕಾಂತ ಶೆಟ್ಯಪ್ಪನವರ, ಶ್ರೀಧರ ದಂತಿ, ನಿತೀಶ್ ಪಾಟೀಲ.
ಸೋಮವಾರ ದೀಪಾವಳಿ ಅಮವಾಸ್ಯೆ ಇದ್ದು, ಮರುದಿನ ಮಂಗಳವಾರ ದೀಪಾವಳಿ ಪಾಢ್ಯ ಇದೆ. ಎರಡು ದಿನ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮದಲ್ಲಿ ಲಕ್ಷ್ಮೀಯನ್ನು ಪೂಜಿಸಿ ಆರೋಗ್ಯ, ಅಂತಸ್ತು, ಐಶ್ವರ್ಯ ವೃದ್ಧಿಗೆ ಬೇಡಿಕೊಳ್ಳಲಾಗುತ್ತದೆ. ಮನೆಗಳಲ್ಲಿ ಹಣತೆ ಹಚ್ಚಿ ಸಂಭ್ರಮಿಸಲಾಗುತ್ತದೆ. ಪೂಜೆಗೆ ಹೂ, ಹಣ್ಣು ಹಂಪಲ, ದೀಪ ಪಣತೆ ಮಾರಾಟಕ್ಕೆ ಹೂ ಹಣ್ಣು ಅಂಗಡಿಗಳ ಸಿದ್ದತೆಯೂ ಜೋರಾಗಿ ನಡೆದಿವೆ.ಆಕರ್ಷಿಸುತ್ತಿವೆ ನಕ್ಷತ್ರ ಬುಟ್ಟಿಗಳು: ವ್ಯಾಪಾರಸ್ಥರು ವಾರದ ಹಿಂದೆಯೇ ಅಂಗಡಿಗಳಿಗೆ ಸುಣ್ಣ ಬಣ್ಣ ಬಳಿದು ಸ್ವಚ್ಛತೆ ಮಾಡಿ ಸಿಂಗಾರಗೊಳಿಸಿದ್ದಾರೆ. ಸ್ಟೇಶನರಿ ಅಂಗಡಿಗಳಲ್ಲಿ ನಾನಾ ಬಗೆಯ ನಕ್ಷತ್ರಗಳು, ಗೂಡು ದೀಪಗಳು, ಎಲೆಕ್ಟ್ರಿಕಕಲ್ ದೀಪಗಳ ಸರಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ.
ಒಟ್ಟಾರೆ ದೀಪಾವಳಿ ಹಬ್ಬದ ಮೇಲೆ ಬರಗಾಲದ ಕರಾಳ ಛಾಯೆ ಆವರಿಸಿ ಹಬ್ಬ ಸ್ವಲ್ಪಮಟ್ಟಿಗೆ ಕಳೆಗುಂದಿದೆ.