ಹುಬ್ಬಳ್ಳಿ: ರಾಜ್ಯ ಸರ್ಕಾರ ಪ್ರಸಕ್ತ ವರ್ಷ 800 ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಪ್ರಾರಂಭಿಸಲು ಉದ್ದೇಶಿಸಿದೆ. ಆದರೆ ನಿಯಮಾವಳಿಗಳ ಪಾಲನೆಯಾಗುತ್ತಿಲ್ಲ. ಕೆಪಿಎಸ್ ಪ್ರಾರಂಭದಿಂದಾಗಿ ಅವುಗಳ ಸುತ್ತಮುತ್ತಲಿನ 8 ಸಾವಿರಕ್ಕೂ ಅಧಿಕ ಸರ್ಕಾರಿ ಪ್ರಾಥಮಿಕ, ಪ್ರೌಢ ಹಾಗೂ ಅನುದಾನಿತ ಪ್ರೌಢಶಾಲೆಗಳು ಮುಚ್ಚುತ್ತವೆ. ಇದಕ್ಕಾಗಿ ಶಿಕ್ಷಕರ ಸಂಘಗಳು ಹೋರಾಟ ರೂಪಿಸಬೇಕಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಇಲ್ಲಿನ ಆರ್.ಎನ್.ಶೆಟ್ಟಿ ಕಲ್ಯಾಣಮಂಟಪದ ಸಭಾಭವನದಲ್ಲಿ ಕರ್ನಾಟಕ ಮಾಧ್ಯಮಿಕ ಶಿಕ್ಷಕರ ನೌಕರರ ಸಂಘದ ಹುಬ್ಬಳ್ಳಿ ಘಟಕದ ನೇತೃತ್ವದಲ್ಲಿ ಶನಿವಾರ ನಡೆದ ರಾಜ್ಯ ಘಟಕದ ಕೇಂದ್ರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ನಿಯಮದಂತೆ ಒಂದೇ ಕ್ಯಾಂಪಸ್‌ನಲ್ಲಿರುವ ಶಾಲೆಗಳನ್ನು ಕೆಪಿಎಸ್ ಆಗಿ ಪರಿವರ್ತಿಸಬೇಕು. ಬೇರೆ ಆವರಣದ ಶಾಲೆಗಳನ್ನು ಇದರ ವ್ಯಾಪ್ತಿಗೆ ತರುವುದು ಕಾನೂನಿನ ವಿರುದ್ಧ. ಆದರೂ ಇದನ್ನು ವಿರೋಧಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸರಕಾರಿ ಹಾಗೂ ಅನುದಾನಿತ ಶಾಲೆಗಳನ್ನು ಉಳಿಸಿಕೊಳ್ಳುವ ಬಗ್ಗೆ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ರಾಜ್ಯಮಟ್ಟದಲ್ಲಿ ದೊಡ್ಡ ಹೋರಾಟ ರೂಪಿಸಬೇಕಾದ ಅಗತ್ಯವಿದೆ ಎಂದರು.ಸಂಘ ಮೊಟ್ಟ ಮೊದಲಿಗೆ ಕೆಪಿಎಸ್ ಪ್ರಾರಂಭದಿಂದ ಆಗುವ ಸಾಧಕ- ಬಾಧಕ ಚಿಂತನ- ಮಂಥನ ಹಾಗೂ ಅಭಿಪ್ರಾಯ ಸಂಗ್ರಹಿಸಬೇಕು. ಇಲ್ಲವಾದಲ್ಲಿ ಅನುದಾನಿತ ಮತ್ತು ಸರ್ಕಾರಿ ಶಾಲಾ ನೌಕರರು ದೊಡ್ಡ ಸಮಸ್ಯೆ ಎದುರಿಸಬೇಕಾಗುತ್ತದೆ. ಸಂಘ ಈ ವಿಚಾರದಲ್ಲಿ ಗಟ್ಟಿ ನಿರ್ಣಯ ಕೈಗೊಂಡು ಹೋರಾಡಬೇಕು ಎಂದರು.
ಎನ್‌ಪಿಎಸ್ ವಿಸ್ತರಣೆಯ ಚಿಂತನೆ:
ಅನುದಾನಿತ ಶಾಲೆಗಳಿಗೆ ಕೆಲ ಮಾರ್ಪಾಡು ಮಾಡಿ ಎನ್‌ಪಿಎಸ್ ವಿಸ್ತರಿಸುವ ಚಿಂತನೆ ಸರ್ಕಾರದಲ್ಲಿದೆ. ಈ ನಿಟ್ಟಿನಲ್ಲಿ ವರದಿ ಸಿದ್ಧಪಡಿಸುವ ಕಾರ್ಯ ನಡೆದಿದೆ. ಹಾಗೆಯೇ 2006ರ ನಂತರ ನೇಮಕಗೊಂಡ ನೌಕರರಿಗೆ ಪಿಂಚಣಿ ಸೌಲಭ್ಯವಿಲ್ಲ. ಓಪಿಎಸ್, ಕಾಲ್ಪನಿಕ ವೇತನ ಬಗ್ಗೆ ಚರ್ಚಿಸಿ ಸಂಘಟನೆ ಸ್ಪಷ್ಟ ನಿರ್ಣಯದೊಂದಿಗೆ ಹೋರಾಟ ಕೈಗೊಳ್ಳಬೇಕು. ಸಂಘದಲ್ಲಿ ಸಂಘಟನಾತ್ಮಕ ಕಾರ್ಯಗಳು ನಡೆಯಬೇಕು ಎಂದು ಹೇಳಿದರು.
ಶಾಲಾ ನೌಕರರ ಹಾವೇರಿ ಜಿಲ್ಲಾ ಸಂಘದ ಗೌರವಾಧ್ಯಕ್ಷ ಎಚ್.ಪಿ. ಬಣಕಾರ ಮಾತನಾಡಿ, ಸರಕಾರ ಕೈಗೊಳ್ಳವ ನಿರ್ಣಯ, ಆದೇಶದಿಂದ ಅನುದಾನಿತ ಶಾಲೆಗಳು ಸೌಲಭ್ಯದಿಂದ ವಂಚಿತವಾಗುತ್ತಿವೆ. ಒಪಿಎಸ್ ಅನುದಾನಿತ ಸಿಬ್ಬಂದಿಗೂ ಆಗಬೇಕಿದೆ. 2006ರ ನಂತರ ಅನುದಾನಕ್ಕೆ ಒಳಪಟ್ಟವರು, ಯುವ ಪೀಳಿಗೆಗೆ ಇಂತಹ ವಿಚಾರ ತಿಳಿಸುವ ಕೆಲಸ ಸಂಘದಿಂದ ಆಗಬೇಕು ಎಂದರು.ಅನುದಾನಿತ ಶಿಕ್ಷಕರು ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೇ, ಸಮಯಕ್ಕೆ ಸರಿಯಾಗಿ ಅವರಿಗೆ ವೇತನವೂ ಆಗುತ್ತಿಲ್ಲ. ಕಲಬುರಗಿ ವ್ಯಾಪ್ತಿಯ ನೌಕರರಿಗೆ 7 ತಿಂಗಳಿಂದ ವೇತನವೇ ಆಗಿಲ್ಲ. ಸರಕಾರದ ಆರ್ಥಿಕ ಸ್ಥಿತಿಗೆ ಪೆಟ್ಟು ಬಿದ್ದಾಗ ಮೊದಲು ಅನುದಾನಿತ ಶಾಲೆಗಳಿಗೆ ಕತ್ತರಿ ಹಾಕಲಾಗುತ್ತದೆ. ಹೀಗಾಗಿ ತಾಲೂಕು, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಹೋರಾಡಿ ಸರಕಾರಕ್ಕೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಸಂಘದ ಕಟ್ಟಡಕ್ಕೆ ಹಾವೇರಿ ಜಿಲ್ಲೆ ಹಾಗೂ ವಿವಿಧ ತಾಲೂಕು ಸಂಘದಿಂದ ಒಟ್ಟು ₹೧೪,೮೫ ಲಕ್ಷ ದೇಣಿಗೆ ಚೆಕ್ ಅನ್ನು ಸಂಘದ ಅಧ್ಯಕ್ಷರಿಗೆ ಹಸ್ತಾಂತರಿಸಲಾಯಿತು. ಸಂಘದ ರಾಜ್ಯ ಕಾರ್ಯದರ್ಶಿ ಜಿ.ಆರ್. ಭಟ್, ಪ್ರಭಾಕರ ಬಂಟ್, ಜಿ.ಎಸ್. ಹುದ್ದಾರ, ಎನ್.ಎಂ. ಸವಣೂರ, ಎಲ್.ಎಂ. ಹೆಗಡೆ, ಎಂ.ಕೆ. ಲಮಾಣಿ, ಎ.ಎಸ್. ಪಾಟೀಲ, ಕುಂದೂರ, ಅಂಗಡಿ, ಹುಕ್ಕೇರಿ ಸಂಭಾಳ ಸೇರಿದಂತೆ ಇತರರು ಇದ್ದರು.ನಿರ್ಣಯಗಳು
* ಜುಲೈ ಕೊನೆ ವಾರದೊಳಗಾಗಿ 2006ರ ನಂತರ ನೇಮಕಗೊಂಡ ನೌಕರರಿಗೆ ಒಪಿಎಸ್ ಯೋಜನೆ ಜಾರಿಗೊಳಿಸದಿದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳುವುದು.* ಕೆಪಿಎಸ್ ಶಾಲೆ ಬಗ್ಗೆ ಕಾನೂನು ಸಲಹೆ ಪಡೆದು ಮುಂದಿನ ಹೋರಾಟ ರೂಪಿಸುವ ಬಗ್ಗೆ ಸಂಘ ಒಕ್ಕೊರಲಿನ ನಿರ್ಣಯ ಕೈಗೊಂಡಿತು.