ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಡಿಸೆಂಬರ್ 24ರಂದು ನಗರದಲ್ಲಿ ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌ಗೆ ತಾಂತ್ರಿಕ ಸಿದ್ಧತೆಗಳನ್ನು ಕೈಗೊಳ್ಳಲಾಗಿದ್ದು, 5 ಕಿಮೀ, 10ಕಿಮೀ ಮತ್ತು 21 ಕಿಮೀ ಓಟದಲ್ಲಿ ಪಾಲ್ಗೊಂಡ ಕ್ರೀಡಾಪಟುಗಳ ಓಟದ ಚಿತ್ರಗಳು ನೇರವಾಗಿ ಅವರ ಇ-ಮೇಲ್‌ಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ ಎಂದು ಡಾ.ಮಹಾಂತೇಶ ಬಿರಾದಾರ ತಿಳಿಸಿದ್ದಾರೆ.ನಗರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್- 2023 ಪೂರ್ವ ಸಿದ್ಧತೆಗಳ ಕುರಿತು ನಡೆದ ಕೋರ್ ಕಮೀಟಿ ಸಭೆಯಲ್ಲಿ ಮಾತನಾಡಿದರು. ಓಟದಲ್ಲಿ ಪಾಲ್ಗೊಳ್ಳುತ್ತಿರುವ ಫೇಸರ್, ಅಂಬಾಸೀಡರ್ ಮತ್ತು ಪ್ರಮುಖ ಕ್ರೀಡಾಪಟುಗಳು ಈ ಬಾರಿಯ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರಗು ನೀಡುತ್ತಿದ್ದಾರೆ. ಕ್ರೀಡಾಪಟುಗಳು ಓಡುವ ಮಾರ್ಗದಲ್ಲಿ ಅಲ್ಲಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಸಂಗೀತ ಮತ್ತು ನೃತ್ಯ ಪ್ರದರ್ಶನ ಮೂಲಕ ಓಟಗಾರರಿಗೆ ಪ್ರೋತ್ಸಾಹ ನೀಡಲಿದ್ದಾರೆ. ಕೋರ್ ಕಮಿಟಿಯ ಎಲ್ಲ ಪದಾಧಿಕಾರಿಗಳು ಮತ್ತು ಜಿಲ್ಲಾಡಳಿತದ ಸಹಕಾರದಿಂದ ಹೆರಿಟೇಜ್ ರನ್‌ಗೆ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿಯ ಕಾರ್ಯಕ್ರಮ ರಾಜ್ಯವಷ್ಟೇ ಅಲ್ಲ, ದೇಶಾದ್ಯಂತ ಗಮನ ಸೆಳೆಯುತ್ತಿದ್ದು, ಸಂಪೂರ್ಣ ಯಶಸ್ವಿಯಾಗಲಿದೆ ಎಂದು ಹೇಳಿದರು.
ಸಭೆಯಲ್ಲಿ ಖ್ಯಾತ ಓಟಗಾರರಾದ ರಾಜಿಂದರ್ ಕೌರ್, ಶೋಭಾ ನರೇಂದ್ರಕುಮಾರ ನಾಗಶೆಟ್ಟಿ ಕೂಡ ಪಾಲ್ಗೊಂಡಿದ್ದರು. ಸಿ.ಆರ್.ಡಿ.ಎಸ್. ಫೌಂಡೇಶನ್ ಸಂಸ್ಥಾಪಕ ನಿರ್ದೇಶಕಿಯೂ ಆಗಿರುವ ಶೋಭಾ ನರೇಂದ್ರಕುಮಾರ ನಾಗಶೆಟ್ಟಿ ಮಾತನಾಡಿ, ರಾಷ್ಟ್ರಮತ್ತು ಅಂತಾರಾಷ್ಟ್ರೀಯ ಓಟಗಾರರು ಈ ವೃಕ್ಷಥಾನ್ ಹೆರಿಟೇಜ್ ರನ್- 2023 ನಲ್ಲಿ ಪಾಲ್ಗೊಳ್ಳುತ್ತಿರುವುದು ಈ ಬಾರಿಯ ಕಾರ್ಯಕ್ರಮದ ಜನಪ್ರೀಯತೆಗೆ ಸಾಕ್ಷಿಯಾಗಿದೆ. ಇದರಿಂದ ಮುಂಬರುವ ದಿನಗಳಲ್ಲಿ ವಿಜಯಪುರ ಜಿಲ್ಲೆಯ ಜನತೆ ಮ್ಯಾರಾಥಾನ್‌ಗಳಲ್ಲಿ ಪಾಲ್ಗೊಳ್ಳಲು ಸ್ಫೂರ್ತಿಯಾಗಿದೆ ಎಂದು ಹೇಳಿದರು.ಅಂತಾರಾಷ್ಟ್ರೀಯ ಖ್ಯಾತಿಯ ಅಲ್ಟ್ರಾ ಮ್ಯಾರಾಥಾನ್ ಕ್ರೀಡಾಪಟು 53 ವರ್ಷದ ರಾಜಿಂದರ್ ಕೌರ್ ಮಾತನಾಡಿ, ನಾನು ಈ ಮುಂಚೆ ದೇಶ ಮತ್ತು ವಿದೇಶಗಳಲ್ಲಿ ಹಲವಾರು ಓಟಗಳಲ್ಲಿ ಪಾಲ್ಗೊಂಡಿದ್ದೇನೆ. ಆದರೆ, ವೃಕ್ಷಥಾನ್ ಹೆರಿಟೇಜ್ ರನ್ ನಲ್ಲಿ ಪಾಲ್ಗೊಳ್ಳಲು ಸಾವಿರಾರು ಜನ ಹೆಸರು ನೋಂದಾಯಿಸಿರುವುದು ಅಚ್ಚರಿ ಹಾಗೂ ಸಂತಸ ಉಂಟುಮಾಡಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನೋಂದಣಿ ಸಮಿತಿ ಉಸ್ತುವಾರಿ ಡಾ.ಮಲ್ಲಿಕಾರ್ಜುನ ಯಲಗೊಂಡ ಮತ್ತು ವೀರೇಂದ್ರ ಗುಚ್ಚೆಟ್ಟಿ ಮಾತನಾಡಿ, ಈವರೆಗೆ 7000ಕ್ಕೂ ಹೆಚ್ಚು ಜನ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಸಂಖ್ಯೆ 8000 ದಾಟುವ ನಿರೀಕ್ಷೆ ಇದೆ ಎಂದು ಮಾಹಿತಿ ನೀಡಿದರು.ಉದ್ಯಮಿ ಚಂದ್ರಕಾಂತ ಶೆಟ್ಟಿ ಮಾತನಾಡಿ, ಕಾರ್ಯಕ್ರಮ ಆಯೋಜನೆ ಕುರಿತು ಕೈಗೊಳ್ಳಲಾದ ವ್ಯವಸ್ಥೆಗಳ ಕುರಿತು ಮಾಹಿತಿ ನೀಡಿದರು.
ಸಂಚಾಲಕ ಮುರುಗೇಶ ಪಟ್ಟಣಶೆಟ್ಟಿ ಮಾತನಾಡಿ, ಈಗಾಗಲೆ ವೃಕ್ಷಥಾನ್ ಹೆರಿಟೇಜ್ ರನ್ ಕುರಿತು ಶಾಲಾ ಕಾಲೇಜುಗಳು, ಸಂಘ-ಸಂಸ್ಥೆಗಳಿಗೆ ತೆರಳಿ ಜಾಗೃತಿ ಮೂಡಿಸಲಾಗಿದೆ. ಇದಕ್ಕೆ ಪ್ರತಿಯಾಗಿ ಸಾವಿರಾರು ವಿದ್ಯಾರ್ಥಿಗಳು ಮತ್ತು ಯುವಕರು ಹೆಸರು ನೋಂದಾಯಿಸಿದ್ದಾರೆ. ರೂಟ್, ಹೈಡ್ರೇಶನ್ ಪಾಯಿಂಟ್ಸ್, ಕ್ರೀಡಾಪಟುಗಳು ಓಡುವ ಪ್ರಮುಖ ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಲಾಗಿದೆ. ನಗರದ ಎಲ್ಲರೂ ಈ ಕ್ರೀಡಾಕೂಟಕ್ಕೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.ನಾವೇದ ನಾಗಠಾಣ, ಕೋರ್ ಕಮೀಟಿಯ ಮುಖಂಡರಾದ ಸಂಕೇತ ಬಗಲಿ, ಶಿವನಗೌಡ ಪಾಟೀಲ, ಸಂಗಮೇಶ ಬಬಲೇಶ್ವರ, ಶಾಂತೇಶ ಕಳಸಗೊಂಡ, ಸಂತೋಷ ಔರಸಂಗ, ಶಿವಾನಂದ ಯರನಾಳ, ಅಮೀತ ಬಿರಾದಾರ, ನಾವೀದ ನಾಗಠಾಣ, ಸೋಮು ಮಠ, ಆಕಾಶ ಚೌಕಿಮಠ, ಮಹೇಶ ವಿ. ಶಟಗಾರ, ಜಗದೀಶ ಪಾಟೀಲ ಇತರರು ಉಪಸ್ಥಿತರಿದ್ದರು.
1 ಮತ್ತು 2 ವೃಕ್ಷಥಾನ್ ಪೂರ್ವಸಿದ್ಧತಾ ಸಭೆ: ವಿಜಯಪುರದಲ್ಲಿ ಡಿಸೆಂಬರ್ 24ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-ಪೂರ್ವ ಸಿದ್ಧತೆಗಳ ಕುರಿತು ಕೋರ್ ಕಮಿಟಿ ಸಭೆ ಡಾ.ಮಹಾಂತೇಶ ಬಿರಾದಾರ ನೇತೃತ್ವದಲ್ಲಿ ನಡೆಯಿತು. ಸಂಗಮೇಶ ಬಬಲೇಶ್ವರ, ಚಂದ್ರಕಾಂತ ಶೆಟ್ಟಿ, ಶಿವನಗೌಡ ಪಾಟೀಲ, ಶೋಭಾ ನರೇಂದ್ರಕುಮಾರ ನಾಗಶೆಟ್ಟಿ, ರಾಜಿಂದರ್ ಕೌರ್ ಇತರರು ಉಪಸ್ಥಿತರಿದ್ದರು.