ಕನ್ನಡಪ್ರಭ ವಾರ್ತೆ ಶಿಕಾರಿಪುರ
ಇದೇ ಫೆ.27ರ ಶುಕ್ರವಾರ ಬಿ.ಎಸ್ ಯಡಿಯೂರಪ್ಪನವರ ಅಭಿಮಾನಿ ಬಳಗದ ವತಿಯಿಂದ ದಣಿವರಿಯದ ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರ 84ನೇ ಜನ್ಮ ದಿನಾಚರಣೆ ಹಮ್ಮಿಕೊಳ್ಳಲಾಗಿದ್ದು ಅತ್ಯಂತ ಸಂಭ್ರಮ ಸಡಗರದ ಕಾರ್ಯಕ್ರಮದಲ್ಲಿ ತಾಲೂಕಿನ ಸರ್ವ ಸಮುದಾಯದ ಮುಖಂಡರಿಗೆ ಗೌರವ ಸಮರ್ಪಣೆ ಮಾಡಲಾಗುವುದು ಎಂದು ಅಭಿಮಾನಿ ಬಳಗದ ಸಂಚಾಲಕ, ಎಂಎಡಿಬಿ ಮಾಜಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ತಿಳಿಸಿದರು.ಪಟ್ಟಣದ ಸುದ್ದಿಮನೆಯಲ್ಲಿ ಮಂಗಳವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಸತತ 50 ವರ್ಷಗಳ ಕಾಲ ಸುದೀರ್ಘ ಕಾಲ ಸಾರ್ವಜನಿಕ ಕ್ಷೇತ್ರದಲ್ಲಿ ಜನಸಾಮಾನ್ಯರು, ರೈತರು, ಯುವಕರು, ಮಹಿಳೆಯರ ಸಹಿತ ಎಲ್ಲರ ಸಮಸ್ಯೆಗೆ ಹೋರಾಟದ ಮೂಲಕ ನ್ಯಾಯ ದೊರಕಿಸಲು ಶ್ರಮಿಸಿದ ಯಡಿಯೂರಪ್ಪನವರು ಶಾಸಕ,ವಿಪಕ್ಷ ನಾಯಕ, ಉಪಮುಖ್ಯಮಂತ್ರಿ ಸಹಿತ 4 ಬಾರಿ ಮುಖ್ಯಮಂತ್ರಿಯಾಗಿ ದಕ್ಷಿಣ ಭಾರತದಲ್ಲಿ ಪಕ್ಷದ ಸದೃಡ ಬೆಳವಣಿಗೆಗೆ ಅಪಾರವಾಗಿ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಅತ್ಯಂತ ಅಪರೂಪದ ಜನನನಾಯಕನ 50 ವರ್ಷದ ಸಾರ್ಥಕ ಸಂಭ್ರಮಕ್ಕೆ ತಾಲೂಕಿನ ಅಭಿಮಾನಿಗಳು, ಕಾರ್ಯಕರ್ತರು ಇದೇ 27 ರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲು ಎಲ್ಲ ರೀತಿಯ ಸಿದ್ದತೆಯನ್ನು ಕೈಗೊಂಡಿದ್ದಾರೆ. ಶುಕ್ರವಾರ ಬೆಳಿಗ್ಗೆ 9ಕ್ಕೆ ಯಡಿಯೂರಪ್ಪನವರ ಸಮಕ್ಷಮದಲ್ಲಿ ಕ್ಷೇತ್ರ ದೇವತೆ ಶ್ರೀ ಹುಚ್ಚುರಾಯಸ್ವಾಮಿ ದೇವಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿದೆ ಎಂದರು.ಸಂಜೆ 4ಕ್ಕೆ ಕುಮದ್ವತಿ ಕಾಲೇಜಿನ ಏಕಲವ್ಯ ಕ್ರೀಡಾಂಗಣದ ಬೃಹತ್ ವೇದಿಕೆಯಲ್ಲಿ ಆನಂದಪುರ ಮುರುಘಾಮಠದ ಮನಿಪ್ರ ಮುರುಘರಾಜೇಂದ್ರ ಸ್ವಾಮೀಜಿ ಸಹಿತ ತಾಲೂಕಿನ ಎಲ್ಲ ಹರಗುರುಚರಮೂರ್ತಿಗಳ ದಿವ್ಯ ಸಾನಿದ್ಯದಲ್ಲಿ ತಾಲೂಕಿನ ಎಲ್ಲ ಸಮುದಾಯದ ಹಿರಿಯರು, ಅಧ್ಯಕ್ಷರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿದ್ದು ಕೇಂದ್ರ ಸಚಿವ ಪ್ರಹ್ಲಾದ ಜೋಷಿ ಅಭಿನಂದನಾ ಭಾಷಣ ಮಾಡಲಿದ್ದಾರೆ. ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಸಹಿತ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ನಂತರದಲ್ಲಿ ಪ್ರಸಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ತಂಡದಿಂದ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ನಿರೂಪಕಿ ಅನುಶ್ರೀ, ಗಾಯಕಿ ಮಂಗ್ಲಿ, ಹನುಮಂತ ನಾಯ್ಕ, ಗಿಲ್ಲಿ ನಟರಾಜ್, ಕಾವ್ಯ, ವ್ಯಾಸರಾಜ್, ನಿಶಾನ್ ರೈ, ಸುನೀಲ್, ಜಸ್ಮರಣ್ ಸಿಂಗ್, ಐಶ್ವರ್ಯ, ಪೃಥ್ವಿಭಟ್ ಮತ್ತಿತರ ಹೆಸರಾಂತ ಕಲಾವಿದರಿಂದ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಮಾಹಿತಿ ಹಕ್ಕು ಆಯೋಗದ ಮಾಜಿ ಆಯುಕ್ತ ರಾಮಾನಾಯ್ಕ ಮುಖಂಡ ವಸಂತಗೌಡ, ಬಸವರಾಜ್ ದೂದಿಹಳ್ಳಿ, ಶಿವಪ್ಪ, ಮಂಜುನಾಥ್ ಸಿಂಗ್,ಸುಧೀರ್, ಯೋಗೇಶ್ ಮಡ್ಡಿ, ಎಸ್.ಎಸ್ ರಾಘವೇಂದ್ರ, ಸುರೇಶ್ ಮತ್ತಿತರರು ಹಾಜರಿದ್ದರು.