ಇಂದಿನಿಂದ ಪೂರ್ವಸಿದ್ಧತೆ: ಮೇ 31ರಂದು ಕೊಡಗಿನಲ್ಲಿ ಶಾಲೆಗಳ ಪ್ರಾರಂಭೋತ್ಸವ

| Published : May 29 2024, 01:02 AM IST

ಇಂದಿನಿಂದ ಪೂರ್ವಸಿದ್ಧತೆ: ಮೇ 31ರಂದು ಕೊಡಗಿನಲ್ಲಿ ಶಾಲೆಗಳ ಪ್ರಾರಂಭೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ಕೊಡಗಿನಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಪುನರ್ ಆರಂಭಿಸುವ ಸಂಬಂಧ ಅಗತ್ಯ ಪೂರ್ವ ಸಿದ್ಧತೆ ಮೇ 29 ರಂದು ನಡೆಯಲಿದೆ. 30ರಂದು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪೋಷಕರ ಜೊತೆ ಪೂರ್ವಭಾವಿ ಸಭೆಯು ಆಯಾಯ ಶಾಲೆಗಳಲ್ಲಿ ನಡೆಯಲಿದೆ. 31 ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬುಧವಾರ ಪುನರಾರಂಭಗೊಳ್ಳಲಿದ್ದು, 31ರಂದು ಜಿಲ್ಲೆಯ ಎಲ್ಲಾ ಶಾಲೆಗಳಲ್ಲಿ ಪ್ರಾರಂಭೋತ್ಸವ ಜರುಗಲಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶಿಕ್ಷಣಾಧಿಕಾರಿ ಹಾಗೂ ನೋಡಲ್ ಅಧಿಕಾರಿ ಎಂ.ಮಹದೇವಸ್ವಾಮಿ ತಿಳಿಸಿದ್ದಾರೆ.

ಪ್ರಸಕ್ತ (2024-25) ನೇ ಶೈಕ್ಷಣಿಕ ಸಾಲಿನಲ್ಲಿ ಶಾಲೆಗಳನ್ನು ಪುನರ್ ಆರಂಭಿಸುವ ಸಂಬಂಧ ಅಗತ್ಯ ಪೂರ್ವ ಸಿದ್ಧತೆ 29 ರಂದು ನಡೆಯಲಿದೆ. ಶಾಲಾ ಆವರಣ, ಶಾಲಾ ಕೊಠಡಿ ಹಾಗೂ ಶೌಚಾಲಯ ಸ್ವಚ್ಚತೆ, ಕುಡಿಯುವ ನೀರು, ಸಂಪು, ಟ್ಯಾಂಕ್ ಸ್ವಚ್ಛತೆ, ಅಡುಗೆ ಮನೆ ಪಾತ್ರೆಗಳು, ಆಹಾರ ಧಾನ್ಯಗಳ ವ್ಯವಸ್ಥೆ, ಶಾಲಾ ವೇಳಾಪಟ್ಟಿ, ತರಗತಿ ವೇಳಾಪಟ್ಟಿ, ಶಿಕ್ಷಕರಿಗೆ ವಿಷಯ ಮತ್ತು ತರಗತಿ ಹಂಚಿಕೆ ಮತ್ತಿತರ ಕಾರ್ಯಗಳು ನಡೆಯಲಿವೆ ಎಂದು ವಿವರಿಸಿದರು.

30ರಂದು ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಪೋಷಕರ ಜೊತೆ ಪೂರ್ವಭಾವಿ ಸಭೆಯು ಆಯಾಯ ಶಾಲೆಗಳಲ್ಲಿ ನಡೆಯಲಿದೆ. 31 ರಂದು ಶಾಲಾ ಪ್ರಾರಂಭೋತ್ಸವ ನಡೆಯಲಿದೆ ಎಂದು ಎಂ.ಮಹದೇವಸ್ವಾಮಿ ತಿಳಿಸಿದರು. ತಳಿರು ತೋರಣ, ಹೂವಿನ ಸ್ವಾಗತ:

31 ರಂದು ಶಾಲೆಗಳಿಗೆ ತಳಿರು ತೋರಣ ಕಟ್ಟಿ, ಗುಲಾಬಿ ಹೂವು ನೀಡಿ, ಸಿಹಿ ಹಂಚುವ ಮೂಲಕ ಮಕ್ಕಳನ್ನು ಬರಮಾಡಿಕೊಳ್ಳಲಾಗುತ್ತದೆ. ಹಾಗೆಯೇ ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಗುತ್ತದೆ. ಪಾಠ ಪ್ರವಚನ ಪ್ರಾರಂಭಿಸಿ ಬಿಸಿಯೂಟದೊಂದಿಗೆ ಕಾರ್ಯಕ್ರಮ ಶುರುವಾಗಲಿದೆ ಎಂದು ವಿವರಿಸಿದರು.

ಶಾಲೆಯ ಮಕ್ಕಳು ಶಾಲೆಗೆ ದಾಖಲಾಗುವ ಸಂಬಂಧ ಎಸ್‌ಎಟಿಎಸ್ ತಂತ್ರಾಂಶದಲ್ಲಿ ಪೂರ್ಣ ಪ್ರಮಾಣದಲ್ಲಿ ಮಕ್ಕಳಿಗೆ ಪ್ರಗತಿ ಪತ್ರ ಹಾಗೂ ಬೇರೆ ಶಾಲೆಗೆ ವರ್ಗಾವಣೆ ಪತ್ರಗಳನ್ನು ಕೋರಿಕೆ ಮೇರೆಗೆ ವರ್ಗಾಯಿಸುವುದು, ಪ್ರಸಕ್ತ ಸಾಲಿಗೆ 1 ನೇ ತರಗತಿಗೆ ದಾಖಲಾಗುವ ಮಕ್ಕಳ ಮಾಹಿತಿಯನ್ನು ಎಸ್‌ಎಟಿಎಸ್ ತಂತ್ರಾಂಶದಲ್ಲಿ ನಮೂದಿಸಲಾಗುತ್ತಿದೆ (ಮಕ್ಕಳ ದಾಖಲಾತಿ) ಎಂದು ಮಾಹಿತಿ ನೀಡಿದರು.

ವಿದ್ಯಾ ಪ್ರವೇಶ ಕಾರ್ಯಕ್ರಮ:

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ನಿಗದಿಪಡಿಸಿರುವ ವೇಳಾಪಟ್ಟಿಯಂತೆ ತರಗತಿಗಳು ನಡೆಯಲಿವೆ. 31ರಿಂದ ಮೂರನೇ ತರಗತಿ ಮಕ್ಕಳಿಗೆ 40 ದಿನಗಳ ವಿದ್ಯಾ ಪ್ರವೇಶ ಕಾರ್ಯಕ್ರಮದ ಮಾರ್ಗಸೂಚಿ ಮತ್ತು ವೇಳಾಪಟ್ಟಿಯಂತೆ ತರಗತಿ ನಡೆಸಲಾಗುತ್ತದೆ. ಸೇತುಬಂಧ ಚಟುವಟಿಕೆ ಮತ್ತು ಮೂಲ ಕಲಿಕಾಂಶ ಆಧಾರಿತ ಕಲಿಕೆ ಅನುಷ್ಠಾನಗೊಳಿಸಿ ಮಕ್ಕಳಲ್ಲಿ ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾ ಜ್ಞಾನವನ್ನು ಅಭಿವೃದ್ಧಿಪಡಿಸಿ ಕಲಿಕಾ ಅಂತರ ನೀಗಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಎಲ್ಲಾ ಸಿಆರ್‌ಪಿ, ಡಿಆರ್‌ಪಿ, ಬಿಐಇಆರ್‌ಟಿ ಹಾಗೂ ಇಸಿಒಗಳು ತಮ್ಮ ವ್ಯಾಪ್ತಿಯ ಶಾಲೆಗಳಿಗೆ ಭೇಟಿ ನೀಡಿ ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಗಮನಹರಿಸುವುದು, ಶಾಲೆಯಲ್ಲಿ ಮಾಡಿಕೊಂಡಿರುವ ಪೂರ್ವ ಸಿದ್ಧತೆಗಳನ್ನು ಖಾತರಿಪಡಿಸಿಕೊಳ್ಳಲು ತಿಳಿಸಲಾಗಿದೆ ಎಂದು ಹೇಳಿದರು.

ದಾಖಲಾತಿ ಆಂದೋಲನ:

29ರಿಂದ ದಾಖಲಾತಿ ಆಂದೋಲನ ನಡೆಸಿ ಮನೆ ಮನೆಗೆ ಭೇಟಿ ನೀಡಿ ನಿಗದಿತ ವಯೋಮಾನದ ಮಕ್ಕಳನ್ನು ಶಾಲೆಗೆ ಬರ ಮಾಡಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಕ್ರಮವಹಿಸಲಾಗುತ್ತದೆ ಎಂದರು.

ಮಳೆಗಾಲ ಆರಂಭ ಆಗಿರುವುದರಿಂದ ಶಾಲಾ ಕೊಠಡಿ ಸುರಕ್ಷತೆ ಬಗ್ಗೆ ಆದ್ಯ ಗಮನಹರಿಸುವುದು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಕಾಲ ಕಾಲಕ್ಕೆ ಹೊರಡಿಸುವ ಮಾರ್ಗಸೂಚಿ, ಸುತ್ತೋಲೆ, ಆದೇಶವನ್ನು ಕಡ್ಡಾಯವಾಗಿ ಪಾಲಿಸುವಂತೆ ಮಾಹಿತಿ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲಿ ಕಳೆದ ವರ್ಷ(2023-24 ನೇ ಸಾಲಿನಲ್ಲಿ ಸರ್ಕಾರಿ ಅನುದಾನಿತ, ಅನುದಾನ ರಹಿತ) 1 ರಿಂದ 10ನೇ ತರಗತಿವರೆಗೆ 72,160 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು.

ಪೂರಕ ಪರೀಕ್ಷೆ-2: ಜೂ.14 ರಿಂದ ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ-2 ನಡೆಯಲಿದೆ ಎಂದು ಎಂ.ಮಹದೇವಸ್ವಾಮಿ ಹೇಳಿದ್ದಾರೆ.

ಸಿ ಮತ್ತು ಸಿ+ ಪಡೆದಿರುವ 60 ವಿದ್ಯಾರ್ಥಿಗಳು, ಪುನರಾವರ್ತಿತ 629 ಮತ್ತು ಖಾಸಗಿಯಾಗಿ 15 ಒಟ್ಟು 704 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ-2 ಬರೆಯಲಿದ್ದಾರೆ. ಮಡಿಕೇರಿ, ಸೋಮವಾರಪೇಟೆ ಮತ್ತು ವಿರಾಜಪೇಟೆಯ ಜೂನಿಯರ್ ಕಾಲೇಜುಗಳಲ್ಲಿ ಪರೀಕ್ಷೆ ನಡೆಯಲಿದೆ ಎಂದು ಹೇಳಿದರು.

ಎಸ್ಸೆಸ್ಸೆಲ್ಸಿ ಪೂರಕ ಪರೀಕ್ಷೆ-2 ಬರೆಯುವ ವಿದ್ಯಾರ್ಥಿಗಳಿಗೆ ‘ವಿಶೇಷ ಪರಿಹಾರ ಬೋಧನೆ’ ತರಗತಿಗಳು ಮೇ 29 ರಿಂದ ಜೂನ್ 13 ರವರೆಗೆ ಆಯಾಯ ಶಾಲೆಗಳಲ್ಲಿ ನಡೆಯಲಿದೆ ಎಂದರು.

ಕೊಡಗು ಜಿಲ್ಲೆ ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ರಾಜ್ಯದಲ್ಲಿಯೇ 4 ನೇ ಸ್ಥಾನ ಪಡೆದಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನದಲ್ಲಿರುವುದು ವಿಶೇಷವಾಗಿದೆ ಎಂದು ಎಂ.ಮಹದೇವಸ್ವಾಮಿ ವಿವರಿಸಿದರು.