ಫೆ. 7ರಂದು ಧರಣಿ ಸ್ಥಳದಲ್ಲಿ ಜೀವ ರಕ್ಷಣೆಗಾಗಿ ಆಗ್ರಹಿಸಿ ಶ್ರೀ ಗವಿಸಿದ್ದೇಶ್ವರ ಮಠದಿಂದ ಬಾಧಿತ ಜನರ ಪರಿಸರ ಉಳಿಸಿ, ಜೀವ ಉಳಿಸಿ ಮೆರವಣಿಗೆ ನಡೆಸಲಾಗುತ್ತದೆ ಎಂದು ಹೋರಾಟದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.
ಕೊಪ್ಪಳ: ಬಲ್ಡೋಟಾ ಸೇರಿದಂತೆ ಮುಂತಾದ ಕಾರ್ಖಾನೆಗಳ ವಿಸ್ತರಣೆ ವಿರೋಧಿಸಿ ನಗರದ ನಗರಸಭೆ ಮುಂದೆ ನಡೆದಿರುವ ಹೋರಾಟ ಇದೇ ಫೆ. 7ರಂದು 100 ದಿನ ತಲುಪುಲಿದೆ. ಅಂದು ಧರಣಿ ಸ್ಥಳದಲ್ಲಿ ನಗರದ ಒಂದೂವರೆ ಲಕ್ಷ ಜನರ ಹಾಗೂ 20 ಬಾಧಿತ ಹಳ್ಳಿಯ 50 ಸಾವಿರ ಜನರ ಆರೋಗ್ಯ, ಜೀವ ರಕ್ಷಣೆಗಾಗಿ ಆಗ್ರಹಿಸಿ ಶ್ರೀ ಗವಿಸಿದ್ದೇಶ್ವರ ಮಠದಿಂದ ಬಾಧಿತ ಜನರ ಪರಿಸರ ಉಳಿಸಿ, ಜೀವ ಉಳಿಸಿ ಮೆರವಣಿಗೆ ನಡೆಸಲಾಗುತ್ತದೆ ಎಂದು ಹೋರಾಟದ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.
ಹೋರಾಟದ ನೂರನೇ ದಿನದ ಹಿನ್ನೆಲೆಯಲ್ಲಿ ಅಂದು ಬೆಳಗ್ಗೆ 8ಕ್ಕೆ ನಗರದ ಶ್ರೀಗವಿಮಠದ ಪ್ರಸಾದ ನಿಲಯದಲ್ಲಿ ಉಪಹಾರ ವ್ಯವಸ್ಥೆ ಇರುತ್ತದೆ. 10ಕ್ಕೆ ಮೆರವಣಿಗೆ ಆರಂಭಗೊಳ್ಳಲಿದ್ದು, ಸಾಣೇಹಳ್ಳಿ ಶ್ರೀ ಶಿವಾಚಾರ್ಯ ಸ್ವಾಮೀಜಿ, ಗದುಗಿನ ತೋಂಟದಾರ್ಯ ಮಠದ ಶ್ರೀ ಸಿದ್ದರಾಮ ಸ್ವಾಮೀಜಿ, ಧಾರವಾಡದ ಸಾಹಿತಿ ರಂಜಾನ್ ದರ್ಗಾ, ರಂಗ ನಿರ್ದೇಶಕ ಸೂರ್ಯಕಾಂತ ಗುಣಕಿಮಠ ಅವರು ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ.ಗವಿಮಠದ ಬಳಿಯಿಂದ ಹೋರಾಟದ ಮೆರವಣಿಗೆ ಆರಂಭಗೊಂಡು ಗಡಿಯಾರ ಕಂಬ ಸರ್ಕಲ್, ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ನಗರಸಭೆ ಮುಂದಿನ ಧರಣಿ ಸ್ಥಳಕ್ಕೆ ಬಂದು ಸಮಾವೇಶಗೊಳ್ಳುತ್ತದೆ. ಈ ಸಮಾವೇಶದಲ್ಲಿ ಕೊಪ್ಪಳ ಜಿಲ್ಲೆಯ ಹಲವಾರು ಮಠದ ಸ್ವಾಮಿಗಳು ಪಾಲ್ಗೊಂಡು ಮಾತನಾಡುವರು. ಅಲ್ಲದೇ ಸಾಣೇಹಳ್ಳಿ ಶ್ರೀಗಳು, ಧಾರವಾಡದ ಸಾಹಿತಿ ಅಸ್ಲಂ ದರ್ಗಾ ಬಾಧಿತ ಹಳ್ಳಿಗಳಿಗೆ ಭೇಟಿ ನೀಡಿ ಅಲ್ಲಿನ ಜನರೊಂದಿಗೆ ಪರಿಸ್ಥಿತಿ ಕುರಿತು ಸಂವಾದ ನಡೆಸುವರು. ಬಾಧಿತ ಹಳ್ಳಿಯ ಮತ್ತು ನಗರದ ನಿವಾಸಿಗಳು ಈ ಮೆರವಣಿಗೆಯಲ್ಲಿ ಭಾಗವಹಿಸುವಂತೆ ಅವರು ವಿನಂತಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಸೋಮವಾರ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಮಾತನಾಡಿ, ಅಂದೇ ಜಂಟಿ ಕ್ರಿಯಾ ವೇದಿಕೆ ಮತ್ತು ರೆಡ್ ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಧರಣಿ ಸ್ಥಳದಲ್ಲಿ ರಕ್ತದಾನ ಶಿಬಿರ ನಡೆಯುತ್ತಿದೆ. ಹೆಚ್ಚು ಹೆಚ್ಚು ಯುವಕರು, ವಿದ್ಯಾರ್ಥಿಗಳು ಈ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ, ನ್ಯಾಯಾಲಯಗಳಿಗೆ ರಕ್ತದಲ್ಲಿ ಕಾರ್ಖಾನೆ ವಿರೋಧಿ ಪತ್ರ ಬರೆಯಲಾಗುವುದು ಎಂದರು.ಧರಣಿಯಲ್ಲಿ ಸಾಹಿತಿ ಎ.ಎಂ. ಮದರಿ, ಕವಯಿತ್ರಿ ಪುಷ್ಪಲತಾ ಏಳುಭಾವಿ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಎಸ್.ಬಿ. ರಾಜೂರು, ಮಹಾಂತೇಶ ಮಲ್ಲನಗೌಡರ, ಜಿ.ಬಿ. ಪಾಟೀಲ್, ಬಿ.ಜಿ. ಕರಿಗಾರ, ಸುಭಾನಸಾಬ್ ನೀರಲಗಿ, ಗಾಯಕಿ ಈರಮ್ಮ ಉಂಡಿ, ರಂಗ ನಿರ್ದೇಶಕ ಶರಣು ಶೆಟ್ಟರ್, ಗಂಗಮ್ಮ ಮುಂಡರಗಿ, ಸಂಜೀವಮ್ಮ ಕುಕನೂರು, ಶಂಭುಲಿಂಗಪ್ಪ ಹರಗೇರಿ, ಜಿ.ಎಸ್. ಕಡೇಮನಿ, ಎಸ್. ಮಹಾದೇವಪ್ಪ ಮಾವಿನಮಡು, ಮೂಕಪ್ಪ ಮೇಸ್ತ್ರಿ ಬಸಾಪುರ, ರಾಜಶೇಖರ ಏಳುಬಾವಿ, ಪಂಪಣ್ಣ ಚಿಂತಪಲ್ಲಿ, ಶಿವಸಂಗಪ್ಪ ವಣಗೇರಿ, ಶಿವಪ್ಪ ಜಲ್ಲಿ, ಮಖಬೂಲ್ ರಾಯಚೂರು, ಮಹಾಂತೇಶ ಹಟ್ಟಿ, ಮಹಾಂತೇಶ ಕೊತಬಾಳ ಸೇರಿದಂತೆ ಮೊದಲಾದವರು ಪಾಲ್ಗೊಂಡಿದ್ದರು.