ಸಾರ್ವಜನಿಕರು ಕೂಡ ಪರಿಸರಕ್ಕೆ ಹಾನಿಯಾಗದ ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸಲು ಆಸಕ್ತಿ
ಮಂಜುನಾಥ ಕೆ.ಎಂ. ಬಳ್ಳಾರಿ
ವಿಘ್ನ ನಿವಾರಕ ಗಣಪನ ಆಗಮನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಜಿಲ್ಲಾದ್ಯಂತ ಗಣೇಶೋತ್ಸವದ ಸಿದ್ಧತೆ ಭರದಿಂದ ಸಾಗಿವೆ.ಮನೆ-ಮನೆಗಳಲ್ಲಿ ಹಬ್ಬದ ತಯಾರಿ ಆರಂಭಗೊಂಡಿದ್ದರೆ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಬೃಹತ್ ಮೂರ್ತಿಗಳ ಪ್ರತಿಷ್ಠಾಪನೆಗೆ ಸಿದ್ಧತೆ ನಡೆಸುತ್ತಿವೆ. ಮಾರುಕಟ್ಟೆಯಲ್ಲೂ ಗಣೇಶನ ವಿವಿಧ ರೂಪ, ಆಕಾರ, ವಿನ್ಯಾಸದ ಮೂರ್ತಿಗಳು ಮಾರಾಟಕ್ಕೆ ಸಜ್ಜಾಗುತ್ತಿವೆ.
ಆದರೆ, ಪರಿಸರ ಸ್ನೇಹಿ ಗಣೇಶೋತ್ಸವಕ್ಕೆ ಸರ್ಕಾರ ನೀಡಿರುವ ಒತ್ತು ಹಾಗೂ ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಮತ್ತು ರಾಸಾಯನಿಕಯುಕ್ತ ಬಣ್ಣಗಳ ಬಳಕೆಗೆ ಇರುವ ನಿರ್ಬಂಧದ ನಡುವೆಯೇ ಜಿಲ್ಲೆಯ ವಿವಿಧೆಡೆ ಪಿಒಪಿ ಗಣಪನ ಮೂರ್ತಿಗಳ ತಯಾರಿ ನಡೆಯುತ್ತಿರುವುದು ಕಂಡು ಬರುತ್ತಿದೆ.ಕಳೆದ ವರ್ಷ ಪರಿಸರ ಪೂರಕ ಮಣ್ಣಿನ ಗಣಪನ ಮೂರ್ತಿಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗಿತ್ತು. ಸಾರ್ವಜನಿಕರು ಕೂಡ ಪರಿಸರಕ್ಕೆ ಹಾನಿಯಾಗದ ಮಣ್ಣಿನ ಮೂರ್ತಿಗಳನ್ನೇ ಪ್ರತಿಷ್ಠಾಪಿಸಲು ಆಸಕ್ತಿ ತೋರಿದ್ದರು. ಆದರೆ, ಬೇಡಿಕೆಗೆ ತಕ್ಕಷ್ಟು ಮಣ್ಣಿನ ಮೂರ್ತಿ ಪೂರೈಸಲು ಸಾಧ್ಯವಾಗುತ್ತಿಲ್ಲ ಎಂಬ ಕಾರಣ ಮುಂದಿಟ್ಟುಕೊಂಡಿರುವ ಕೆಲವು ಕಲಾವಿದರು ಪಿಒಪಿ ಮೂರ್ತಿಗಳ ತಯಾರಿಕೆಗೆ ಮುಂದಾಗಿದ್ದಾರೆ. ಇದರಿಂದ ಸರ್ಕಾರದ ನಿಯಮ ಕಾಗದದಲ್ಲಷ್ಟೇ ಉಳಿದಂತಾಗಿದೆ.
ನಾಲ್ಕೈದು ತಿಂಗಳಿನಿಂದ ತಯಾರಿ: ಗಣೇಶೋತ್ಸವಕ್ಕೆ ಇನ್ನೂ ಕೆಲವೇ ದಿನಗಳು ಬಾಕಿ ಇರುವುದರಿಂದ ಮೂರ್ತಿ ತಯಾರಕರು ಕಳೆದ ನಾಲ್ಕೈದು ತಿಂಗಳಿನಿಂದಲೇ ಕಾರ್ಯಪ್ರವೃತ್ತರಾಗಿದ್ದಾರೆ. ಮನೆಗಳಲ್ಲಿ ಪ್ರತಿಷ್ಠಾಪಿಸುವ ಪುಟ್ಟ ಗಣೇಶನ ಮೂರ್ತಿಗಳಿಂದ ಹಿಡಿದು ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಷ್ಠಾಪಿಸುವ ಬೃಹತ್ ಗಾತ್ರದ ಮೂರ್ತಿಗಳವರೆಗೆ ವಿವಿಧ ಮಾದರಿ ಸಿದ್ಧಪಡಿಸಲಾಗುತ್ತಿದೆ.ಗಣೇಶನ ವಿವಿಧ ಭಂಗಿ,ವಿನ್ಯಾಸ, ಅಲಂಕಾರ ಮತ್ತು ಬಣ್ಣಗಳಲ್ಲಿ ಮೂರ್ತಿಗಳನ್ನು ರೂಪಿಸಲಾಗುತ್ತಿದ್ದು, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಮೂರ್ತಿಗಳ ಗಾತ್ರ ಹಾಗೂ ಬೆಲೆಯಲ್ಲೂ ಸಾಕಷ್ಟು ವ್ಯತ್ಯಾಸವಿದೆ. ನಗರದಲ್ಲಿ ಸುಮಾರು ₹200ರಿಂದ ಆರಂಭವಾಗುವ ಪುಟ್ಟ ಗಣೇಶನ ಮೂರ್ತಿಗಳು ₹25 ಸಾವಿರದವರೆಗೂ ಮಾರಾಟಕ್ಕೆ ಸಿದ್ಧವಾಗಿವೆ. ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ಮಾತ್ರ ಇನ್ನೂ ದೊಡ್ಡ ಗಾತ್ರದ ಮೂರ್ತಿಗಳಿಗೆ ಬೇಡಿಕೆ ಸಲ್ಲಿಸುತ್ತಿರುವುದರಿಂದ ಅವುಗಳ ತಯಾರಿ ಪ್ರತ್ಯೇಕವಾಗಿ ನಡೆಯುತ್ತಿದೆ.
ಮಣ್ಣಿನ ಗಣಪನಿಗೆ ಬೇಡಿಕೆ: ಪರಿಸರ ಸಂರಕ್ಷಣೆಯ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿರುವ ಹಿನ್ನೆಲೆ ಮಣ್ಣಿನ ಗಣೇಶನಿಗೆ ಬೇಡಿಕೆ ಹೆಚ್ಚಿದೆ. ನೀರಿನಲ್ಲಿ ಸುಲಭವಾಗಿ ಕರಗುವ ಮಣ್ಣಿನ ಮೂರ್ತಿಗಳನ್ನು ಬಳಸುವುದರಿಂದ ವಿಸರ್ಜನೆ ವೇಳೆ ಜಲಮೂಲಗಳಿಗೆ ಹಾನಿಯಾಗುವುದಿಲ್ಲ ಎಂಬ ಅರಿವು ಜನರಲ್ಲಿ ಮೂಡಿದೆ. ಆದರೆ, ಮಣ್ಣಿನ ಗಣಪಗಿಂತಲೂ ಪಿಒಪಿ ಗಣಪಗಳೇ ಹೆಚ್ಚಿನ ಸಂಖ್ಯೆಯಲ್ಲಿ ತಯಾರಿಸುತ್ತಿರುವುದರಿಂದ ಅಗತ್ಯದಷ್ಟು ಗಣಪತಿ ಮೂರ್ತಿಗಳ ಲಭ್ಯತೆ ಕಷ್ಟವಾಗಲಿದೆ. ಮಣ್ಣಿನ ಮೂರ್ತಿಗಳ ತಯಾರಿಗೆ ಹೆಚ್ಚಿನ ಸಮಯ, ಶ್ರಮ ಹಾಗೂ ಕೌಶಲ್ಯ ಬೇಕಾಗುತ್ತದೆ. ಬೃಹತ್ ಗಾತ್ರದ ಮಣ್ಣಿನ ಮೂರ್ತಿ ತಯಾರಿಸಿ ಒಣಗಿಸುವುದು, ಸಾಗಣೆ ಮಾಡುವುದು ಹಾಗೂ ಸುರಕ್ಷಿತವಾಗಿ ವಿಸರ್ಜಿಸುವುದು ಸವಾಲಿನ ಕೆಲಸ. ಹೀಗಾಗಿ ಪಿಒಪಿ ಮೂರ್ತಿಗಳತ್ತ ಕೆಲ ಕಲಾವಿದರು ಮುಖ ಮಾಡಿರುವುದು ಕಂಡುಬರುತ್ತಿದೆ. ನಗರದ ಕುಂಬಾರ ಓಣಿ ಸೇರಿದಂತೆ ವಿವಿಧೆಡೆ ಗಣಪನ ಮೂರ್ತಿ ತಯಾರಿಸಲಾಗುತ್ತಿದೆ. ಇಲ್ಲಿನ ಕುಂಬಾರ ಓಣಿಯಲ್ಲಿ ಅನೇಕ ದಶಕಗಳಿಂದ ಕಲಾವಿದರು ಗಣಪಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದು ಇಲ್ಲಿನ ಮಣ್ಣಿನ ಹಾಗೂ ಪಿಒಪಿ ಗಣಪಗಳು ತಯಾರಿಸಲಾಗುತ್ತಿರುವುದು ಕಂಡು ಬಂತು.ಬರದ ಛಾಯೆಯಲ್ಲೂ ಸಡಗರ: ಈ ಬಾರಿ ಜಿಲ್ಲೆಯಲ್ಲಿ ಬರದ ಛಾಯೆ ಆವರಿಸಿದೆ. ಮಳೆ ಕೊರತೆ, ಕೃಷಿ ಚಟುವಟಿಕೆಗಳ ಮೇಲಿನ ಪರಿಣಾಮ ಹಾಗೂ ದಿನನಿತ್ಯದ ಆಹಾರೋತ್ಪನ್ನಗಳ ಬೆಲೆ ಏರಿಕೆ ಜನಸಾಮಾನ್ಯರ ಆರ್ಥಿಕ ಸ್ಥಿತಿಗೆ ಹೊಡೆತ ನೀಡಿದೆ. ಆಹಾರ ಪದಾರ್ಥಗಳ ಬೆಲೆ ದಿಢೀರ್ ಏರಿಕೆಯಾಗಿರುವ ಹಿನ್ನೆಲೆ ಹಬ್ಬದ ಖರ್ಚು ಕೂಡ ಹೆಚ್ಚಾಗುವ ಸಾಧ್ಯತೆಯಿದೆ.
ಬರದ ಪರಿಣಾಮ ಗ್ರಾಮೀಣ ಭಾಗದಲ್ಲಿ ಹಬ್ಬದ ಆಚರಣೆಯ ಮೇಲೆ ಕೊಂಚ ಪರಿಣಾಮ ಬೀರುವ ನಿರೀಕ್ಷೆಯಿದ್ದರೂ ನಗರ ಪ್ರದೇಶಗಳಲ್ಲಿ ಮಾತ್ರ ಗಣೇಶೋತ್ಸವದ ಸಿದ್ಧತೆ ಎಂದಿನಂತೆ ಜೋರಾಗಿವೆ. ವಿವಿಧ ಬಡಾವಣೆ, ಸಂಘ-ಸಂಸ್ಥೆ ಹಾಗೂ ಸಾರ್ವಜನಿಕ ಗಣೇಶೋತ್ಸವ ಸಮಿತಿ ಈಗಾಗಲೇ ಸಿದ್ಧತೆ ಆರಂಭಿಸಿವೆ. ಪೆಂಡಾಲ್ ನಿರ್ಮಾಣ, ವಿದ್ಯುತ್ ಅಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಸೇರಿದಂತೆ ವಿವಿಧ ಚಟುವಟಿಕೆ ಚುರುಕುಗೊಂಡಿವೆ. ಗಣೇಶೋತ್ಸವವು ಧಾರ್ಮಿಕ ಆಚರಣೆಯ ಜತೆಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಹಬ್ಬವಾಗಿಯೂ ರೂಪುಗೊಂಡಿದೆ. ಹೀಗಾಗಿ ಬರದ ಸಂಕಷ್ಟದ ನಡುವೆಯೂ ಜನರು ತಮ್ಮ ಶಕ್ತ್ಯಾನುಸಾರ ಹಬ್ಬ ಆಚರಿಸಲು ಸಿದ್ಧತೆ ನಡೆಸುತ್ತಿದ್ದಾರೆ.ಪರಿಸರ ಸ್ನೇಹಿ ಮಣ್ಣಿನ ಗಣೇಶನ ಬಳಕೆ, ನೈಸರ್ಗಿಕ ಬಣ್ಣಗಳ ಅಳವಡಿಕೆ, ಕೃತಕ ವಿಸರ್ಜನಾ ತೊಟ್ಟಿಗಳ ಬಳಕೆ ಹಾಗೂ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವ ಮೂಲಕ ಗಣೇಶೋತ್ಸವವನ್ನು ಪರಿಸರ ಪೂರಕವಾಗಿ ಆಚರಿಸುವ ಅಗತ್ಯವಿದೆ. ಭಕ್ತಿಯ ಜತೆಗೆ ಪರಿಸರ ಕಾಳಜಿ ಬೆಸೆದುಕೊಂಡಾಗ ಮಾತ್ರ ಗಣೇಶೋತ್ಸವದ ಸಾರ್ಥಕತೆ ಹೆಚ್ಚಲಿದೆ.