ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ಭರದ ಸಿದ್ಧತೆ

| Published : Feb 25 2025, 12:45 AM IST

ಸಾರಾಂಶ

ವಿಜಯನಗರ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ಸಿದ್ಧತೆ ನಡೆದಿದ್ದು, ಐದು ವೇದಿಕೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ.

28ರಂದು ಸಂಜೆ 6 ಗಂಟೆಗೆ ಸಿಎಂ ಚಾಲನೆ/ ಐದು ವೇದಿಕೆಗಳ ನಿರ್ಮಾಣ/ ನಾಡಿನ ಕಲೆ ಅನಾವರಣ

ಕೃಷ್ಣ ಎನ್‌. ಲಮಾಣಿ

ಕನ್ನಡಪ್ರಭ ವಾರ್ತೆ ಹೊಸಪೇಟೆ

ವಿಜಯನಗರ ಗತ ವೈಭವ ಸಾರುವ ಹಂಪಿ ಉತ್ಸವಕ್ಕೆ ಸಿದ್ಧತೆ ನಡೆದಿದ್ದು, ಐದು ವೇದಿಕೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಈ ಬಾರಿ ಹಂಪಿ ಉತ್ಸವದಲ್ಲಿ ಖ್ಯಾತನಾಮ ಕಲಾವಿದರು ಸೇರಿದಂತೆ ಸ್ಥಳೀಯ ಕಲಾವಿದರಿಗೂ ವೇದಿಕೆ ಕಲ್ಪಿಸಲಾಗುತ್ತಿದೆ.

ಹಂಪಿ ಉತ್ಸವ ಫೆ. 28, ಮಾ. 1 ಮತ್ತು 2ರಂದು ಮೂರು ದಿನಗಳವರೆಗೆ ನಡೆಯಲಿದೆ. ಫೆ. 28ರಂದು ಸಂಜೆ 6 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹಮದ್‌ ಖಾನ್‌ ಸೇರಿದಂತೆ ಸಚಿವರು ಹಾಗೂ ಶಾಸಕರು ಉತ್ಸವದಲ್ಲಿ ಭಾಗಿಯಾಗಲಿದ್ದಾರೆ. ಶಾಸಕ ಎಚ್‌.ಆರ್‌. ಗವಿಯಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಅತ್ಯಾಕರ್ಷಕ ಪ್ರಧಾನ ವೇದಿಕೆ:

ಬೆಂಗಳೂರಿನ ಉಡುಪಾಸ್‌ ಸಂಸ್ಥೆ ಹಾಗೂ ವಿಜಯನಗರ ಜಿಲ್ಲಾಡಳಿತ ವಿಜಯನಗರ ವಾಸ್ತುಶಿಲ್ಪ ಮಾದರಿಯಲ್ಲಿ ಹಂಪಿ ಸ್ಮಾರಕಗಳ ಗುಚ್ಛವನ್ನು ಬಳಸಿಕೊಂಡು ಅತ್ಯಾಕರ್ಷಕ ವೇದಿಕೆ ನಿರ್ಮಾಣ ಮಾಡುತ್ತಿವೆ.

ವಿಜಯನಗರ ವಾಸ್ತು ಶಿಲ್ಪ ಸಂರಚನೆಯಲ್ಲಿ ವಿಜಯ ವಿಠಲ ದೇವಾಲಯದ ಸಪ್ತಸ್ವರ ಕಂಬಗಳು, ಕುದುರೆಗೊಂಬೆ ಮಂಟಪದ ಕಂಬಗಳನ್ನು ಬಳಸಿಕೊಂಡು ಆಕರ್ಷಕ ಮಂಟಪ ನಿರ್ಮಾಣ ಮಾಡಲಾಗಿದೆ. ಈ ಮಂಟಪದ ಮೇಲ್ಗಡೆ ಕಮಲ ಮಹಲ್‌ ಸೃಜನೆ ಮಾಡಲಾಗುತ್ತಿದೆ. ಜೊತೆಗೆ ವಿಜಯನಗರ ಸಾಮ್ರಾಜ್ಯದ ರಾಜ ಲಾಂಛನ ವರಾಹವನ್ನು ಕೂಡ ಕೆತ್ತನೆ ಮಾಡಲಾಗುತ್ತಿದೆ. ಮಧ್ಯದಲ್ಲಿ ನಿರ್ಮಾಣ ಮಾಡಲಾಗುತ್ತಿರುವ ಸ್ಮಾರಕದ ಅಕ್ಕಪಕ್ಕದಲ್ಲಿ ರಾಣಿ ಸ್ನಾನಗೃಹಗಳನ್ನು ಸೃಜಿಸಲಾಗುತ್ತಿದೆ. ರಾಣಿ ಸ್ನಾನಗೃಹದ ಮೇಲ್ಗಡೆ ಶ್ರೀವಿರೂಪಾಕ್ಷೇಶ್ವರ ದೇವಾಲಯದ ರಾಯಗೋಪುರ ಸೃಜನೆ ಮಾಡಲಾಗುತ್ತಿದೆ.

ವೇದಿಕೆ ಅಡಿಪಾಯದಲ್ಲಿ ಹಜಾರ ರಾಮ ದೇವಾಲಯ, ಮಹಾನವಮಿ ದಿಬ್ಬದ ಮಾದರಿಯಲ್ಲಿ ಆನೆ, ಕುದುರೆಗಳನ್ನು ಕೆತ್ತನೆ ಮಾಡುವ ಮೂಲಕ ಆಕರ್ಷಕ ಮಂಟಪ ಸೃಜಿಸಲಾಗುತ್ತಿದೆ. ಈ ವೇದಿಕೆಯ ಎರಡು ಬದಿಯಲ್ಲಿ ಸಾಲು ಮಂಟಪದ ಕಂಬಗಳನ್ನು ಬಳಸಿ ಆಕರ್ಷಕ ಮಂಟಪ ಸೃಜಿಸಲಾಗುತ್ತಿದೆ. ಅವುಗಳ ಮೇಲೆ ಅಂಜನಾದ್ರಿಯ ಆಂಜನೇಯ ಮತ್ತು ಸಾಸಿವೆ ಕಾಳು ಗಣಪತಿಯನ್ನು ಸೃಜಿಸಲಾಗುತ್ತಿದೆ. ಇನ್ನೂ ವೇದಿಕೆಯ ಎರಡು ಬದಿಯಲ್ಲಿ ವಿಜಯ ವಿಠಲ ದೇವಾಲಯದ ಆವರಣದ ಕಲ್ಲಿನತೇರು ಮಂಟಪ ಸೃಜಿಸಿ ಇದರಲ್ಲಿ ಎಲ್‌ಇಡಿಗೆ ವ್ಯವಸ್ಥೆ ಮಾಡುವ ಕಾರ್ಯವೂ ನಡೆಯುತ್ತಿದೆ.

ಪ್ರಧಾನ ವೇದಿಕೆ 120 ಅಡಿ ಅಗಲ, 80 ಅಡಿ ಉದ್ದ ಅಳತೆಯಲ್ಲಿ ಪ್ರಧಾನ ವೇದಿಕೆ ನಿರ್ಮಿಸಲಾಗುತ್ತಿದೆ. ಜೊತೆಗೆ ಆಕರ್ಷಕ ಲೈಟಿಂಗ್‌ ವ್ಯವಸ್ಥೆ ಕೂಡ ಮಾಡಲಾತ್ತಿದೆ. ಎಲ್‌ಇಡಿ ಪರದೆ ಕೂಡ ಅಳವಡಿಕೆ ಮಾಡಲಾಗುತ್ತಿದ್ದು, ವೇದಿಕೆ ಮುಂಭಾಗದಲ್ಲಿ 70 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗುತ್ತಿದೆ. ವಿಐಪಿ ಹಾಗೂ ವಿವಿಐಪಿ ಆಸನಗಳನ್ನು ಕೂಡ ವ್ಯವಸ್ಥೆ ಮಾಡಲಾಗುತ್ತಿದ್ದು, ಕಲಾವಿದರು, ಗಣ್ಯಾತಿ ಗಣ್ಯರಿಗಾಗಿ ಗ್ರೀನ್‌ ರೂಂ ನಿರ್ಮಾಣ ಮಾಡಲಾಗುತ್ತಿದೆ. ಹಂಪಿ ಉತ್ಸವದಲ್ಲಿ ಈ ಬಾರಿ ಭಾರೀ ದೊಡ್ಡ ಗಾತ್ರದಲ್ಲಿ ಜರ್ಮನ್‌ ಟೆಂಟ್‌ ನಿರ್ಮಾಣ ಮಾಡಲಾಗುತ್ತಿದೆ. ಇದರಲ್ಲಿ ಗಣ್ಯಾತಿಗಣ್ಯರು, ಕಲಾವಿದರಿಗಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಇದು ಸಂಪೂರ್ಣ ಹವಾನಿಯಂತ್ರಿತ ಕೊಠಡಿ ಆಗಿರಲಿದೆ.

ಹಂಪಿ ಉತ್ಸವಕ್ಕಾಗಿ ಸಕಲ ಸಿದ್ಧತೆ ನಡೆದಿದ್ದು, ಐದು ವೇದಿಕೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಗಾಯತ್ರಿಪೀಠದ ಬಯಲು ಜಾಗದಲ್ಲಿ ಪ್ರಧಾನ ವೇದಿಕೆ ನಿರ್ಮಾಣ ಮಾಡುತ್ತಿದ್ದರೆ, ಎದುರು ಬಸವಣ್ಣ ಮಂಟಪದಲ್ಲಿ ಎರಡನೇ ವೇದಿಕೆ, ಶ್ರೀವಿರೂಪಾಕ್ಷೇಶ್ವರ ದೇವಾಲಯದ ಆವರಣದಲ್ಲಿ ಮೂರನೇ ವೇದಿಕೆ, ಸಾಸಿವೆ ಕಾಳು ಗಣಪತಿ ಮಂಟಪದಲ್ಲಿ ನಾಲ್ಕನೇ ವೇದಿಕೆ ಮತ್ತು ಮಹಾನವಮಿ ದಿಬ್ಬದಲ್ಲಿ ಐದನೇ ವೇದಿಕೆ ನಿರ್ಮಾಣ ಮಾಡಲಾಗುತ್ತಿದೆ. ಇನ್ನೂ ಧ್ವನಿ ಮತ್ತು ಬೆಳಕು ಕಾರ್ಯಕ್ರಮಕ್ಕಾಗಿ 12 ಕಿರು ವೇದಿಕೆಗಳನ್ನು ಕೂಡ ನಿರ್ಮಾಣ ಮಾಡಲಾಗುತ್ತಿದೆ.

ಹಂಪಿ ಉತ್ಸವದ ನಿಮಿತ್ತ ಶಿಲ್ಪಕಲಾ ಶಿಬಿರ, ಚಿತ್ರಕಲಾ ಶಿಬಿರ, ಬೈಕ್‌ ರ್‍ಯಾಲಿ, ತುಂಗಾರತಿ, ದೋಣಿ ವಿಹಾರ, ವಿಜಯನಗರ ವಸಂತ ವೈಭವ, ಹಂಪಿ ಬೈ ಸ್ಕೈ, ಎತ್ತುಗಳ ಪ್ರದರ್ಶನ, ರಂಗೋಲಿ ಸ್ಪರ್ಧೆ, ಫಲ ಪುಷ್ಪ ಪ್ರದರ್ಶನ, ಸಿರಿಧಾನ್ಯಗಳ ಪ್ರದರ್ಶನ, ಚಿತ್ರಸಂತೆ, ಆಹಾರ ಮೇಳ, ಯೋಗಾಸನ, ಕುಸ್ತಿ, ಗ್ರಾಮೀಣ ಕ್ರೀಡೆಗಳು, ಟಗರು ಪ್ರದರ್ಶನ, ಶ್ವಾನ ಪ್ರದರ್ಶನ, ಜಾನಪದ ವಾಹಿನಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಅಲ್ಲದೇ, ಮೂರು ದಿನಗಳು ಐದು ವೇದಿಕೆಗಳಲ್ಲಿ ನಾಡಿನ ಕಲೆ ಅನಾವರಣಗೊಳ್ಳಲಿದೆ.

ಹಂಪಿ ಉತ್ಸವಕ್ಕೆ ಫೆ.28ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ಮೂರು ದಿನಗಳವರೆಗೆ ಕಲಾವಿದರು ವಿಜಯನಗರದ ಗತ ವೈಭವ ಮರುಕಳಿಸಲಿದೆ. ಈಗಾಗಲೇ ಐದು ವೇದಿಕೆಗಳ ನಿರ್ಮಾಣ ಕಾರ್ಯ ನಡೆದಿದೆ ಎನ್ನುತ್ತಾರೆ ಡಿಸಿ ಎಸ್‌. ದಿವಾಕರ್‌.