ಸಾರಾಂಶ
ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಡಿ. 12 ಮತ್ತು 13ರಂದು ನಡೆಯಲಿರುವ ಹನುಮಮಾಲಾ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.
ಕನ್ನಡಪ್ರಭ ವಾರ್ತೆ ಕೊಪ್ಪಳ
ಜಿಲ್ಲೆಯ ಗಂಗಾವತಿ ತಾಲೂಕಿನ ಅಂಜನಾದ್ರಿಯಲ್ಲಿ ಡಿ. 12 ಮತ್ತು 13ರಂದು ನಡೆಯಲಿರುವ ಹನುಮಮಾಲಾ ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.ಬರುವ ಲಕ್ಷಾಂತರ ಭಕ್ತಾಧಿಗಳಿಗೆ ತೊಂದರೆಯಾಗದಂತೆ ಜಿಲ್ಲಾಡಳಿತದ ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದೆ.
ರಸ್ತೆ ಮತ್ತು ಪಾರ್ಕಿಂಗ್ ಸ್ಥಳಗಳ ಸ್ವಚ್ಛತೆ, ಪಾದಚಾರಿ ಮಾರ್ಗದ ನಿರ್ಮಾಣ, ಭಕ್ತರಿಗೆ ಕುಡಿಯುವ ನೀರು ಮತ್ತು ಸ್ನಾನಕ್ಕಾಗಿ ನೂರಾರು ನೀರಿನ ಟ್ಯಾಪ್ ಅಳವಡಿಸಲಾಗುತ್ತಿದೆ. ಸೂಕ್ತ ಪೊಲೀಸ್ ಬಂದೋಬಸ್ತ್ ಜೊತೆಗೆ ಭಕ್ತಾಧಿಗಳ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರಗಳ ಸ್ಥಾಪನೆ ಸೇರಿದಂತೆ ಇತರೆ ಹಲವಾರು ಕಾರ್ಯಗಳು ಭರದಿಂದ ಸಾಗಿವೆ.ಸಾರಿಗೆ ವ್ಯವಸ್ಥೆ:
ಆನೆಗೊಂದಿಯಿಂದ ಅಂಜನಾದ್ರಿಯವರೆಗೆ ಎರಡು ಮಿನಿ ಬಸ್ಸುಗಳನ್ನು ಶುಲ್ಕ ರಹಿತವಾಗಿ ಸಂಚರಿಸುವ ವ್ಯವಸ್ಥೆ ಮಾಡಲಾಗಿದೆ. ಇದರ ಜೊತೆಗೆ ಗಂಗಾವತಿ, ಹೊಸಪೇಟೆ, ಕೊಪ್ಪಳದಿಂದ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತಾಧಿಗಳಿಗಾಗಿ ವಿಶೇಷ ಬಸ್ಸಿನ ವ್ಯವಸ್ಥೆ ಇರಲಿದೆ.15 ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ:
ಗಂಗಾವತಿ, ಹೊಸಪೇಟೆ, ಹುಲಗಿಯ ಮಾರ್ಗವಾಗಿ ಬರುವ ಭಕ್ತಾಧಿಗಳ ಹಾಗೂ ಸಾರ್ವಜನಿಕರ ವಾಹನಗಳಿಗಾಗಿ ಆನೆಗುಂದಿ ಉತ್ಸವ ಸ್ಥಳ, ಹನುಮನಹಳ್ಳಿಯ ಹತ್ತಿರ, ದೇವಸ್ಥಾನ ಹಿಂಭಾಗದಲ್ಲಿ, ಪಂಪಾಸರೋವರ ಹತ್ತಿರ ಹಾಗೂ ಇತರೆ ಕಡೆಗಳಲ್ಲಿ ಒಳಗೊಂಡಂತೆ ಒಟ್ಟು 15 ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ ಸರ್ಕಾರಿ ವಾಹನ ನಿಲುಗಡೆಗೆ ಅಂಜನಾದ್ರಿ ದೇವಸ್ಥಾನದ ಮುಂಭಾಗದಲ್ಲಿ ಸ್ಥಳ ನಿಗದಿಪಡಿಸಿದೆ.ಭಕ್ತಾದಿಗಳ ಆರೋಗ್ಯ ಸೇವೆ:
ಹನುಮಮಾಲಾ ಕಾರ್ಯಕ್ರಮಕ್ಕೆ ಬರುವ ಭಕ್ತಾಧಿಗಳ ಆರೋಗ್ಯದ ಹಿತದೃಷ್ಟಿಯಿಂದ ವೈದ್ಯರು ಮತ್ತು ಅಗತ್ಯ ಔಷಧಿಗಳೊಂದಿಗೆ 2 ಆ್ಯಂಬುಲೆನ್ಸ್ ತುರ್ತು ಸೇವೆಗಾಗಿ ಕಾಯ್ದಿರಿಸಲಾಗಿದೆ. ಇದರ ಜೊತೆಗೆ ದೇವಸ್ಥಾನದ ಪಾರ್ಕಿಂಗ್‌ನಲ್ಲಿ ಒಂದು ಚಿಕಿತ್ಸಾಲಯ, ವೇದಪಾಠ ಶಾಲೆಯ ಹತ್ತಿರ ಮತ್ತೊಂದು ಚಿಕಿತ್ಸಾಲಯ ಹಾಗೂ ಬೆಟ್ಟದ ಮೇಲೆ ದೇವಸ್ಥಾನದ ಹತ್ತಿರ ಔಷಧಿಗಳೊಂದಿಗೆ ವೈದ್ಯರ ತಂಡ. ಬೆಟ್ಟ ಹತ್ತುವ ಮತ್ತು ಇಳಿಯುವ ಮಧ್ಯದಲ್ಲಿ 2 ವೈದ್ಯಕೀಯ ತಂಡ (ರೆಸ್ಕೋ ಟೀಮ್ ಮತ್ತು ಔಷಧಿಗಳೊಂದಿಗೆ)ಗಳ ವ್ಯವಸ್ಥೆ ಮಾಡಲಾಗಿದೆ.ಸಹಾಯವಾಣಿ ಕೇಂದ್ರ ಆರಂಭ:
ಭಕ್ತಾಧಿಗಳ ಅನುಕೂಲಕ್ಕಾಗಿ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದ್ದು, ಗಂಗಾವತಿಯ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣದಲ್ಲಿ ಬ್ಯಾನರ್‌ನೊಂದಿಗೆ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಪೊಲೀಸರು ಒಳಗೊಂಡ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಅದೇ ರೀತಿ ಆನೆಗೊಂದಿಯ ಶ್ರೀ ಕೃಷ್ಣದೇವರಾಯ ವೃತದಲ್ಲಿ ಬ್ಯಾನರ್‌ನೊಂದಿಗೆ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಪೊಲೀಸರು ಒಳಗೊಂಡ ಸಹಾಯವಾಣಿ ಕೇಂದ್ರ ಹಾಗೂ ಅಂಜನಾದ್ರಿ ದೇವಸ್ಥಾನದ ಮುಂಭಾಗದಲ್ಲಿ ಬ್ಯಾನರ್‌ನೊಂದಿಗೆ ಇಬ್ಬರು ಅಧಿಕಾರಿಗಳು ಮತ್ತು ಇಬ್ಬರು ಪೊಲೀಸರನ್ನು ಒಳಗೊಂಡ ಸಹಾಯವಾಣಿ ಕೇಂದ್ರ ಆರಂಭಿಸಲಾಗಿದೆ. ಈ ಸಹಾಯವಾಣಿ ಕೇಂದ್ರಗಳಲ್ಲಿ ಮಾಲಾಧಾರಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು ಎಂದು ಕೊಪ್ಪಳ ಉಪವಿಭಾಗಾಧಿಕಾರಿ ಮಹೇಶ ಮಾಲಗಿತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.