ಸಾರಾಂಶ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಆಶ್ರಯದಲ್ಲಿ ಇದೇ ತಿಂಗಳ 22 ರಂದು ನಡೆಯಲಿರುವ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಸಲುವಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ
ಕನ್ನಡಪ್ರಭವಾರ್ತೆ, ತುರುವೇಕೆರೆ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಆಶ್ರಯದಲ್ಲಿ ಇದೇ ತಿಂಗಳ 22 ರಂದು ನಡೆಯಲಿರುವ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸುವ ಸಲುವಾಗಿ ಸಕಲ ಸಿದ್ಧತೆಗಳು ಭರದಿಂದ ಸಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷ ಡಿ.ಪಿ.ರಾಜು ಮತ್ತು ಗೌರವಾಧ್ಯಕ್ಷ ಟಿ.ಎಸ್.ಬೋರೇಗೌಡ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕನ್ನಡ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ಎಂ.ಟಿ.ಕೃಷ್ಣಪ್ಪ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಮ್ಮೇಳನಾಧ್ಯಕ್ಷರನ್ನಾಗಿ ಸಂಪಿಗೆಯ ಪ್ರೊ.ತೋಂಟಾದಾರ್ಯರನ್ನು ಈಗಾಗಲೇ ಆಯ್ಕೆ ಮಾಡಲಾಗಿದೆ. ಪಟ್ಟಣದ ಶ್ರೀ ಸತ್ಯಗಣಪತಿ ಆಸ್ಥಾನ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದೆ. ಸೆ 22 ರ ಬೆಳಗ್ಗೆ ತಹಸೀಲ್ದಾರ್ ಎನ್. ಎ.ಕುಂಇ ಅಹಮದ್ ರವರು ರಾಷ್ಟ್ರ ಧ್ವಜಾರೋಹಣ ಮಾಡಲಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶೀಲಾ ಶಿವಪ್ಪ ನಾಯಕ ನಾಡ ಧ್ವಜಾರೋಹಣ ಮಾಡಲಿದ್ದಾರೆ. ಪರಿಷತ್ ನ ಧ್ವಜಾರೋಹಣವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರು ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದರು. 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿರುವ ಪ್ರೊ.ತೋಂಟದಾರ್ಯರನ್ನು ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಿಂದ ಹಲವಾರು ಜನಪದ ಕಲಾಮೇಳಗಳೊಂದಿಗೆ ಪಟ್ಟಣದ ಪ್ರಮುಖ ರಾಜಬೀದಿಗಳಲ್ಲಿ ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು. ಮೆರವಣಿಗೆಯನ್ನು ಇಓ ಶಿವರಾಜಯ್ಯ ಮತ್ತು ಶಿಕ್ಷಣಾಧಿಕಾರಿ ಎನ್. ಸೋಮಶೇಖರ್ ಉದ್ಘಾಟಿಸುವರು. ಸಾಂಸ್ಕೃತಿಕ ಕಲಾ ಮೇಳದ ಜವಾಬ್ದಾರಿಯನ್ನು ಶಿವಶಕ್ತಿ ಕಲಾವಿದರ ಸಂಘದ ಅಧ್ಯಕ್ಷ ಅಮಾನಿಕೆರೆ ಮಂಜುನಾಥ್ ಮತ್ತು ಅಡಿಕೆ ಮತ್ತು ತೆಂಗು ಬೆಳೆಗಾರರ ಸಂಘದ ಉಪಾಧ್ಯಕ್ಷ ಪುಟ್ಟಣ್ಣ ನಿರ್ವಹಿಸುವರು. ಬೆಳಿಗ್ಗೆ 11 ಗಂಟೆಗೆ ಸಭೆ ವಿದ್ಯುಕ್ತವಾಗಿ ಪ್ರಾರಂಭವಾಗಲಿದೆ. ಸಮಾರಂಭದ ಸಾನ್ನಿಧ್ಯವನ್ನು ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ವಹಿಸಲಿದ್ದಾರೆ. ಕಲ್ಪವಿಜಯ ನೆನಪಿನ ಸಂಚಿಕೆಯನ್ನು ಕೇಂದ್ರ ಸಚಿವರಾದ ವಿ.ಸೋಮಣ್ಣ ಬಿಡುಗಡೆಗೊಳಿಸಲಿದ್ದಾರೆ. ಗೃಹ ಸಚಿವ ಜಿ.ಪರಮೇಶ್ವರ್ ರವರೂ ಆಗಮಿಸಲಿದ್ದು, ಅಧ್ಯಕ್ಷತೆಯನ್ನು ಶಾಸಕ ಎಂ.ಟಿ.ಕೃಷ್ಣಪ್ಪ ವಹಿಸಲಿದ್ದಾರೆ. ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷರು ಕೆ.ಎನ್.ಸಿದ್ದಲಿಂಗಪ್ಪ ಆಶಯ ನುಡಿ ನುಡಿಯಲಿದ್ದಾರೆ. ಸಮ್ಮೇಳನದಲ್ಲಿ ಮೂರು ಗೋಷ್ಟಿಗಳು ನಡೆಯಲಿದೆ. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. 4 ಗಂಟೆಗೆ ಅಜೀವ ಸದಸ್ಯರ ಸಭೆ ನಡೆಯಲಿದೆ. ಸಂಜೆ 5 ಕ್ಕೆ ಸಮಾರೋಪ ಸಮಾರಂಭ ಕಾಡಸಿದ್ದೇಶ್ವರ ಮಠದ ಶಿವಯೋಗೀಶ್ವರ ಸ್ವಾಮಿಗಳ ಸಾನ್ನಿಧ್ಯದಲ್ಲಿ ನಡೆಯಲಿದೆ. ಶಾಸಕ ಎಂ.ಟಿ.ಕೃಷ್ಣಪ್ಪ ಸಮ್ಮೇಳಾನಾದ್ಯಕ್ಷರಿಗೆ ಗೌರವ ಸಮರ್ಪಣೆ ಮಾಡಲಿದ್ದಾರೆ. ಸಾಧಕರಿಗೆ ಸನ್ಮಾನವನ್ನು ಮಾಜಿ ಸಚಿವರಾದ ಕೆ.ಎನ್.ರಾಜಣ್ಣ, ರಾಜ್ಯಸಭಾ ಸದಸ್ಯ ಜಗ್ಗೇಶ್, ಕೇಂದ್ರ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಷಿ ನೆರವೇರಿಸಲಿದ್ದಾರೆ. ಸಮಾರೋಪ ಭಾಷಣವನ್ನು ಖ್ಯಾತ ರಂಗಕರ್ಮಿ ಬಾಬು ಹಿರಣ್ಣಯ್ಯ ಮಾಡಲಿದ್ದಾರೆ. ಸಮ್ಮೇಳನಾಧ್ಯಕ್ಷ ನುಡಿಯನ್ನು ಸಂಪಿಗೆ ತೋಂಟದಾರ್ಯ ನುಡಿಯಲಿದ್ದಾರೆ. ಸಂಜೆ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಯಲ್ಲಿ ಕನ್ನಡ ಭಾಷೆಯಲ್ಲಿ 125 ಕ್ಕೆ 125 ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ ದಿವಂಗತ ಮುನಿಯೂರು ದಾಸಾಚಾರ್ ಶಿಷ್ಯರಿಂದ ದೇವಿಮಹಾತ್ಮೆ ಎಂಬ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಎಲ್ಲಾ ಕನ್ನಡ ಅಭಿಮಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಸಾಹಿತ್ಯ ಸಮ್ಮೇಳನಕ್ಕೆ ಕನ್ನಡ ಅಭಿಮಾನಿಗಳು ಹೆಚ್ಚು ಆಗಮಿಸಿ ಯಶಸ್ವಿ ಮಾಡಬೇಕೆಂದು ಕೋರಿದರು. ಈ ವೇಳೆ ಪಟ್ಟಣ ಪಂಚಾಯತಿ ಸದಸ್ಯ ಚಿದಾನಂದ್, ತಾಲೂಕು ಕಸಾಪ ಮಾಜಿ ಅಧ್ಯಕ್ಷರಾದ ಸಾ.ಶಿ.ದೇವರಾಜು, ನಂ.ರಾಜು, ಪರಿಷತ್ ಸದಸ್ಯರಾದ ಮಂಜಯ್ಯಗೌಡ, ಕೆಂಪರಾಜು, ಷಣ್ಮುಕಪ್ಪ, ರಾಮಣ್ಣ, ಪರಮೇಶ್ವರ ಸ್ವಾಮಿ, ಕಾಂತರಾಜು, ಮಂಜೇಶ್ ಸೇರಿದಂತೆ ಇತರರು ಇದ್ದರು.