ಡಿ.6ರಂದು ಸಂಘಟಿಸಲಾದ ಕಾರವಾರ ಚಲೋದಲ್ಲಿ ಜಿಲ್ಲೆಯ ಅರಣ್ಯವಾಸಿಗಳು ಒಗಟ್ಟನ್ನು ಪ್ರದರ್ಶಿಸಲು ಜಿಲ್ಲಾದ್ಯಂತ ಭರದಿಂದ ಕಾರ್ಯ ಪ್ರಾರಂಭವಾಗಿದೆ.
ಕನ್ನಡಪ್ರಭ ವಾರ್ತೆ ಶಿರಸಿ
ಕಾನೂನಿನ ಸಂಕೋಲೆಯಲ್ಲಿ ಸಿಲುಕಿ, ಸಾಗುವಳಿ ಹಕ್ಕಿನಿಂದ ವಂಚಿತರಾಗಿರುವ ಅರಣ್ಯವಾಸಿಗಳು ಕಾರವಾರದಲ್ಲಿ ಡಿ.6ರಂದು ಸಂಘಟಿಸಲಾದ ಕಾರವಾರ ಚಲೋದಲ್ಲಿ ಜಿಲ್ಲೆಯ ಅರಣ್ಯವಾಸಿಗಳು ಒಗಟ್ಟನ್ನು ಪ್ರದರ್ಶಿಸಲು ಜಿಲ್ಲಾದ್ಯಂತ ಭರದಿಂದ ಕಾರ್ಯ ಪ್ರಾರಂಭವಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.ನಗರದ ಅರಣ್ಯ ಭೂಮಿ ಹೋರಾಟಗಾರರ ಕಾರ್ಯಾಲಯದಲ್ಲಿ ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅರಣ್ಯ ಭೂಮಿ ಹಕ್ಕಿನ ಹೋರಾಟವೂ ಸಾಗುವಳಿ ಹಕ್ಕಿಗೆ ಸಂಬಂಧಿಸಿ ನಿರ್ಣಾಯಕ ಘಟಕ್ಕೆ ತಲುಪಿದ್ದು ಇರುತ್ತದೆ. ಈ ಹಿನ್ನೆಲೆ ಜರುಗುತ್ತಿರುವ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಅರಣ್ಯವಾಸಿಗಳ ಪರ ಸರ್ಕಾರ ನಿರ್ದಿಷ್ಟ ತೀರ್ಮಾನವನ್ನು ಪ್ರಕಟಿಸುವುದೆಂಬ ನೀರಿಕ್ಷೆಯಲ್ಲಿ ಅರಣ್ಯವಾಸಿಗಳು ಇರುವರೆಂದು ಆಶಯ ವ್ಯಕ್ತಪಡಿಸಿದರು.
ಸುಪ್ರೀಂಕೋರ್ಟ್‌ನ ಇತ್ತೀಚಿನ ಆದೇಶವು ಅರಣ್ಯವಾಸಿಗಳ ಸಾಗುವಳಿಗೆ ಸಂಬಂಧಪಟ್ಟಂತೆ ವ್ಯತಿರಿಕ್ತವಾದ ಆದೇಶಗಳು ಬರುತ್ತಿರುವುದರಿಂದ ಅರಣ್ಯವಾಸಿಗಳಲ್ಲಿ ಕಾನೂನಾತ್ಮಕ ಜಾಗ್ರತೆ ಉಂಟು ಮಾಡುವ ಉದ್ದೇಶದಿಂದ ಜಿಲ್ಲಾದ್ಯಂತ ಕಾನೂನು ಜಾಗೃತ ಜಾಥಾ ಸಂಘಟಿಸಲಾಗುತ್ತಿದೆ ಎಂದು ಹೇಳಿದರು.ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಶಿರಸಿ ತಾಲೂಕಾದ್ಯಂತ 15,323 ಅರ್ಜಿಗಳು ಅರಣ್ಯವಾಸಿಗಳು ದಾಖಲಿಸಿದ್ದು, ಅವುಗಳಲ್ಲಿ 13,639 ಅರ್ಜಿ ತಿರಸ್ಕಾರವಾಗಿದೆ. ಬಂದಿರುವ ಅರ್ಜಿಗಳಲ್ಲಿ 415 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿರುತ್ತದೆ. ಬುಡಕಟ್ಟು ಜನಾಂಗ 62, ಪಾರಂಪರಿಕ ಅರಣ್ಯವಾಸಿಗಳು 167 ಹಾಗೂ ಸಮೂಹ ಉದ್ದೇಶಕ್ಕೆ 186 ಅರ್ಜಿಗಳಿಗೆ ಮಾನ್ಯತೆ ದೊರಕಿರುತ್ತದೆ. ಶಿರಸಿ ತಾಲೂಕಾದ್ಯಂತ ಶೇ.59ರಷ್ಟು ಅರ್ಜಿಗಳು ತಿರಸ್ಕಾರಗೊಂಡಿರುವುದು ವಿಷಾದನೀಯ ಎಂದು ರವೀಂದ್ರ ನಾಯ್ಕ ಹೇಳಿದರು.
ಜಿಲ್ಲಾ ಸಂಚಾಲಕರಾದ ಇಬ್ರಾಹೀಂ ಗೌಡಳ್ಳಿ, ರಫೀಕ್, ಲಕ್ಷ್ಮಣ ನಾಯ್ಕ, ಜಯಶ್ರೀ ನಾಯ್ಕ, ಮಾಬ್ಲೇಶ್ವರ ನಾಯ್ಕ ಹೊನ್ನಾವರ, ಲಕ್ಷ್ಮಣ ಗೌಡ, ಸುರೇಶ ಗೌಡ, ಮಾದೇವ ಪಟಗಾರ, ಶಾರದಾ ನಾಯ್ಕ, ಪಾರ್ವತಿ ಪಟಗಾರ, ನಾಗಪ್ಪ ಕರೆಗುಂಡಿ, ಮರ‍್ಯ ಕುಂಬಾರಗುಣಿ, ಕುಮಾರ್ ಮುತ್ಕುಂಡರ್, ನಿಂಗಪ್ಪ ಕಾಳೆನಾರ್, ಪ್ರಶಾಂತ್ ನಾಯ್ಕ, ಗಣಪತಿ ಪುಟ್ಟಾರಮನೆ, ಆನಂದ ಗಡಗೆರ, ಸತೀಶ್ ಕರೆಗುಂಡಿ, ಕುಮಾರ ಕರೆಗುಂಡಿ ಮತ್ತಿತರರಿದ್ದರು.