ರಿಂಗ್ ರೋಡ್ ನಿರ್ಮಾಣದಿಂದ ಪಟ್ಟಣದ ಭವಿಷ್ಯದ ಅಭಿವೃದ್ಧಿಗೆ ವೇಗ ದೊರೆಯುವ ನಿರೀಕ್ಷೆಯಿದೆ.

ಶಿರಹಟ್ಟಿ: ಪಟ್ಟಣದ ಸಂಚಾರ ದಟ್ಟಣೆ ಕಡಿಮೆ ಮಾಡಿ, ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶಿರಹಟ್ಟಿ ಪಟ್ಟಣದ ಸುತ್ತಲೂ ರಿಂಗ್ ರೋಡ್ ನಿರ್ಮಾಣಕ್ಕೆ ಸರ್ಕಾರದ ಕರಡು ನಕ್ಷೆ ಸಿದ್ಧಗೊಂಡಿದ್ದು, ಯೋಜನೆ ಅನುಷ್ಠಾನಕ್ಕೆ ಮುಂದಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಂದ ಆಕ್ಷೇಪಣೆ, ಸಲಹೆ ಹಾಗೂ ಸೂಚನೆಗಳನ್ನು ಆಹ್ವಾನಿಸಲಾಗಿದೆ ಎಂದು ಪಪಂ ಮುಖ್ಯಾಧಿಕಾರಿ ಎನ್.ಎಚ್. ಹಾದಿಮನಿ ತಿಳಿಸಿದರು.

ಶಿರಹಟ್ಟಿ ಪಟ್ಟಣದಲ್ಲಿ ಯೋಜನೆಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಅವರು, ಪಟ್ಟಣದ ಪ್ರಮುಖ ರಸ್ತೆಗಳ ಮೇಲೆ ದಿನದಿಂದ ದಿನಕ್ಕೆ ವಾಹನಗಳ ಸಂಚಾರ ಹೆಚ್ಚಾಗುತ್ತಿದ್ದು, ಭಾರಿ ವಾಹನಗಳ ಸಂಚಾರದಿಂದ ಸಂಚಾರ ದಟ್ಟಣೆ, ಅಪಘಾತದ ಆತಂಕ ಹಾಗೂ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಿಂಗ್ ರೋಡ್ ನಿರ್ಮಾಣವಾದರೆ ಪಟ್ಟಣದ ಒಳಭಾಗದ ಮೇಲಿನ ವಾಹನಗಳ ಒತ್ತಡ ಕಡಿಮೆಯಾಗುವ ಜತೆಗೆ, ಹೊರಗಿನಿಂದ ಬರುವ ಭಾರಿ ವಾಹನಗಳು ಪಟ್ಟಣ ಪ್ರವೇಶಿಸದೆ ಪರ್ಯಾಯ ಮಾರ್ಗದ ಮೂಲಕ ಸಂಚರಿಸಲು ಅನುಕೂಲವಾಗಲಿದೆ ಎಂದರು.

ರಿಂಗ್ ರೋಡ್ ನಿರ್ಮಾಣದಿಂದ ಪಟ್ಟಣದ ಭವಿಷ್ಯದ ಅಭಿವೃದ್ಧಿಗೆ ವೇಗ ದೊರೆಯುವ ನಿರೀಕ್ಷೆಯಿದೆ. ಕೈಗಾರಿಕೆ, ವ್ಯಾಪಾರ, ಕೃಷಿ ಉತ್ಪನ್ನಗಳ ಸಾಗಣೆ ಹಾಗೂ ಗ್ರಾಮೀಣ ಪ್ರದೇಶಗಳ ಸಂಪರ್ಕಕ್ಕೂ ಯೋಜನೆ ಸಹಕಾರಿಯಾಗಲಿದೆ. ಅಲ್ಲದೆ ಪಟ್ಟಣದ ವಿಸ್ತರಣೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಸಂಚಾರ ವ್ಯವಸ್ಥೆ ಸುಗಮಗೊಳಿಸಲು ಇದು ಪ್ರಮುಖ ಯೋಜನೆಯಾಗಲಿದೆ. ಯೋಜನೆಗಾಗಿ ಭೂಸ್ವಾಧೀನ, ರೈತರ ಜಮೀನು, ವಸತಿ ಪ್ರದೇಶ, ಕೃಷಿ ಭೂಮಿ ಹಾಗೂ ಸಾರ್ವಜನಿಕ ಆಸ್ತಿಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸ್ಥಳೀಯರ ಅಭಿಪ್ರಾಯಕ್ಕೆ ಮಹತ್ವ ನೀಡಬೇಕಾಗಿದೆ. ರಿಂಗ್ ರೋಡ್ ಮಾರ್ಗದ ಆಯ್ಕೆ ಸಂದರ್ಭದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ವೈಜ್ಞಾನಿಕವಾಗಿ ಮಾರ್ಗ ನಿಗದಿಪಡಿಸಬೇಕಾಗಿರುವುದರಿಂದ ಸಾರ್ವಜನಿಕರು ಆಕ್ಷೇಪಣೆ, ಸಲಹೆ-ಸೂಚನೆ ನೀಡಲು ೨ ತಿಂಗಳ ಕಾಲ ಅವಕಾಶವಿದೆ ಎಂದು ಹೇಳಿದರು.

ಸರ್ಕಾರದ ಸೂಚನೆಯಂತೆ ಯೋಜನೆಗೆ ಸಂಬಂಧಿಸಿದಂತೆ ಸಾರ್ವಜನಿಕರು ತಮ್ಮ ಆಕ್ಷೇಪಣೆ, ಸಲಹೆ ಮತ್ತು ಸೂಚನೆಗಳನ್ನು ನಿಗದಿತ ಅವಧಿಯೊಳಗೆ ಸಂಬಂಧಿಸಿದ ಅಧಿಕಾರಿಗಳಿಗೆ ಸಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.

ಜಿಐಎಸ್ ಆಧಾರಿತ ರೋಡ್ ನೆಟ್ ವರ್ಕಿಂಗ್ ಗ್ರಿಡ್ ಪ್ಲಾನ್‌ನಡಿಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸರ್ಕಾರ ಕ್ರಮ ಕೈಗೊಂಡಿದ್ದು, ರಿಂಗ್ ರೋಡ್ ಯೋಜನೆಯಿಂದ ಶಿರಹಟ್ಟಿ ಪಟ್ಟಣದ ಸಂಚಾರ ವ್ಯವಸ್ಥೆಗೆ ಹೊಸ ರೂಪ ಸಿಗುವ ನಿರೀಕ್ಷೆ ಮೂಡಿದ್ದು, ಸಾರ್ವಜನಿಕರು ಯೋಜನೆಯ ಕುರಿತು ತಮ್ಮ ಅಮೂಲ್ಯ ಸಲಹೆ, ಸೂಚನೆಗಳನ್ನು ನೀಡುವ ಮೂಲಕ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.

ಸಾರ್ವಜನಿಕರು ೬೦ ದಿನಗಳ ನಿಗದಿತ ಕಾಲಮಿತಿಯೊಳಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸುವ ಸಲಹೆ, ಆಕ್ಷೇಪಣೆಗಳನ್ನು ನಿಯಮಾನುಸಾರ ಪರಿಶೀಲಿಸಿ, ಪರಿಗಣಿಸಬಹುದಾದ ಹಾಗೂ ತಿಸ್ಕರಿಸಬಹುದಾದ ಸಲಹೆ, ಆಕ್ಷೇಪಣೆಗಳ ಕುರಿತು ಅಗತ್ಯ ಕ್ರಮ ಕೈಗೊಂಡು ಅಂತಿಮ ಅನುಮೋದನೆಗಾಗಿ ಪ್ರಸ್ತಾವನೆ ಕಳುಹಿಸಿಕೊಡಲು ಮುಂದಾಗುವುದಾಗಿ ಹೇಳಿದರು.

ಶಿರಹಟ್ಟಿ ಪಟ್ಟಣದ ಸುತ್ತಮುತ್ತಲ ರಿಂಗ್ ರೋಡ್ ನಿರ್ಮಾಣಕ್ಕಾಗಿ ಕೃಷಿ ಜಮೀನು ಭೂ-ಸ್ವಾಧೀನಕ್ಕೆ ಒಳಪಡಲಿದ್ದು, ಸಮಗ್ರ ಮಾಹಿತಿ ಬೇಕಾದಲ್ಲಿ ಸಾರ್ವಜನಿಕರು ಶಿರಹಟ್ಟಿ ಪಪಂ ಕಾರ್ಯಾಲಯಕ್ಕೆ ಭೇಟಿ ನೀಡಿ ಪಡೆದುಕೊಳ್ಳಲು ತಿಳಿಸಿದರು.