- ಆ.4ರಿಂದ ಮೂರು ದಿನಗಳವರೆಗೆ ಆಚರಣೆ । ವರ್ಣರಂಜಿತ ವಿದ್ಯುತ್‌ ದೀಪಾಲಂಕಾರ

- ರಾಯಣ್ಣ ವೃತ್ತದಲ್ಲಿ ಕಾಳಿಕಾಂಬ ಅವತಾರದ ಬೃಹತ್ ಮೂರ್ತಿ ಅಲಂಕಾರದ ಪ್ರವೇಶ ದ್ವಾರ

- - -

ರಾಜು ಜಿ.ಎಚ್. ಹೊನ್ನಾಳಿ

ಕನ್ನಡಪ್ರಭ ವಾರ್ತೆ ಹೊನ್ನಾಳಿ


ಪಟ್ಟಣದ ಐತಿಹಾಸಿಕ, ಗ್ರಾಮದೇವತೆ ಶ್ರೀ ಮಾರಿಕಾಂಬ ದೇವಿಯ ಜಾತ್ರೆ ಆಗಸ್ಟ್ 4 ರಿಂದ 6 ರವರೆಗೆ ಅದ್ಧೂರಿಯಾಗಿ ಜರುಗಲಿದ್ದು, ಇದಕ್ಕಾಗಿ ಈಗಾಗಲೇ ಅಗತ್ಯ ಸಿದ್ಧತೆಗಳು ಕೈಗೊಳ್ಳಲಾಗಿದೆ. ಜಾತ್ರೆ ಹಿನ್ನೆಲೆ ಇಡೀ ಪಟ್ಟಣವನ್ನು ಮದುವಣಗಿತ್ತಿಯಂತೆ ಶೃಂಗರಿಸಲಾಗಿದೆ.

ಹೊನ್ನಾಳಿ ಮಾರಿಕಾಂಬ ಜಾತ್ರೆಯು ಪ್ರತಿ 5 ವರ್ಷಕ್ಕೊಮ್ಮೆ ನಡೆಯಲಿದ್ದು, 5 ರಿಂದ 6 ಶತಮಾನಗಳ ಇತಿಹಾಸ ಹೊಂದಿದೆ ಎಂದು ಹಿರಿಯರು ಹೇಳುತ್ತಾರೆ. ಈ ಜಾತ್ರೆಯನ್ನು ಆಷಾಢ ಮಾಸದ ಕೊನೆಯ ಮಂಗಳವಾರ, ಬುಧವಾರ ಹಾಗೂ ಗುರುವಾರ ಹಾಗೂ ಶ್ರಾವಣ ಮಾಸ ಆರಂಭ ಆಗುವುದರೋಳಗೆ ಅಚರಿಸುವುದು ವಿಶೇಷ. ಇಡೀ ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿದೆ. ರಸ್ತೆಗಳು, ವೃತ್ತಗಳು, ಬೀದಿಗಳಲ್ಲಿ ಸಾಲು ಸಾಲಾಗಿ ವರ್ಣರಂಚಿತ ವಿದ್ಯುತ್ ದೀಪಗಳನ್ನು ಅಳವಡಿಸಲಾಗಿದೆ. ರಸ್ತೆಗಳಲ್ಲಿ ನೂರಾರು ಫ್ಲೆಕ್ಸ್‌ಗಳನ್ನು ಹಾಕಲಾಗಿದೆ.

ಧಾರ್ಮಿಕ ವಿಧಿ ವಿಧಾನ:

ಆಷಾಢ ಮಾಸದ ಅಮವಾಸ್ಯೆಯ ನಂತರ ಪಟ್ಟಣದ ಕರಿಕಲ್ಲು ಪೂಜೆ ನೆರವೇರಿಸಿ ನಗರದ ನಾಲ್ಕೂ ದಿಕ್ಕುಗಳಿಗೆ ದಿಗ್ಬಂಧನ ಹಾಕಲಾಗುತ್ತದೆ. ತದನಂತರ ಮಾರಿಕಾಂಬ ದೇವಿಯ ಮೂರ್ತಿಗೆ ಹೊಸದಾಗಿ ಕೆಂಪುಬಣ್ಣ ಬಳಿಯಲಾಗುತ್ತದೆ. ನಂತರ ದೇವಿಯ ಮೂರ್ತಿಯನ್ನು ಹೊರತಂದು ಗದ್ದುಗೆಯಲ್ಲಿ ಕೇಲು ಸ್ಥಾಪಿಸಿ ಪೂಜೆ ಸಲ್ಲಿಸಲಾಗುತ್ತದೆ.

ಆಗಸ್ಟ್ 4ರಂದು ಪ್ರತಿಷ್ಟಾಪನೆ:

ಮಂಗಳವಾರ ಕುಂಬಾರ ಬೀದಿಯಿಂದ ದುರ್ಗಮ್ಮ ದೇವಸ್ಥಾನದ ಪಕ್ಕದಲ್ಲಿ ಭಕ್ತರ ಸಮ್ಮುಖ ಮಾರಿಕಾಂಬ ದೇವಿಯನ್ನು ಪ್ರತಿಷ್ಠಾಪಿ ಪೂಜೆ ಸಲ್ಲಿಸಲಾಗುವುದು. ಮೊದಲು ಗಾಣಿಗೇರ ಮನೆ (ಬ್ರಾಹ್ಮಣರ ಮನೆ) ನಂತರ ಗೌಡರ ಮನೆ ಹಾಗೂ ಬುದ್ಧಿವಂತರ ಮನೆ (ಕುರುಬ ಮನೆತನ) ಈ ಮೂರು ಮನೆತನದವರು ಸೀರೆ, ಕುಂಕುಮ, ಭಂಡಾರ ಮತ್ತು ಅಕ್ಕಿ ನೀಡಿ ಉಡಿ ತುಂಬುತ್ತಾರೆ.

ಮಾಂಗಲ್ಯ ಧಾರಣೆ:

ಹೊನ್ನಾಳಿ ಹಿರೇಕಲ್ಮಠದ ಡಾ.ಒಡೆಯರ ಚನ್ನಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಗೌಡರ ಮನೆತನದ ಹಿರಿಯರು ದೇವಿಗೆ ಮಾಂಗಲ್ಯಧಾರಣೆ ಮಾಡಿಸುತ್ತಾರೆ.

ಭವ್ಯ ಮೆರ‍ವಣಿಗೆ:

ರಾತ್ರಿ 9 ಗಂಟೆಗೆ ಕುಂಬಾರ ಬೀದಿಯ ದುರ್ಗಾಂಬಿಕಾ ದೇವಸ್ಥಾನದಿಂದ ದೇವಿಯ ಭವ್ಯ ಮೆರವಣಿಗೆ ಪ್ರಾರಂಭವಾಗಿ ಭಜನೆ, ಮಂಗಳವಾದ್ಯ ಮೇಳಗಳೊಂದಿಗೆ ರಾಜಬೀದಿಯಲ್ಲಿ ಸಾಗಿ, ಪೇಟೆಯ ಹಳದಮ್ಮ ದೇವಿ ದೇವಸ್ಥಾನದ ಹಿಂಭಾಗದಲ್ಲಿ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಸಂಜೆ ಜೋಗಪ್ಪಗಳು ಮತ್ತು ಮುತ್ತು ಕಟ್ಟಿಸಿದ ಜೋಗತಿಯರು ಗೌಡರ ಮನೆಯಲ್ಲಿ ದೇವಿಗೆ ಪಡ್ಲಿಗೆ ತುಂಬಿಸುವ ಕಾರ್ಯ ನಡೆಸಿ ಪ್ರಸಾದ ಸ್ವೀಕರಿಸುತ್ತಾರೆ. ರಾತ್ರಿ 11 ಗಂಟೆಗೆ ದೇವಿಯ ಮುಂಭಾಗ ವಿಧಿ ವಿಧಾನದಂತೆ ಅಸಾಧಿ ಹೊಗಳಿಕೆಯನ್ನು ಹೇಳಿ, ಹುಲಸಿನ ಜೋಳದ ರಾಶಿ ಹಾಕಲಾಗುತ್ತದೆ. ಮಾತೆಂಗಮ್ಮ ದೇವಸ್ಥಾನದ ಗಟಿಯನ್ನು ಗದ್ದುಗೆಗೆ ತಂದು 5 ತರಹದ ಸುರಿಗೆದಾರ ಕಟ್ಟಿ ರಂಗು ಹಾಕುವ ಮೂಲಕ ಮುಖಂಡರು, ಪೂಜೆ ನೆರವೇರಿಸುತ್ತಾರೆ.

ಆ.5ರಂದು ಗಾವು ಮರಿ ತರುವುದು:

ಸಂಜೆ 5 ಗಂಟೆಗೆ ಗಾವುಮರಿ ತರುವುದು, ಹುಲುಸಿನ ಜೋಳ ಒಡೆಯವುದು, ಆಸಾದಿ ಹೊಗಳಿಕೆ ಕಾರ್ಯಕ್ರಮಗಳು ಜರುಗಲಿವೆ. ಸಂಜೆ 6 ಗಂಟೆಗೆ ಗಾವುಮರಿ ಜಿಗಿಯುವ ಕಾರ್ಯಕ್ರಮ ಜರುಗಲಿದೆ.

ಪುನರ್ ಪ್ರತಿಷ್ಠಾಪನೆಃ- ಮಾರಿಹಬ್ಬ ಮುಗಿದ 11ನೇ ದಿನ ಊರಿನ ಗೌಡರು,ಬುದ್ದಿವಂತರು, ತಳವಾರರು ಹಾಗೂ ಮುತ್ತೈದೆಯರು ಮಾರಿಕಾಂಬ ದೇವಿಗೆ ಅಭಿಷೇಕ ಮತ್ತು ಪೂಜೆಗಳನ್ನು ಸಲ್ಲಿಸುವ ಮೂಲಕ ದೇವಿಯನ್ನು ಪುನಃ ತನ್ನ ಮೂಲಕ ಸ್ಥಾನದಲ್ಲಿ ಪ್ರತಿಷ್ಠಾಪಿಸಲಾಗುವುದು.

- - -

-2ಎಚ್.ಎಲ್.ಐ3: ಜಾತ್ರೆ ಅಂಗವಾಗಿ ಮಾರಿಕಾಂಬ ದೇವಿಗೆ ಪೂಜೆ ಸಲ್ಲಿಸಿರುವುದು.

-2ಎಚ್.ಎಲ್.ಐ3ಎ: ಮಾರಿಕಾಂಬ ಹಬ್ಬದ ಪ್ರಯುಕ್ತ ಹೊನ್ನಾಳಿ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕಾಳಿಕಾಂಬ ಅವತಾರದ ಬೃಹತ್ ಮೂರ್ತಿಯ ಪ್ರವೇಶ ದ್ವಾರ ನಿರ್ಮಿಸಲಾಗಿದೆ.