ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರುಮಲೆಮಹದೇಶ್ವರ ಬೆಟ್ಟದಲ್ಲಿ ಫೆಬ್ರವರಿ ತಿಂಗಳಲ್ಲಿ ಕ್ಯಾಬಿನೆಟ್ ಸಭೆ ನಡೆಯಲಿರುವುದರಿಂದ ಪೂರ್ವ ಸಿದ್ಧತೆಗಳ ಬಗ್ಗೆ ಶಾಸಕ ಮಂಜುನಾಥ್ ವಿವಿಧಡೆ ಭೇಟಿ ನೀಡಿ ಅಧಿಕಾರಿಗಳ ಜೊತೆ ಪರಿಶೀಲನೆ ನಡೆಸಿದರು.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಫೆ.17 ರಂದು ಕ್ಯಾಬಿನೆಟ್ ಸಭೆ ನಡೆಯಲಿರುವುದರಿಂದ ಹನೂರು ಶಾಸಕ ಎಂಆರ್ ಮಂಜುನಾಥ್ ಮಲೆಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ ವಿವಿಧೆಡೆಗಳಲ್ಲಿ ಪರಿಶೀಲನೆ ನಡೆಸಿ ನಡೆಯುತ್ತಿರುವ ಕಾಮಗಾರಿಗಳನ್ನು ಉತ್ತಮ ಗುಣಮಟ್ಟದೊಂದಿಗೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ಶ್ರೀ ಕ್ಷೇತ್ರ ವ್ಯಾಪ್ತಿಯ ತಾಳು ಬೆಟ್ಟದಲ್ಲಿ ಇರುವ ಶೌಚಾಲಯ ಹಾಗೂ ಸ್ನಾನದ ಮನೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಪರಿಶೀಲನೆ ನಡೆಸಿ ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಸ್ವಚ್ಛತೆಯ ಜೊತೆಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿ ಯಾವುದೆ ಲೋಪವಾಗದಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗಬೇಕು ಎಂದು ತಿಳಿಸಿದರು.ಮಾದೇಶ್ವರ ಬೆಟ್ಟದಲ್ಲಿ ನಡೆಯಲಿರುವ ಕ್ಯಾಬಿನೆಟ್ ಸ್ಥಳ ಪರಿಶೀಲನೆ ನಡೆಸಿ ಅಲ್ಲಿನ ಉತ್ತಮ ಪ್ರದೇಶಗಳಲ್ಲಿ ಅಲಂಕಾರಿಕ ಗಿಡಗಳನ್ನು ಮತ್ತು ಸುಸಜ್ಜಿತ ವ್ಯವಸ್ಥೆಗಳನ್ನು ಕಲ್ಪಿಸುವನ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.ಮಲೆಮಾದೇಶ್ವರ ಬೆಟ್ಟ ಸೇರಿದಂತೆ ತಾಳು ಬೆಟ್ಟದಿಂದ ವಿವಿಧಡೆ ನಡೆಯುತ್ತಿರುವ ಡಾಂಬರೀಕರಣ ಹಾಗೂ ಕಾಂಕ್ರೀಟ್ ರಸ್ತೆಗಳನ್ನು ಅಚ್ಚುಕಟ್ಟಾಗಿ ನಿರ್ಮಾಣ ಸೇರಿದಂತೆ ಬಹುನಿರೀಕ್ಷಿತ ಯುಜಿಡಿ ಒಳಚರಂಡಿ ಕಾಮಗಾರಿ ಅಚ್ಚುಕಟ್ಟಾಗಿ ನಿರ್ಮಿಸಬೇಕು. ಮ.ಬೆಟ್ಟದಲ್ಲಿ ನಡೆಯುತ್ತಿರುವ ಕಾಮಗಾರಿಗಳಲ್ಲಿ ಒಂದಾದ ದಾಸೋಹ ಭವನದಲ್ಲೂ ಸಹ ಶಾಸಕ ಎಂಆರ್ ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಶಿವರಾತ್ರಿ ಹಾಗೂ ಹಬ್ಬ ಹರಿದಿನ ವಿಶೇಷ ದಿನಗಳಲ್ಲಿ ಲಕ್ಷಾಂತರ ಭಕ್ತರು ಭೇಟಿ ನೀಡುವ ಹಿನ್ನೆಲೆಯಲ್ಲಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ವಿಶೇಷವಾಗಿ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಶೌಚಾಲಯಗಳ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಪ್ಲಾಸ್ಟಿಕ್ ಮುಕ್ತ ಪ್ರದೇಶವನ್ನಾಗಿ ಮಲೆಮಾದೇಶ್ವರ ಬೆಟ್ಟವನ್ನು ಕ್ರಮಕೈಗೊಳ್ಳುವ ನಿಟ್ಟಿನಲ್ಲಿ ಅಧಿಕಾರಿ, ಸಿಬ್ಬಂದಿ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.ಇದೆ ವೇಳೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಕಾರ್ಯದರ್ಶಿ ಎ.ಇ.ರಘು ಹಾಗೂ ಉಪ ಕಾರ್ಯದರ್ಶಿ ಚಂದ್ರಶೇಖರ್ ಪಿಡಬ್ಲ್ಯೂಡಿ ಇಂಜಿನಿಯರ್ ಚಿನ್ನಣ್ಣ ತೋಟಗಾರಿಕೆ ಉಪ ನಿರ್ದೇಶಕ ಶಿವಪ್ರಸಾದ್ ಹಾಗೂ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ಉಪಸ್ಥಿತರಿದ್ದರು.