ಸಾರಾಂಶ
ಹುಬ್ಬಳ್ಳಿ: ಅವಳಿ ನಗರ ಸಮಗ್ರ ಅಭಿವೃದ್ಧಿ ಕುರಿತು ನೀಲನಕ್ಷೆ ಸಿದ್ಧಪಡಿಸಬೇಕು. ಅದಕ್ಕೆ ಪೂರಕ ಮಾಹಿತಿಗಳನ್ನು ಸಂಗ್ರಹಿಸಿ ವರದಿ ಸಲ್ಲಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳಿಗೆ ಸೂಚಿಸಿದರು.
ಹು-ಧಾ ಸಮಗ್ರ ಅಭಿವೃದ್ಧಿ (ಟೌನ್ ಪ್ಲಾನಿಂಗ್) ಕುರಿತು ಬುಧವಾರ ಬೆಂಗಳೂರಿನಲ್ಲಿ ಅವರು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅಗತ್ಯ ಸೂಚನೆ ನೀಡಿದರು.ಹುಬ್ಬಳ್ಳಿ- ಧಾರವಾಡ ರಾಜ್ಯದ ಎರಡನೇ ರಾಜಧಾನಿಯಂದೇ ಬಿಂಬಿತವಾಗಿದೆ. ಅತೀ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಒಂದಾಗಿದೆ. ನಗರವನ್ನು ಇನ್ನಷ್ಟು ಸುಂದರ ಮತ್ತು ಮಾದರಿ ನಗರವಾನ್ನಾಗಿಸುವ ಅವಶ್ಯಕತೆ ಇದ್ದು, ಮಾಸ್ಟರ್ ಪ್ಲಾನ್ ಅವಶ್ಯಕತೆಯಿದೆ. ಹೀಗಾಗಿ ಹು-ಧಾ ಮಹಾನಗರ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಸಂಬಂಧಪಟ್ಟ ಇಲಾಖೆಗಳ ಸಹಯೋಗದೊಂದಿಗೆ ನಿಗದಿ ಪಡಿಸಿದ ಸಂಸ್ಥೆಗಳಿಗೆ ಸಮಗ್ರ ಮಾಹಿತಿ ನೀಡಬೇಕು ಎಂದರು.
ಯುಜಿಡಿ, ಘನತ್ಯಾಜ್ಯ ವಿಲೇವಾರಿ, ಕುಡಿಯುವ ನೀರಿನ ಸಂಸ್ಕರಣಾ ಘಟಕ, ಹಸರೀಕರಣ, ಕೊಳಗೇರಿಗಳ (ಸ್ಲಂ) ಅಭಿವೃದ್ಧಿ ಮಾಡುವುದು ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚೆ ಮಾಡಿದ ಸಚಿವರು, ಈಗಾಗಲೇ ಕಲಬುರಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಸಮೀಕ್ಷೆ ಕೈಗೊಂಡು ಮಾಸ್ಟರ್ ಪ್ಲಾನ್ ಸಿದ್ಧ ಪಡಿಸಲಾಗುತ್ತಿದೆ. ಅದೇ ಮಾದರಿಯಲ್ಲಿ ಅವಳಿ ನಗರದ ಅಭಿವೃದ್ಧಿಗೆ ಗುರುತು ಪಡಿಸಿದ ಸಂಸ್ಥೆಗಳಿಗೆ ಅವಶ್ಯವಿರುವ ಮಾಹಿತಿಯನ್ನು ನೀಡಿ, ವಿಸ್ತೃತ ಯೋಜನಾವರದಿ ಸಲ್ಲಿಸಲು ಅಧಿಕಾರಿಗಳಿಗೆ ಹೇಳಿದರು.ಶಾಸಕರು, ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ ಅಬ್ಬಯ್ಯ ಮಾತನಾಡಿ, ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರ ನಿಗದಿತ ಅವಧಿಯೊಳಗೆ ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಹ್ಯುಮನ್ ಸೆಟ್ಲ್‌ಮೆಂಟ್ ಸಂಸ್ಥೆಯ ಪ್ರತಿನಿಧಿಗಳೊಂದಿಗೆ ಸಹಕರಿಸಿ ಅವಳಿ ನಗರದ ಮಾಸ್ಟರ್ ಪ್ಲಾನ್ ಸಿದ್ಧ ಪಡಿಸಲು ಅಗತ್ಯ ಮಾಹಿತಿ ನೀಡುವಂತೆ ಸಲಹೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಹುಬ್ಬಳ್ಳಿ- ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷ ಬಿರಾದಾರ, ಹು-ಧಾ ಮಹಾನಗರ ಪಾಲಿಕೆ ಅಧೀಕ್ಷಕ ಎಂಜಿನಿಯರ್ ವಿಜಯ ಕುಮಾರ್, ಟೌನ್ ಪ್ಲಾನರ್ ಮುಧೋಳಕರ್, ಇಂಡಿಯನ್ ಇನ್ಸಿಟಿಟ್ಯೂಟ್ ಆಫ್ ಹ್ಯುಮನ್ ಸೆಟ್ಲ್‌ಮೆಂಟ್ ಸಂಸ್ಥೆ ಪ್ರತಿನಿಧಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.----
16ಎಚ್‌ಯುಬಿ32ಹು-ಧಾ ಸಮಗ್ರ ಅಭಿವೃದ್ಧಿ ಕುರಿತು ಬುಧವಾರ ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.