ಸಾರ್ವಜನಿಕರಲ್ಲಿ ಮಹಿಳೆ ಮತ್ತು ಮಕ್ಕಳ ಕುರಿತು ಅನುಷ್ಠಾನದಲ್ಲಿರುವ ಕಾಯ್ದೆ, ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲು ನೂರು ದಿನಗಳ ಅರಿವು ಕಾರ್ಯಕ್ರಮ ಸಹಾಯಕವಾಗಲಿದೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಧಾರವಾಡ: ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಹಾಗೂ ಜೀವನದ ಗುಣಮಟ್ಟ ಸುಧಾರಣೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಅನೇಕ ರೀತಿಯ ಶೈಕ್ಷಣಿಕ, ಸಾಮಾಜಿಕ, ಆರ್ಥಿಕ ಕಲ್ಯಾಣ ಕಾರ್ಯಕ್ರಮ ಜಾರಿಗೊಳಿಸಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಇತರ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ, ಮಹಿಳೆಯರ ಸಮೃದ್ಧಿ ಜೀವನಕ್ಕೆ ಶ್ರಮಿಸಬೇಕು ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ಹೇಳಿದರು.

ಜಿಪಂ ಸಭಾಂಗಣದಲ್ಲಿ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.

ಸರ್ಕಾರ ಮತ್ತು ನ್ಯಾಯಾಲಯ ನೀಡಿರುವ ಸೂಚನೆಯಂತೆ ಮಕ್ಕಳ ಕ್ಷೇತ್ರಗಳ ಕೆಲಸ ಮಾಡುವ ಎಲ್ಲ ಇಲಾಖೆಗಳು ನೂರು ದಿನಗಳ ಅರಿವು ಕಾರ್ಯಕ್ರಮಕ್ಕೆ ಕ್ರಿಯಾ ಯೋಜನೆ ರೂಪಿಸಿ, ಕ್ರಮವಹಿಸಬೇಕು. ಸಾರ್ವಜನಿಕರಲ್ಲಿ ಮಹಿಳೆ ಮತ್ತು ಮಕ್ಕಳ ಕುರಿತು ಅನುಷ್ಠಾನದಲ್ಲಿರುವ ಕಾಯ್ದೆ, ಕಾರ್ಯಕ್ರಮಗಳ ಕುರಿತು ಜಾಗೃತಿ ಮೂಡಿಸಲು ನೂರು ದಿನಗಳ ಅರಿವು ಕಾರ್ಯಕ್ರಮ ಸಹಾಯಕವಾಗಲಿದೆ ಎಂದರು.

ಇಲಾಖೆಯಿಂದ ಹಮ್ಮಿಕೊಳ್ಳುವ ಜಾಗೃತಿ ಕಾರ್ಯಕ್ರಮಗಳನ್ನು ಕೇವಲ ಇಲಾಖೆಯ ಅನುಕೂಲಕ್ಕೆ ತಕ್ಕಂತೆ ನಡೆಸದೇ, ಹೆಚ್ಚು ಪ್ರಕರಣಗಳು ವರದಿಯಾಗುವ ನಿರ್ದಿಷ್ಟ ಪ್ರದೇಶಗಳಲ್ಲಿ ಅರಿವು ಕಾರ್ಯಕ್ರಮಗಳನ್ನು ಆಯೋಜಿಸಬೇಕು. ಜಾನಪದ, ನಾಟಕ, ಸಂಗೀತ, ಕಿರು ಚಲನಚಿತ್ರ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾರ್ವಜನಿಕರಲ್ಲಿ ವ್ಯಾಪಕ ಜನಜಾಗೃತಿ ಮೂಡಿಸಬೇಕಾದ ಅವಶ್ಯಕತೆಯಿದೆ ಎಂದರು.

ನಮ್ಮ ಅನುಕೂಲಕ್ಕೆ ತಕ್ಕಂತೆ ಕಾರ್ಯಕ್ರಮ ಮಾಡಿದರೆ, ಯಾವುದೇ ಪ್ರಯೋಜನವಿಲ್ಲ. ಬದಲಾಗಿ, ಯಾವ ಪ್ರದೇಶಗಳಲ್ಲಿ ಅಥವಾ ಯಾವ ಜನಾಂಗದ ವಾಸ ಸ್ಥಳಗಳಲ್ಲಿ ಹೆಚ್ಚು ಪ್ರಕರಣಗಳು ಕಂಡುಬರುತ್ತಿವೆಯೋ ಅಲ್ಲಿಗೆ ತೆರಳಿ ಜಾಗೃತಿ ಮೂಡಿಸಬೇಕು. ಆಗ ಮಾತ್ರ ನಾವು ಮಾಡುವ ಕೆಲಸಕ್ಕೆ ಅರ್ಥ ಬರುತ್ತದೆ. ಏಪ್ರಿಲ್ 2025 ರಿಂದ ನವೆಂಬರ್ ಅವಧಿಯಲ್ಲಿ ಜಿಲ್ಲೆಯಲ್ಲಿನ 24 ಬಾಲ್ಯ ವಿವಾಹಗಳನ್ನು ತಡೆಯಲಾಗಿದ್ದು, ಮೂರು ಬಾಲ್ಯ ವಿವಾಹವಾಗಿವೆ. ಈ ಬಗ್ಗೆ ಅಧ್ಯಯನವಾಗಿ ಪರಿಹಾರ ಸೂಚಿಸಬೇಕು. ಬಾಲ್ಯ ವಿವಾಹಗಳನ್ನು ತಡೆದು, ಎಫ್‌ಐಆರ್ ದಾಖಲಿಸಿ, ಬಾಲ್ಯ ವಿವಾಹಕ್ಕೆ ಕಾರಣರಾದವರಿಗೆ ಶಿಕ್ಷೆ ಆಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಬಾಲ್ಯವಿವಾಹವನ್ನು ತಡೆಯುವ ಸಂದರ್ಭದಲ್ಲಿ ಅಥವಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸುವಾಗ ಮಾಹಿತಿ ನೀಡಿದವರಿಗೆ ಯಾವುದೇ ರೀತಿಯ ತೊಂದರೆಗಳಾದಲ್ಲಿ ಅಥವಾ ಬೆದರಿಕೆಗಳು ಬಂದಲ್ಲಿ ಭಯಪಡುವ ಅಗತ್ಯವಿಲ್ಲ. ಅಂತಹ ಸಂದರ್ಭಗಳಲ್ಲಿ ಕೂಡಲೇ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಹೇಳಿದರು.

ಜಿಪಂ ಸಿಇಒ ಭುವನೇಶ ಪಾಟೀಲ ಮಾತನಾಡಿ, ಮಹಿಳೆಯರ ಸುರಕ್ಷತೆ, ಭದ್ರತೆ ಮತ್ತು ಸಬಲೀಕರಣಕ್ಕಾಗಿ ಏಕೀಕೃತ ಯೋಜನೆ ಆಗಿರುವ ಮಿಷನ್ ಶಕ್ತಿ - ಸಮಗ್ರ ಮಹಿಳಾ ಸಬಲೀಕರಣ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಲು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಎಫ್. ದೊಡ್ಡಮನಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಡಾ. ಎಚ್.ಎಚ್.ಕುಕನೂರ ಸೇರಿದಂತೆ ಅಧಿಕಾರಿಗಳಿದ್ದರು.