ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ಮೇಕೆದಾಟು ಯೋಜನೆ ವಿಚಾರದಲ್ಲಿ ರಾಜ್ಯಕ್ಕೆ ದೊರೆತಿರುವ ಕಾನೂನಾತ್ಮಕ ವಿಜಯ ಬಗ್ಗೆ ಸಂಪುಟ ಸಭೆಯಲ್ಲಿ ಚರ್ಚಿಸಿದ್ದು, ಅಡಚಣೆ ನಿವಾರಣೆ ಆಗಿರುವುದರಿಂದ ಯೋಜನೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಈ ಬಗ್ಗೆ ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾನೂನು ಸಚಿವ ಎಚ್.ಕೆ.ಪಾಟೀಲ್, ‘ಮೇಕೆದಾಟು ಯೋಜನೆಗೆ ರಾಜಕೀಯ, ಕಾನೂನಾತ್ಮಕ ಹೋರಾಟ ಮಾಡಿದ್ದ ಸಿಎಂ, ಡಿಸಿಎಂಗೆ ಸಭೆಯಲ್ಲಿ ಅಭಿನಂದನೆ ಸಲ್ಲಿಸಲಾಯಿತು’ ಎಂದರು.
ಕಾಂಗ್ರೆಸ್ ಪಾದಯಾತ್ರೆ ಮಾಡಿತ್ತು:ರಾಜ್ಯ ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಚಾರದಲ್ಲಿ ಪಾದಯಾತ್ರೆ ಮಾಡಿತ್ತು. ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಜೆಟ್‌ನಲ್ಲಿ ಯೋಜನೆ ಘೋಷಿಸಿದ್ದೆವು. ರಾಜಕೀಯ, ಕಾನೂನಾತ್ಮಕ ಹೋರಾಟವನ್ನೂ ನಡೆಸಿದ್ದೆವು. ಇದರ ವಿರುದ್ಧ ತಮಿಳುನಾಡಿನರು ಸುಪ್ರೀಂ ಕೋರ್ಟ್‌ಗೆ ಹೋಗಿದ್ದರು. ಆದರೆ ಅವರ ಅರ್ಜಿ ವಜಾ ಆಗಿದೆ. ಆ ಮೂಲಕ ಮೇಕೆದಾಟು ಯೋಜನೆಗೆ ಮುಂದಿನ ಹೆಜ್ಜೆಗಳಿಗೆ ಹಸಿರು ನಿಶಾನೆ ತೋರಿದಂತಾಗಿದೆ ಎಂದು ಎಚ್.ಕೆ.ಪಾಟೀಲ್ ಹೇಳಿದರು.
ಯೋಜನೆ ಬಗ್ಗೆ ಮುಂದೇನು ಎಂಬ ಕುರಿತು ಸಂಪುಟ ಸಭೆಯಲ್ಲಿ ಚರ್ಚೆ ನಡೆದಿದೆ. ಯೋಜನೆಗೆ ಅಗತ್ಯವಿರುವ ಕಾನೂನಾತ್ಮಕ ಹಾಗೂ ಇತರೆ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಿಎಂ ಸೂಚಿಸಿದ್ದಾರೆ. ಮೊದಲು ಯಾವ ಹೆಜ್ಜೆ ಇಡಬೇಕು ಎಂಬ ಬಗ್ಗೆ ತಿಳಿಸಿದ್ದಾರೆ. ಏನೆಲ್ಲಾ ಸಿದ್ಧತೆ ಮಾಡಿಕೊಳ್ಳಲು ಸೂಚಿಸಲಾಗಿದೆ ಎಂಬುದನ್ನು ಈಗಲೇ ಹೇಳಲಾಗುವುದಿಲ್ಲ ಎಂದರು.ಮೇಕೆದಾಟು ತೀರ್ಪು ನಮಗಷ್ಟೇ ಅಲ್ಲ ತ.ನಾಡು, ಪುದುಚೆರಿಗೂ ಸಂದ ಜಯ:
ಮೇಕೆದಾಟು ವಿರುದ್ಧದ ತಮಿಳುನಾಡು ಅರ್ಜಿ ವಜಾಗೊಳಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಇಡೀ ರಾಜ್ಯಕ್ಕೆ ಸಂತೋಷದಾಯಕ. ನ್ಯಾಯಾಲಯದ ಮಾರ್ಗದರ್ಶನಕ್ಕೆ ನಾವು ಬದ್ಧವಾಗಿದ್ದು, ನಮ್ಮ ನೆಲದಲ್ಲಿ ಅಣೆಕಟ್ಟು ನಿರ್ಮಿಸುವ ಯೋಜನೆ ಮುಂದುವರೆಸುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಿವಕುಮಾರ್ ಬಳಿ ಸಿಡಬ್ಲ್ಯುಸಿ ಈ ಯೋಜನೆಗೆ ಸಹಕಾರ ನೀಡುವುದೇ ಎಂದು ಕೇಳಿದಾಗ, ‘ಈ ಯೋಜನೆಗೆ ಅನುಮತಿ ನೀಡದೆ ಬೇರೆ ಆಯ್ಕೆ ಅವರ ಮುಂದೆ ಇಲ್ಲ. ಅವರು ನ್ಯಾಯ ಒದಗಿಸಿಕೊಡಲೇಬೇಕು. ಈ ಯೋಜನೆಯ ತಾಂತ್ರಿಕ ಅಂಶಗಳ ಅನುಮತಿ ಪಡೆಯಲಾಗುವುದು. ಇಷ್ಟು ದಿನ ಈ ಪ್ರಕರಣದ ಅರ್ಜಿ ವಿಚಾರಣೆ ನ್ಯಾಯಾಲಯದ ಮುಂದೆ ಇದೆ, ಯಾವುದೇ ತೀರ್ಮಾನ ಮಾಡಲು ಆಗುವುದಿಲ್ಲ ಎಂದು ಹೇಳುತ್ತಿದ್ದರು. ಈಗ ಆ ಕಾರಣ ಹೇಳಲು ಆಗುವುದಿಲ್ಲ’ ಎಂದರು.ನ್ಯಾಯಾಲಯದ ಈ ತೀರ್ಮಾನ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಎಲ್ಲರೂ ಸಂತೋಷ ವ್ಯಕ್ತಪಡಿಸಿದ್ದಾರೆ. ಯೋಜನೆಗೆ ಅಗತ್ಯ ಸಹಕಾರ ನೀಡಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಲು ಜಲ ಶಕ್ತಿ ಸಚಿವರ ಭೇಟಿ ಹಾಗೂ ಪ್ರಧಾನಮಂತ್ರಿಗಳ ಭೇಟಿಗೆ ರಾಜ್ಯದ ಸಂಸದರನ್ನು ಒಳಗೊಂಡ ನಿಯೋಗವನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತೇನೆ ಎಂದು ಇದೇ ವೇಳೆ ಡಿ.ಕೆ.ಶಿವಕುಮಾರ್ ಹೇಳಿದರು.ಮೇಕೆದಾಟು ವಿಚಾರದಲ್ಲಿ ಯಾವುದೇ ದ್ವೇಷದ ಮನೋಭಾವವಿಲ್ಲ. ಈ ಯೋಜನೆಯಿಂದ ತಮಿಳುನಾಡಿಗೇ ಹೆಚ್ಚು ಉಪಯೋಗವಾಗಲಿದೆ. ಯಾವಾಗಲೇ ನೀರಿನ ಕೊರತೆ ಉಂಟಾದರೂ ತಮಿಳುನಾಡಿಗೆ ನೀರು ಹರಿಸಲು ಈ ಸಮತೋಲಿತ ಅಣೆಕಟ್ಟು ನೆರವಾಗಲಿದೆ. ತಮಿಳುನಾಡು ಸೇರಿ ಬೇರೆ ರಾಜ್ಯಗಳಿಂದ ಬರುವ ಜನರಿಗೂ ನೀರು ಒದಗಿಸಲಾಗುವುದು. ಹಾಗಾಗಿ ಇದು ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು, ಪುದುಚೆರಿಗೂ ಸಂದ ಜಯ. ನಾವೆಲ್ಲರೂ ಒಟ್ಟಾಗಿ ಮಾನವೀಯ ನೆಲೆಯಲ್ಲಿ ಸೇರಿ ಕೆಲಸ ಮಾಡೋಣ ಎಂದು ನೆರೆ ರಾಜ್ಯಗಳಿಗೆ ಮನವಿ ಮಾಡುತ್ತೇನೆ ಎಂದರು.
ಕರ್ನಾಟಕವು ತಮಿಳುನಾಡಿನ ಪಾಲಿನ 177 ಟಿಎಂಸಿ ನೀರು ಬಿಡಲೇಬೇಕು ಎಂದು ನಿರ್ದೇಶನ ನೀಡಿ, ಮೇಕೆದಾಟು ವಿರುದ್ಧ ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ. ಈ ಯೋಜನೆ ಸಂಬಂಧ ಎಲ್ಲಾ ತೀರ್ಮಾನಗಳನ್ನು ಕೇಂದ್ರ ಜಲ ಆಯೋಗ (ಸಿಡಬ್ಲ್ಯುಸಿ) ಹಾಗೂ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಕೈಗೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಹೀಗಾಗಿ ಈ ವಿಚಾರವಾಗಿ ಮತ್ತೆ ನ್ಯಾಯಾಲಯದ ಮುಂದೆ ಹೋಗುವ ಪ್ರಶ್ನೆ ಉದ್ಭವಿಸುವುದಿಲ್ಲ. ಇನ್ನು ಕಾನೂನು ಚೌಕಟ್ಟಿನಲ್ಲಿ ಈ ಯೋಜನೆಗೆ ಅಗತ್ಯ ಇಲಾಖೆಗಳಿಂದ ಅನುಮತಿ ಪಡೆಯಲಾಗುವುದು. ನಾವು ಈಗಾಗಲೇ ಮೇಕೆದಾಟು ಕಚೇರಿಯನ್ನು ಹಾರೋಬೆಲೆಯಲ್ಲಿ ಆರಂಭಿಸಿದ್ದೇವೆ. ಯೋಜನೆಗೆ ಅಗತ್ಯವಿರುವ ಅರಣ್ಯ ಭೂಮಿಗೆ ಪರ್ಯಾಯವಾಗಿ ಕಂದಾಯ ಭೂಮಿ ನೀಡಲು ಸ್ಥಳ ಗುರುತಿಸಲಾಗಿದೆ ಎಂದು ತಿಳಿಸಿದರು.ನಾವು ತಮಿಳುನಾಡಿಗೆ ಪ್ರತಿ ವರ್ಷ 177 ಟಿಎಂಸಿ ನೀರು ಹರಿಸಬೇಕು. ಈ ವರ್ಷ ನ.13 ರ ವೇಳೆಗೆ 148 ಟಿಎಂಸಿ ನೀರು ಹರಿಸಬೇಕಿತ್ತು. ಆದರೆ ಈವರೆಗೆ 299 ಟಿಎಂಸಿ ನೀರು ಹರಿಸಿದ್ದೇವೆ. ವಾಡಿಕೆಗಿಂತ ಎರಡು ಪಟ್ಟು. ಹೆಚ್ಚುವರಿ ನೀರು ಸಮುದ್ರ ಪಾಲಾಗಿದೆ. ತಮಿಳುನಾಡಿಗೂ ಬಳಸಿಕೊಳ್ಳಲು ಆಗಿಲ್ಲ. ನಾವು ಈ ಎಲ್ಲಾ ಮಾಹಿತಿಗಳನ್ನು ನ್ಯಾಯಾಲಗಳ ಮುಂದೆ ಇಟ್ಟಿದ್ದೆವು. ಇದೇ ಕಾರಣಕ್ಕೆ ಕಳೆದ ವಾರ ನಾನು ದೆಹಲಿಗೆ ಹೋಗಿ, ನಮ್ಮ ಕಾನೂನು ತಂಡದ ಜೊತೆ ಚರ್ಚೆ ಮಾಡಿ, ನಮ್ಮ ನಿಲುವು ಸ್ಪಷ್ಟಪಡಿಸಿದ್ದೆ. ನಮ್ಮ ಕಾನೂನು ಹೋರಾಟಕ್ಕೆ ಬೆಂಬಲ ನೀಡಿದ ಎಲ್ಲ ನಾಗರಿಕರನ್ನು ಅಭಿನಂದಿಸುತ್ತೇನೆ ಎಂದರು.
;Resize=(128,128))
;Resize=(128,128))
;Resize=(128,128))
;Resize=(128,128))