ಕೆರೆಯ ಹೂಳೆತ್ತುವ ಅಥವಾ ಸರ್ಕಾರಿ ಉದ್ದೇಶಗಳಿಗೆ ಕೆರೆಯ ಅಂಗಳದ ಮಣ್ಣು ಬಳಸಿಕೊಳ್ಳುವ ಸಂಬಂಧ ೨೧ರಂದು ಜಿಲ್ಲಾಧಿಕಾರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗಸೂಚಿ ನಿಗದಿಗೊಳಿಸುವಂತೆ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರುಕೆರೆಯ ಹೂಳೆತ್ತುವ ಅಥವಾ ಸರ್ಕಾರಿ ಉದ್ದೇಶಗಳಿಗೆ ಕೆರೆಯ ಅಂಗಳದ ಮಣ್ಣು ಬಳಸಿಕೊಳ್ಳುವ ಸಂಬಂಧ ೨೧ರಂದು ಜಿಲ್ಲಾಧಿಕಾರಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾರ್ಗಸೂಚಿ ನಿಗದಿಗೊಳಿಸುವಂತೆ ರೈಲ್ವೆ ಹಾಗೂ ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ಜಿಲ್ಲಾ ಪಂಚಾಯತಿಯಲ್ಲಿ ಶುಕ್ರವಾರ ದಿಶಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು, ರೈಲ್ವೆ ಯೋಜನೆಗೆ ಕೆರೆಯ ಅಂಗಳದಲ್ಲಿ ಮಣ್ಣು ತೆಗೆದುಕೊಂಡು ಹೋಗಿರುವ ಹಿನ್ನೆಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ರೈಲ್ವೆ ಇಲಾಖೆಯ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಬಗ್ಗೆ ಸಭೆಯಲ್ಲಿ ಚರ್ಚೆಗೆ ಮುಂದಾದರು. ಕೆರೆಯ ಅಂಗಳದ ಮಣ್ಣನ್ನು ರೈತರು ಮೊದಲಿನಿಂದಲೂ ತಮ್ಮ ತೋಟಗಳಿಗೆ ಬಳಸಿಕೊಳ್ಳುವ ವಾಡಿಕೆಯಿದೆ. ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇದೆ. ಅಲ್ಲದೆ, ಕೆರೆಯ ಅಂಗಳದ ಮಣ್ಣನ್ನು ಇತರೆ ಉದ್ದೇಶಗಳಿಗೂ ಬಳಸಿಕೊಳ್ಳಲಾಗುತ್ತಿದೆ. ಆದರೆ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಈ ಪ್ರಕ್ರಿಯೆಗೆ ಅಡ್ಡಿಯಾಗಿದ್ದು, ಸರ್ಕಾರಿ ಉದ್ದೇಶಕ್ಕೆ ಎಂದು ಹೇಳಿದರೂ ಬಿಡದೆ ರೈಲ್ವೆ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಲ್ಲದೆ, ಸಣ್ಣ ನೀರಾವರಿ ಇಲಾಖೆಯಲ್ಲದೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳೂ ರೈತರಿಗೆ ತೊಂದರೆ ಕೊಡುತ್ತಿರುವುದು ಕಂಡು ಬಂದಿದೆ ಎಂಬ ಇತ್ಯಾದಿ ವಿಷಯಗಳು ಸಭೆಯಲ್ಲಿ ವ್ಯಾಪಕವಾಗಿ ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪೊಲೀಸ್ ಅಧೀಕ್ಷಕರು ಸಂಬಂಧಿಸಿದ ಇಲಾಖೆ ಅಧಿಕಾರಿಗಳೊಂದಿಗೆ ೨೧ರಂದು ಸಭೆ ನಡೆಸಿ ಇದಕ್ಕೆ ಒಂದು ಸ್ಪಷ್ಟ ಮಾರ್ಗಸೂಚಿ ಸಿದ್ಧಪಡಿಸಿ ತಮಗೆ ಕಳುಹಿಸುವಂತೆ ಸಭೆಯಲ್ಲಿ ಸೂಚಿಸಿದರು.ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ಬೇಸಿಗೆ ತೀವ್ರವಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಭಾಗಿತ್ವದಲ್ಲಿ ಹಲವು ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಿದೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದಿಂದ ಜಿಲ್ಲೆಯ ಕುಡಿಯುವ ನೀರಿನ ತೀವ್ರ ಅಭಾವ ಅನುಭವಿಸುತ್ತಿರುವ ತಾಲೂಕುಗಳಾದ ಮಧುಗಿರಿ, ತುಮಕೂರು ಗ್ರಾಮಾಂತರ, ಕೊರಟಗೆರೆ ಇತರೆ ತಾಲೂಕುಗಳಲ್ಲಿ ತುರ್ತು ಕಾಮಗಾರಿ ಕೈಗೊಳ್ಳಲು ಯೋಜನೆಯನ್ನು ನೀಡಲಾಗಿದೆ. ಈ ಎಲ್ಲಾ ಯೋಜನೆಗಳ ಅನುಷ್ಠಾನ ಸಂಬಂಧಿಸಿದಂತೆ ೨೯ರಂದು ಸಭೆ ನಡೆಸಿ ಸಮಗ್ರ ವರದಿ ತಯಾರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ಆದ್ಯತೆ ಮೇಲೆ ಬಗೆಹರಿಸುವಂತೆ ಸಚಿವರು ಸಭೆಯಲ್ಲಿ ಸೂಚಿಸಿದರು. ಕೇಂದ್ರ ಸರ್ಕಾರ ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಗೆ ಪರ್ಯಾಯವಾಗಿ ಜಾರಿಗೆ ತಂದಿರುವ ಜೀ ರಾಮ್ ಜಿ ಯೋಜನೆಯು ಜುಲೈ ೧ರಿಂದ ಅಧಿಕೃತವಾಗಿ ಆರಂಭವಾಗಲಿದ್ದು, ಈ ಯೋಜನೆ ವ್ಯಾಪ್ತಿಗೆ ಗ್ರಾಮೀಣ ಪ್ರದೇಶದ ಜನರಿಗೆ ಉತ್ತಮ ಉದ್ಯೋಗಾವಕಾಶಗಳು ಸಿಗಲಿವೆ ಎಂದರು.

ಸಭೆಯಲ್ಲಿ ನವದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಅಶ್ವಿಜ ಉಪಸ್ಥಿತರಿದ್ದರು.