ಸಾರಾಂಶ
ಶಿಕ್ಷಣ ಇಲಾಖೆಯು ಇಂತಹ ಕಾರ್ಯಾಗಾರಗಳಿಂದ ಎಲ್ಲ ವಿಷಯ ಶಿಕ್ಷಕರು ಒಂದೆಡೆ ಸೇರಿ ಸಮಗ್ರವಾಗಿ ಚಿಂತನೆ ಮಾಡಿ, ಚರ್ಚಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮೀಕರಿಸಲು ಯೋಜನೆ ರೂಪಿಸಲು ಸಹಕಾರಿ
ಲಕ್ಷ್ಮೇಶ್ವರ: ಮಾರ್ಚ್, ಏಪ್ರಿಲ್ ತಿಂಗಳು ಜರುಗಲಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆಗಳಲ್ಲಿ ನಮ್ಮ ಮಕ್ಕಳನ್ನು ಸರ್ವ ರೀತಿಯಿಂದ ಸಜ್ಜುಗೊಳಿಸಲು ಶಿಕ್ಷಣ ಇಲಾಖೆಯು 20 ಅಂಶಗಳ ಯೋಜನೆ ರೂಪಿಸಿದೆ ಎಂದು ಬಿಇಓ ಎಚ್.ಎನ್. ನಾಯ್ಕ ಹೇಳಿದರು.
ಮಂಗಳವಾರ ಸಮೀಪದ ಶಿಗ್ಲಿಯ ಕೆ.ಜಿ. ಮುದಗಲ್ ಪ್ರೌಢಶಾಲೆಯಲ್ಲಿ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳ ಎಲ್ಲ ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರೌಢಶಾಲೆಗಳ ಕನ್ನಡ ಮತ್ತು ಸಮಾಜ ವಿಜ್ಞಾನ ವಿಷಯಗಳ ವಿಷಯ ಶಿಕ್ಷಕರಿಗಾಗಿ ಹಮ್ಮಿಕೊಳ್ಳಲಾದ ಪ್ರಶ್ನೆ ಪತ್ರಿಕೆ ರಚನಾ ಕಾರ್ಯಾಗಾರ ಹಾಗೂ ವಿಷಯ ಪರಿವಾರ ಸಭೆ ಉದ್ಘಾಟಿಸಿ ಮಾತನಾಡಿದರು.ಶಿಕ್ಷಣ ಇಲಾಖೆಯು ಇಂತಹ ಕಾರ್ಯಾಗಾರಗಳಿಂದ ಎಲ್ಲ ವಿಷಯ ಶಿಕ್ಷಕರು ಒಂದೆಡೆ ಸೇರಿ ಸಮಗ್ರವಾಗಿ ಚಿಂತನೆ ಮಾಡಿ, ಚರ್ಚಿಸಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮೀಕರಿಸಲು ಯೋಜನೆ ರೂಪಿಸಲು ಸಹಕಾರಿಯಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕೆ.ಜಿ.ಮುದಗಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಹಾಗೂ ಲಕ್ಷ್ಮೇಶ್ವರ ತಾಲೂಕು ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಲ್.ಎಸ್. ಅರಳಹಳ್ಳಿ ಮಾತನಾಡಿದರು.ಮುಖ್ಯೋಪಾಧ್ಯಾಯ ಎಸ್.ಕೆ. ಹವಾಲ್ದಾರ ಹಾಗೂ ಕೆ.ವೈ. ಮೇಲಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಸಿ.ಬಿ. ಮೊಗಲಿ, ಇ.ಸಿ.ಓ ಉಮೇಶ ಹುಚ್ಚಯ್ಯನಮಠ, ಹರೀಶ ಎಸ್, ಪ್ರೌಢ ವಿಭಾಗದ ಬಿ.ಆರ್.ಪಿ ಈಶ್ವರ ಮೆಡ್ಲೇರಿ, ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪ್ರಕಾಶ ನಡುವಿನಹಳ್ಳಿ ಇದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಹಿರಿಯ ಶಿಕ್ಷಕ ಎಂ.ಎಸ್. ಮಳಿಮಠ ಸ್ವಾಗತಿಸಿದರು.
ಎಸ್.ಜಿ.ರಾಮೇನಹಳ್ಳಿ ನಿರೂಪಿಸಿದರು. ಉಮೇಶ ಹುಚ್ಚಯ್ಯನಮಠ ವಂದಿಸಿದರು. ಎರಡೂ ತಾಲೂಕುಗಳ ಕನ್ನಡ ಹಾಗೂ ಸಮಾಜವಿಜ್ಞಾನ ವಿಷಯಗಳ 100 ಕ್ಕೂ ಅಧಿಕ ಪ್ರೌಢಶಾಲಾ ಶಿಕ್ಷಕರು ಹಾಜರಿದ್ದರು.