ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ: ಡಾ.ಶಿವಕುಮಾರ್

| Published : Sep 08 2025, 01:00 AM IST

ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಿ: ಡಾ.ಶಿವಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ದೇಹ ರಚನೆಯಲ್ಲಿ ಮಾತ್ರ ಹೆಣ್ಣು ಮತ್ತು ಗಂಡು ಎನ್ನುವ ಭಿನ್ನತೆ ಇದೆ. ಆದರೆ, ನಮ್ಮ ದೇಹದಲ್ಲಿರುವ ಆತ್ಮಕ್ಕೆ ಲಿಂಗವಿಲ್ಲ. ಜಾತಿ ಮತ್ತು ಧರ್ಮವಿಲ್ಲ. ಆತ್ಮ ಎನ್ನುವುದು ನಮ್ಮೊಳಗಿನ ಚೈತನ್ಯ. ನಮ್ಮ ಅಂತಃಸತ್ವವನ್ನು ವಿಕಸನಗೊಳಿಸಿಕೊಳ್ಳುವ ಮೂಲಕ ನಾವು ಸಾಧಕರಾಗಬೇಕು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಕಾಲೇಜು ಹಂತದಲ್ಲಿ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಬೆಂಗಳೂರಿನ ಅಕ್ಕ ಐಎಎಸ್ ಅಕಾಡಮಿ ಸಂಸ್ಥಾಪಕ ನಿರ್ದೇಶಕ ಡಾ.ಶಿವಕುಮಾರ್ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ವತಿಯಿಂದ ಪದವಿ ನಂತರ ಮುಂದೇನು? ಎಂಬ ನಾಗರಿಕ ಸೇವಾ ಪರೀಕ್ಷೆಗಳನ್ನು ಕುರಿತಂತೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಮತ್ತು ಸಂವಾದದಲ್ಲಿ ಮಾತನಾಡಿದರು.

ದೇಹ ರಚನೆಯಲ್ಲಿ ಮಾತ್ರ ಹೆಣ್ಣು ಮತ್ತು ಗಂಡು ಎನ್ನುವ ಭಿನ್ನತೆ ಇದೆ. ಆದರೆ, ನಮ್ಮ ದೇಹದಲ್ಲಿರುವ ಆತ್ಮಕ್ಕೆ ಲಿಂಗವಿಲ್ಲ. ಜಾತಿ ಮತ್ತು ಧರ್ಮವಿಲ್ಲ. ಆತ್ಮ ಎನ್ನುವುದು ನಮ್ಮೊಳಗಿನ ಚೈತನ್ಯ. ನಮ್ಮ ಅಂತಃಸತ್ವವನ್ನು ವಿಕಸನಗೊಳಿಸಿಕೊಳ್ಳುವ ಮೂಲಕ ನಾವು ಸಾಧಕರಾಗಬೇಕು ಎಂದು ಕರೆ ನೀಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಯ ಬದುಕಿನಲ್ಲಿ 15 ರಿಂದ 25 ವಯೋಮಾನ ಕಲಿಯಲು ಪ್ರಶಸ್ತವಾದದ್ದು. ಈ ವಯೋಮಾನದಲ್ಲಿ ನಾವು ನಮ್ಮ ಕಲಿಕಾ ಚೈತನ್ಯವನ್ನು ಕ್ರಿಯಾಶೀಲಗೊಳಿಸಿಕೊಳ್ಳಬೇಕು. ವಿದ್ಯಾರ್ಥಿಗಳು ನಿತ್ಯ 6 ಗಂಟೆಗಳ ಕಾಲವನ್ನು ತಮ್ಮ ಕಲಿಕಾ ಅಧ್ಯಯನಕ್ಕೆ ಮೀಸಲಿಟ್ಟರೆ ಸಾಕು, ಅವರು ಜಗತ್ತಿನ ಜ್ಞಾನ ಭಂಡಾರಗಳಾಗಿ ರೂಪುಗೊಳ್ಳುತ್ತಾರೆ. ಇದಕ್ಕಾಗಿ ಕಲಿಕಾ ಟೈಮ್ ಟೇಬಲ್ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಇಂದಿನ ಜಾಗತೀಕರಣ ಮತ್ತು ಗಣಕೀಕರಣದ ಯುಗದಲ್ಲಿ ಪ್ರತಿಯೊಂದು ಮಗುವಿಗೂ ಇಂಗ್ಲಿಷ್ ಕಲಿಕೆ ಅನಿವಾರ್ಯ. ಉತ್ತಮ ಇಂಗ್ಲಿಷ್ ಕಲಿಯಬೇಕಾದರೆ ಮೊದಲು ನಾವು ಉತ್ತಮ ಕನ್ನಡ ಕಲಿಯಬೇಕು ಎಂದರು.

ಜ್ಞಾನ ಗಳಿಕೆ ಜೊತೆಗೆ ಅಕ್ಷರ ದೋಷಗಳಿಲ್ಲದ ವಾಕ್ಯ ರಚನೆ ಮತ್ತು ಶುದ್ಧ ಬರವಣಿಗೆಗೆ ಹೆಚ್ಚು ಒತ್ತು ನೀಡಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲು ಬರವಣಿಗೆ ಅತಿಮುಖ್ಯ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಪಾಸು ಮಾಡಬೇಕಾದರೆ ಇತಿಹಾಸ, ಅರ್ಥಶಾಸ್ತ್ರ, ಸಾಂವಿಧಾನಿಕ ತಿಳಿವಳಿಕೆ, ಭೂಗೋಳ, ಬೇಸಿಕ್ ಸೈನ್ಸ್ ಮತ್ತು ಟೆಕ್ನಾಲಜಿಗಳ ಗ್ರಹಿಕೆಗೆ ಹೆಚ್ಚು ಆಧ್ಯತೆ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಎಸ್.ಅನುರಾಧಾ ಅಧ್ಯಕ್ಷತೆ ವಹಿಸಿದ್ದರು. ಸಂಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ವಿ.ವಿ.ಜಗದೀಶ್, ತಾಲೂಕು ಕಸಾಪ ಮಾಜಿ ಅಧ್ಯಕ್ಷ ಎಂ.ಕೆ.ಹರಿಚರಣತಿಲಕ್, ಪದವಿ ಕಾಲೇಜಿನ ನಿವೃತ್ತ ಪತ್ರಾಂಕಿತ ವ್ಯವಸ್ಥಾಪಕ ಬಳ್ಳೇಕೆರೆ ಮಂಜುನಾಥ್, ಡಾ.ಶಿವಕುಮಾರ್ ಅಭಿಮಾನಿ ಬಳಗದ ಅಧ್ಯಕ್ಷ ಮಂಜುನಾಥ್, ಐ.ಕ್ಯೂ.ಎ.ಸಿ ಸಂಚಾಲಕ ಜಿ.ಮಧು, ಪ್ಲೇಸ್ಮೆಂಟ್ ವಿಭಾಗದ ಪ್ರಾಧ್ಯಾಪಕ ಕಿರಣ್‌ಕುಮಾರ್, ಪ್ರೋ.ಕೆಂಡಗಣ್ಣೇಗೌಡ ಸೇರಿದಂತೆ ಹಲವರು ಇದ್ದರು.