ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಗಿರಿ
ತಾಲೂಕಿನಲ್ಲಿ ಡೆಂಘೀ, ಮಲೇರಿಯಾ, ಚಿಕನ್ ಗುನ್ಯ, ಇಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಆರೋಗ್ಯ ಇಲಾಖೆ ವತಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು ಜೂನ್ ತಿಂಗಳಿನಲ್ಲಿ 3 ಡೆಂಘೀ ಜ್ವರ ಪೀಡಿತರು ಪತ್ತೆಯಾಗಿದ್ದು ಈಗ ಗುಣಮುಖರಾಗಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ಶಿವಕುಮಾರ್, ಹಿರಿಯ ಆರೋಗ್ಯ ನಿರೀಕ್ಷಕ ಲೋಕೇಶ್ ಕನ್ನಡಪ್ರಭದೊಂದಿಗೆ ಮಾತನಾಡಿ ತಿಳಿಸಿದರು.ತಾಲೂಕಿನಲ್ಲಿ 24ಪ್ರಾಥಮಿಕ ಆರೋಗ್ಯ ಕೇಂದ್ರ ಎರಡು ಸಮುದಾಯ ಆರೋಗ್ಯ ಕೇಂದ್ರ ಮತ್ತು ಚನ್ನಗಿರಿ ಪಟ್ಟಣದಲ್ಲಿ 1ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸೇರಿ 27ಆಸ್ಪತ್ರೆಗಳಿದ್ದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಆರೋಗ್ಯ ಜಾಗೃತಿ ಜಾಥಾ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಆರೋಗ್ಯ ಕೇಂದ್ರ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರತಿ ಮನೆ-ಮನೆಗಳಿಗೆ ಭೇಟಿ ನೀಡಿ ಗ್ರಾಮೀಣರಿಗೆ ಆರೋಗ್ಯ ಶಿಕ್ಷಣ, ಪರಿಸರದ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಪ್ರತಿ ಶುಕ್ರವಾರ ಸೊಳ್ಳೆ ಉತ್ಪತ್ತಿಮಾಡುವ ಲಾರ್ವ ಸಮೀಕ್ಷೆ ಜ್ವರ ಬಂದು ಆಸ್ಪತ್ರೆಗೆ ಬರುವ ರೋಗಗಿಗಳ ತಪಾಸಣೆ ನಡೆಸುತ್ತಿದ್ದು ಇವರಿಂದ ರಕ್ತದ ಸ್ಯಾಂಪಲ್ ಪಡೆದು ಡೆಂಘೀ ಕಾಯಿಲೆ ಪರೀಕ್ಷೆ ಮಾಡಿಸಿ ಕಳಿಸುತ್ತಿದ್ದೇವೆ ಎಂದರು.ಚನ್ನಗಿರಿ ಪಟ್ಟಣ ಪ್ರದೇಶವು ದೊಡ್ಡದಾಗಿದ್ದು ಇಲ್ಲಿ ತಿಂಗಳಿನ ಮೊದಲನೇ ಬುಧವಾರ ಮತ್ತು ಮೂರನೇ ಬುಧವಾರದಂದು ತಾಲೂಕಿನ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಕ್ಷೇತ್ರ ಸಿಬ್ಬಂಸಿ ಕರೆಸಿ 40ಸಿಬ್ಬಂದಿ ತಂಡದಂತೆ ರಚಿಸಿ ಪಟ್ಟಣದ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಆರೋಗ್ಯ ಸಮಸ್ಯೆ ಬಗ್ಗೆ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಪಟ್ಟಣದ ಜನವಸತಿ ಪ್ರದೇಶಗಳ ಬಡಾವಣೆಗಳಲ್ಲಿ ಪಾಳು ಬಿದ್ದಿರುವ ನಿವೇಶನಗಳಲ್ಲಿ ಪರ್ಥೆನಿಯಂ ಕಳೆ, ಲಂಟನ್, ತುರಚಿಗಿಡ, ಮುಳ್ಳುಗಿಡಗಳು ಬೆಳೆದಿದ್ದು ಇಲ್ಲಿಂದ ಅಧಿಕ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ, ಇಂತಹ ಅನುಪಯುಕ್ತ ಗಿಡಗಳನ್ನು ತೆಗೆಸುವಲ್ಲಿ ಪುರಸಭೆ ಅಧಿಕಾರಿಗಳು ಮುಂದಾಗುತ್ತಿಲ್ಲ. ನಿವೇಶನಗಳ ಮಾಲೀಕರುಗಳಿಗೆ ಪುರಸಭೆಯಿಂದ ನೋಟಿಸ್ ನೀಡಿ ಅವರ ನಿವೇಶನಗಳಲ್ಲಿ ಬೆಳೆದಿರುವ ಅನುಪಯುಕ್ತ ಗಿಡ ತೆರವು ಗೊಳಿಸಲು ಮುಂದಾಗಲಿ ಎಂದು ಸಾರ್ವಜನಿಕರಾದ, ಸುರೇಶ್, ಹನುಮಂತ್, ದೀಪಕ್, ರಾಕೇಶ್, ಬಸವರಾಜ್, ಹಾಲೇಶ್ ಮನವಿ ಮಾಡಿದ್ದಾರೆ.ಈ ಹಿಂದೆ ಸಾಂಕ್ರಾಮಿಕ ರೋಗಗಳು ಹರಡದಂತೆ ಪ್ರತಿ ಬಡಾವಣೆಗಳಲ್ಲಿ ಫಾಗಿಂಗ್, ಬ್ಲಿಚಿಂಗ್ ಪೌಡರ್ ಸಿಂಪಡಣೆ ಮಾಡಿ ಸೊಳ್ಳೆ ಹರಡದಂತೆ ಮಾಡುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಪುರಸಭೆಗೆ ಆಡಳಿತಾಧಿಕಾರಿಗಳ ನೇಮಕ ಆದಾಗಿನಿಂದ ಇಂತಹ ಯಾವುದೇ ಕಾರ್ಯಕ್ರಮ ಮಾಡದೆ ಇರುವುದರಿಂದ ಸೊಳ್ಳೆಗಳ ಉತ್ಪತ್ತಿ ಅಧಿಕವಾಗುತ್ತಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.