ಪ್ಲಾಸ್ಟಿಕ್ ತ್ಯಾಜ್ಯ ಮಾರಾಟದಿಂದ ಅಂಗನವಾಡಿ ಸ್ಮಾರ್ಟ್‌ಕ್ಲಾಸ್‌ಗೆ ಧನಸಹಾಯ

| Published : Jul 07 2024, 01:16 AM IST

ಪ್ಲಾಸ್ಟಿಕ್ ತ್ಯಾಜ್ಯ ಮಾರಾಟದಿಂದ ಅಂಗನವಾಡಿ ಸ್ಮಾರ್ಟ್‌ಕ್ಲಾಸ್‌ಗೆ ಧನಸಹಾಯ
Share this Article
  • FB
  • TW
  • Linkdin
  • Email

ಸಾರಾಂಶ

ಪರಿಸರ ಪ್ರಜ್ಞೆಯ ಜೊತೆಗೆ ಮಕ್ಕಳ ಪರ ಕಾಳಜಿಯನ್ನು ಮೆರೆದು ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕಲಿಯುಗ ಸೇವಾ ಸಮಿತಿ ಹಾಗೂ ಚಿಗುರು ಗೆಳೆಯರ ಬಳಗ ಎಂಬ ಯುವಕ ವೃಂದವು ಸಮಾಜಕ್ಕೆ ಮಾದರಿ ಸಂದೇಶವನ್ನು ನೀಡಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಅಂಗವನಾಡಿಯ ಮಕ್ಕಳಿಗೆ ಸ್ಮಾರ್ಟ್‌ಕ್ಲಾಸ್‌ ವ್ಯವಸ್ಥೆ ಮಾಡಲು ಇಲ್ಲಿನ ಯುವಕರ ವೃಂದವು ಪ್ಲಾಸ್ಟಿಕ್ ಕಸಗಳನ್ನು ಸಂಗ್ರಹಿಸಿ ಮಾರಾಟ ಮಾಡಿದ ಹ‍ಣವನ್ನು ನೀಡಿ ಮಾದರಿಯಾಗಿದ್ದಾರೆ.

ಪರಿಸರ ಪ್ರಜ್ಞೆಯ ಜೊತೆಗೆ ಮಕ್ಕಳ ಪರ ಕಾಳಜಿಯನ್ನು ಮೆರೆದು ಪುತ್ತೂರು ತಾಲೂಕಿನ ಚಿಕ್ಕಮುಡ್ನೂರು ಗ್ರಾಮದ ಕಲಿಯುಗ ಸೇವಾ ಸಮಿತಿ ಹಾಗೂ ಚಿಗುರು ಗೆಳೆಯರ ಬಳಗ ಎಂಬ ಯುವಕ ವೃಂದವು ಸಮಾಜಕ್ಕೆ ಮಾದರಿ ಸಂದೇಶವನ್ನು ನೀಡಿದೆ.

ಜನಪರ ಕಾಳಜಿಯ ಜನ ಶಿಕ್ಷಣ ಟ್ರಸ್ಟ್ ಮತ್ತು ಸೆಲ್ಕೋ ಫೌಂಡೇಶನ್ ಇವುಗಳ ಸಹಯೋಗದಲ್ಲಿ ಜಿಲ್ಲೆಯ ಹಲವು ಕಡೆಗಳಲ್ಲಿ ಸೋಲಾರ್ ಗ್ರಾಮ ಅಭಿಯಾನವು ನಡೆಯುತ್ತಿದ್ದು, ಇದರ ಅಂಗವಾಗಿ ಪುತ್ತೂರು ತಾಲೂಕಿನ ಬೇರಿಕೆ ಅಂಗನವಾಡಿ ಕೇಂದ್ರದ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಸ್ಲಾರ್ಟ್ ಕ್ಲಾಸ್‌ಗೆ ವ್ಯವಸ್ಥೆ ಮಾಡಲಾಗಿತ್ತು. ಈ ವ್ಯವಸ್ಥೆಗೆ ಒಟ್ಟು ೧,೧೦ ಲಕ್ಷ ರು. ವೆಚ್ಚವಾಗಲಿದೆ. ಈ ಪೈಕಿ ಸೆಲ್ಕೋ ಫೌಂಡೇಶನ್ ಅರ್ಧಭಾಗ ಅಂದರೆ ೫೫ ಸಾವಿರವನ್ನು ಭರಿಸಲಿದೆ. ಉಳಿದ ಅರ್ಧ ಭಾಗವನ್ನು ಸ್ಥಳೀಯರಿಂದ ಸಂಗ್ರಹಿಸಬೇಕಾಗಿದೆ. ಸೋಲಾರ್ ಅಭಿಯಾನದಲ್ಲಿ ಈಗಾಗಲೇ ಪುತ್ತೂರು ತಾಲೂಕಿನ ಬೀರಿಗ ಮತ್ತು ಕೊಡಿಮರ ಅಂಗನವಾಡಿಗಳಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಳಿಕ ಇದೀಗ ಬೀರಿಗ ಅಂಗನವಾಡಿಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲು ಯೋಜನೆ ರೂಪಿಸಲಾಗಿತ್ತು. ಈ ಕಾರ್ಯಕ್ಕೆ ಕೈ ಜೋಡಿಸಿದ ಕಲಿಯುಗ ಸೇವಾ ಸಮಿತಿ ಮತ್ತು ಚಿಗುರು ಗೆಳೆಯರ ಬಳಗ ತಂಡವು ತಾವು ಮಾಡುತ್ತಿದ್ದ ವ್ಯಾಪಾರ, ವ್ಯವಹಾರ, ಕೃಷಿ, ಕೂಲಿ ಕೆಲಸಗಳಲ್ಲಿ, ಸಭೆ ಸಮಾರಂಭ ಮತ್ತಿತರ ಕಡೆಗಳಲ್ಲಿ ಸಿಕ್ಕ ಪ್ಲಾಸ್ಟಿಕ್ ಇನ್ನಿತರ ವಸ್ತುಗಳನ್ನು ಸಂಗ್ರಹಿಸಿ ಅದನ್ನು ಗುಜರಿ ಅಂಗಡಿಗೆ ಮಾರಾಟ ಮಾಡಿ ಸುಮಾರು ರೂ. ೨,೫೦೦ ರಷ್ಟು ಹಣವನ್ನು ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಜೊತೆಗೆ ಊರಿನ ಹಲವು ಮಂದಿಗಳಿಂದ ಸಂಗ್ರಹಿಸಿ ಯೋಜನೆಯನ್ನು ಪೂರ್ಣಗೊಳಿಸುವ ಹಂತಕ್ಕೆ ಬರಲಾಗಿದೆ. ಪರಿಸರಕ್ಕೆ ಮಾರಕವಾಗಿರುವ ಕಸ ತ್ಯಾಜ್ಯವಾದ ಪ್ಲಾಸ್ಟಿಕ್ ಭೂಮಿಗೆ ಬಿದ್ದು ಮಣ್ಣು ಸೇರಿದಂತೆ ವಾತಾವರಣ ಹಾಳಾಗುವುದನ್ನು ತಪ್ಪಿಸುವ ಮಹತ್ಕಾರ್ಯದ ಜೊತೆಗೆ ಈ ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನೊಂದು ಸಂಪನ್ಮೂಲವಾಗಿ ಪರಿವರ್ತಿಸುವ ಯೋಚನೆಯನ್ನು ಸಮಾಜಕ್ಕೆ ನೀಡುವುದರ ಜೊತೆಗೆ ಅದರಿಂದ ಸಂಗ್ರಹಗೊಂಡ ಹಣವನ್ನು ಒಂದು ಒಳ್ಳೆಯ ಕಾರ್ಯಕ್ಕೆ ದೇಣಿಗೆ ನೀಡುವ ಮೂಲಕ ಈ ಯುವಕರು ಸಮಾಜಕ್ಕೆ ಉತ್ತಮ ಸಂದೇಶವನ್ನು ರವಾನಿಸಿದ್ದಾರೆ. ಸಂಗ್ರಹಿತ ಹಣವನ್ನು ಸಂಸ್ಥೆಯ ಪದಾಧಿಕಾರಿಗಳು ಅಂಗನವಾಡಿಯಲ್ಲಿ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜನ ಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಮತ್ತು ಸಹನಿರ್ದೇಶಕ ಕೃಷ್ಣ ಮೂಲ್ಯ ಅವರು ಸಂಘ ಸಂಸ್ಥೆಗಳ ಈ ರೀತಿಯ ಕಾರ್ಯ ಎಲ್ಲರಿಗೂ ಮಾದರಿಯಾಗಬೇಕು. ಇದೊಂದು ಜನ ಜಾಗೃತಿಯ ಜೊತೆಗೆ ಸ್ವಚ್ಚ ಭಾರತ ಸಂಕಲ್ಪಕ್ಕೆ ಹಿಡಿದ ಕೈಗನ್ನಡಿ ಎಂದು ಶ್ಲಾಘಿಸಿದರು.