ಉದ್ಯಮಗಳಾಗುತ್ತಿರುವ ಸೇವಾ ಕ್ಷೇತ್ರಗಳು: ಎಚ್.ಆರ್.ಅರವಿಂದ್ ಕಳವಳ

| Published : Jul 07 2024, 01:16 AM IST

ಉದ್ಯಮಗಳಾಗುತ್ತಿರುವ ಸೇವಾ ಕ್ಷೇತ್ರಗಳು: ಎಚ್.ಆರ್.ಅರವಿಂದ್ ಕಳವಳ
Share this Article
  • FB
  • TW
  • Linkdin
  • Email

ಸಾರಾಂಶ

ಹಿಂದೆ ವೈದ್ಯರನ್ನು ದೇವರ ಸ್ವರೂಪಿ ಎಂದು ಭಾವಿಸಿ ಜನರು ಗೌರವಿಸುತ್ತಿದ್ದರು. ಆಧುನಿಕತೆ ಬೆಳೆದಂತೆ ವೈದ್ಯಕೀಯ ಕ್ಷೇತ್ರ ಮತ್ತು ಇತರೆ ಸೇವಾ ಕ್ಷೇತ್ರಗಳು ಉದ್ಯಮಗಳಾಗಿ ಬದಲಾಗಿವೆ, ಹಣವಿದ್ದರೆ ಮಾತ್ರ ಆರೋಗ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸ್ತುತ ದಿನಗಳಲ್ಲಿ ವೈದ್ಯಕೀಯ ರಂಗ ಸೇರಿದಂತೆ ಸೇವಾ ಕ್ಷೇತ್ರಗಳೆಲ್ಲಾ ಉದ್ಯಮಗಳಾಗಿ ಪರಿವರ್ತನೆಯಾಗುತ್ತಿವೆ ಎಂದು ಬಿಜೆಪಿ ಮುಖಂಡ ಎಚ್.ಆರ್.ಅರವಿಂದ್ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಎಚ್.ಮಲ್ಲಿಗೆರೆ ವೃತ್ತದ ಸಮೀಪವಿರುವ ಬಿ.ಎಲ್.ಎಸ್.ಪ್ರೌಢಶಾಲಾ ಆವರಣದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಆಯೋಜಿಸಿದ್ದ ವೈದ್ಯರ ದಿನಾಚರಣೆ ಅಂಗವಾಗಿ ಶಾಲಾ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ದಂತ ಚಿಕಿತ್ಸಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಹಿಂದೆ ವೈದ್ಯರನ್ನು ದೇವರ ಸ್ವರೂಪಿ ಎಂದು ಭಾವಿಸಿ ಜನರು ಗೌರವಿಸುತ್ತಿದ್ದರು. ಆಧುನಿಕತೆ ಬೆಳೆದಂತೆ ವೈದ್ಯಕೀಯ ಕ್ಷೇತ್ರ ಮತ್ತು ಇತರೆ ಸೇವಾ ಕ್ಷೇತ್ರಗಳು ಉದ್ಯಮಗಳಾಗಿ ಬದಲಾಗಿವೆ, ಹಣವಿದ್ದರೆ ಮಾತ್ರ ಆರೋಗ್ಯ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ನುಡಿದರು.

ಈ ನಡುವೆ ಉತ್ತಮ ಸೇವಾ ವೈದ್ಯರನ್ನು ನಾವು ಅಪರೂಪದಲ್ಲಿ ನೋಡಬಹುದು, ರೋಗವನ್ನು ಗುಣಮಟ್ಟದ ಚಿಕಿತ್ಸೆ ನೀಡಿ ಆರೋಗ್ಯವನ್ನು ರಕ್ಷಿಸುವ ಸಾಕಷ್ಟು ವೈದ್ಯರು ನಮ್ಮ ನಡುವೆ ಇದ್ದಾರೆ, ಅಂತಹವರು ಬೆಳಕಿಗೆ ಬರಬೇಕು. ಸಂಘ ಸಂಸ್ಥೆಗಳ ಗೌರವ ಲಭ್ಯವಾಗಬೇಕು ಎಂದು ಸಲಹೆ ನೀಡಿದರು.

ಸಮಾಜದಲ್ಲಿ ಸಾಕಷ್ಟು ಬಡವರಿಗೆ ಆರೋಗ್ಯದ ಸಮಸ್ಯೆಗಳು ಬಂದಾಗ ವೈದ್ಯರು ಸೇವಾ ಮನೋಭಾವದಿಂದ ಚಿಕಿತ್ಸೆ ನೀಡುವುದು ವೃತ್ತಿ ಧರ್ಮವಾಗಿದೆ, ಒಂದಷ್ಟು ಸೇವಾಕಾರ್ಯಗಳು ಸಮಾಜಕ್ಕೆ ವೈದ್ಯರಿಂದ ಲಭ್ಯವಾಗಬೇಕಿದೆ. ಆರೋಗ್ಯ ಸಮಾಜ ನಿರ್ಮಾಣ ನಿಮ್ಮಿಂದ ಮಾತ್ರ ಸಾಧ್ಯ ಎಂದು ಮನವಿ ಮಾಡಿದರು.

ಆರೋಗ್ಯ ವಿಷಯದಲ್ಲಿ ವಿದ್ಯಾರ್ಥಿಗಳು ತುಂಬಾ ಜಾಗರೂಕತೆಯಿಂದ ಇರಬೇಕು. ಇತ್ತೀಚಿನ ದಿನಗಳಲ್ಲಿ ಡೆಂಘೀ, ಚಿಕೂನ್‌ಗುನ್ಯಾ ರೋಗಗಳು ಹೆಚ್ಚಾಗುತ್ತಿವೆ. ಆದ ಕಾರಣ ಅಲಕ್ಷ್ಯ ಮಾಡಬೇಡಿ. ಮಕ್ಕಳು ಹೆಚ್ಚು ಸಿಹಿತಿಂಡಿ ತಿನ್ನುವುದು ಹವ್ಯಾಸ. ಇದರಿಂದ ಬಹುಬೇಗಹಲ್ಲುಗಳು ಹುಳುಕಾಗುತ್ತವೆ, ದಂತದ ಸಮಸ್ಯೆ ಇದ್ದಲ್ಲಿ ವೈದ್ಯರಲ್ಲಿ ತಪಾಸಣೆ ಮಾಡಿಕೊಳ್ಳಿ ಎಂದು ಎಚ್ಚರಿಸಿದರು.

ಆರೋಗ್ಯವೇ ಭಾಗ್ಯ ಎಂದು ದೊಡ್ಡವರು ಹೇಳಿದ್ದಾರೆ, ಉತ್ತಮ ಗುರಿ ಇರಿಸಿಕೊಂಡು ಓದಿ, ನೀವು ಉನ್ನತ ಮಟ್ಟದ ಅಧಿಕಾರಿಗಳೋ, ವೈದ್ಯರೋ, ಎಂಜಿನಿಯರ್, ಉದ್ಯಮಿಗಳೋ, ಶಿಕ್ಷಕರೋ ಆಗಿ ಒಟ್ಟನಲ್ಲಿ ಉದ್ಯಮಿಗಳಾಗಿ ಅಥವಾ ಉದ್ಯೋಗಸ್ಥರಾಗಿ ಎಂದರು.

ಕಾರ್ಯಕ್ರಮದಲ್ಲಿ ಸಾಧಕರಿಗೆ ಅಭಿನಂದನೆ ಸಲ್ಲಿಸಲಾಯಿತು, ಬಳಿಕ ದಂತ ವೈದ್ಯರಿಂದ ಆರೋಗ್ಯ ತಪಾಸಣೆ ನಡೆಯಿತು. ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಘಟಕ ಅಧ್ಯಕ್ಷ ಪೋತೇರ ಮಹದೇವು, ವಕೀಲ ಎಂ.ಗುರುಪ್ರಸಾದ್, ಇಂಟರ್ ನ್ಯಾಷಿನಲ್ ಜನಪರ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ವೈ.ಎಚ್.ರತ್ಮಮ್ಮ, ಜನಸೇವಾ ಅಲಯನ್ಸ್ ಸಂಸ್ಥೆ ಅಧ್ಯಕ್ಷೆ ಶೈಲಜಾಶಿವಕುಮಾರ್, ವೈದ್ಯರಾದ ಡಾ.ಸುಕನ್ಯ, ಡಾ.ಎಚ್.ಸಿ.ಆನಂದ್, ಡಾ.ರಕ್ಷಾ, ಶಾಲಾ ಮುಖ್ಯಶಿಕ್ಷಕ ಎಂ.ಲಿಂಗರಾಜು, ಗಾಯಿತ್ರಿ ಮತ್ತಿತರರಿದ್ದರು.