ಕುಡಿವ ನೀರಿಗಾಗಿ ಮಕ್ಕಳ ಪರದಾಟ, ಮನವಿ

| Published : Jul 07 2024, 01:16 AM IST

ಸಾರಾಂಶ

ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ

ಶಿರಹಟ್ಟಿ: ಕಳೆದ ೩ವರ್ಷಗಳಿಂದ ಶಾಲೆಯಲ್ಲಿ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ. ನಿತ್ಯ ಬಿಸಿಯೂಟ ತಯಾರಿಸಲು ನೀರಿಲ್ಲ.ಮನೆಯಿಂದಲೇ ನಿತ್ಯ ನೀರು ತೆಗೆದುಕೊಂಡು ಹೋಗಬೇಕು. ಶಾಲೆಯಲ್ಲಿದ್ದ ಕೊಳವೆ ಬಾವಿ ನೀರು ಕೂಡ ಸರಿಯಾಗಿ ಬರುತ್ತಿಲ್ಲ.ಅಧಿಕಾರಿಗಳ ಗಮನಕ್ಕೆ ತಂದರೆ ಸ್ಪಂದಿಸುತ್ತಿಲ್ಲ. ಸಮರ್ಪಕ ನೀರು ಪೂರೈಸುವಂತೆ ಆಗ್ರಹಿಸಿ ಶನಿವಾರ ತರಗತಿ ಬಿಟ್ಟು ಮಕ್ಕಳು ಮತ್ತು ಶಾಲಾ ಸಿಬ್ಬಂದಿ ಪ್ರತಿಭಟನೆ ನಡೆಸಿ ತಹಸೀಲ್ದಾರಗೆ ಮನವಿ ಸಲ್ಲಿಸಿದರು.

ಈ ವೇಳೆ ವಾರ್ಡನ ಪಪಂ ಸದಸ್ಯ ಫಕ್ಕಿರೇಶ ರಟ್ಟಿಹಳ್ಳಿ ಮಾತನಾಡಿ, ಕುಡಿಯುವ ನೀರಿಗಾಗಿ ಆಗ್ರಹಿಸಿ ಪಟ್ಟಣದ ಮೇಗೇರಿ ಓಣಿಯ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆ ಮಕ್ಕಳು ಪರಿತಪಿಸುತ್ತಿದ್ದಾರೆ. ಕೃಷಿ ಹಾಗೂ ಕಾರ್ಮಿಕರ ಬಾಹುಳ್ಯದ ಮೇಗೇರಿ ಓಣಿಯ ಶಾಲೆಯ ಮಕ್ಕಳ ಸ್ಥಿತಿಗತಿ ಕುರಿತು ಹಲವಾರು ಬಾರಿ ಶಿಕ್ಷಣ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕುಡಿಯಲೂ ನೀರಿಲ್ಲ. ಬಿಸಿಯೂಟಕ್ಕೂ ನೀರಿಲ್ಲ. ಪ್ರತಿನಿತ್ಯ ಇದೇ ಗೋಳು ಎಂದು ದೂರಿದರು.

ವ್ಯವಸ್ಥಿತ ಸೌಕರ್ಯಗಳಿಲ್ಲದೇ ಶಿಕ್ಷಣ ಪಡೆಯುವದು ದುಸ್ಥರವಾಗಿದೆ. ಸರ್ಕಾರ ಸಾಕಷ್ಟು ಅವಕಾಶ ಅನುಕೂಲ ಕಲ್ಪಿಸಿದರೂ ಮಕ್ಕಳು ಕ್ಷೇತ್ರ ಶಿಕ್ಷಣಾಧಿಕಾರಿಗಳ ನಿಷ್ಕಾಳಜಿಯಿಂದ ಸೌಲಭ್ಯಗಳಿಂದ ವಂಚಿತರಾಗಿದ್ದು, ನಿತ್ಯ ಮಕ್ಕಳು ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಸರ್ಕಾರಿ ಶಾಲೆ ಎಂದರೆ ಮೂಗು ತುರಿಸುತ್ತಿರುವ ಇಂದಿನ ದಿನಮಾನಗಳಲ್ಲಿ ೧ ರಿಂದ ೭ನೇ ತರಗತಿವರೆಗೆ ೪೫೦ಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಹೊಂದಿರುವ ಈ ಶಾಲೆಯಲ್ಲಿ ಮೂಲಭೂತ ಸೌಲಭ್ಯಗಳಿಲ್ಲ ಎಂದರೆ ನಾಚಿಕೆಯಾಗುತ್ತಿದೆ ಎಂದರು.

ಅಧಿಕಾರಿಗಳ ಬೇಜವಾಬ್ದಾರಿ,ಅಸಡ್ಡೆ ಮನೋಭಾವನೆಯಿಂದ ಇತಿಹಾಸ ಪ್ರಸಿದ್ಧ ಮೇಗೇರಿ ಸರ್ಕಾರಿ ಶಾಲೆ ಇಂದು ಅಧೋಗತಿಯಲ್ಲಿ ಸಾಗಿದೆ. ಸರ್ಕಾರ ಏನೆಲ್ಲ ಅನುಕೂಲತೆ ಒದಗಿಸಿದರೂ ಈ ಶಾಲೆಯ ಮಕ್ಕಳಿಗೆ ತಲುಪುತ್ತಿಲ್ಲ. ಶಿಕ್ಷಣ ಇಲಾಖೆಯ ಅಧಿಕಾರಿಗಳ ವರ್ತನೆ ಹೀಗೆ ಮುಂದುವರೆದರೆ ಶಾಲೆಗೆ ಬೀಗ ಬೀಳುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇತಿಹಾಸದಲ್ಲಿ ಮೊದಲ ಬಾರಿ ಮೂಲಭೂತ ಸೌಕರ್ಯಗಳಿಗೆ ಆಗ್ರಹಿಸಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಮಕ್ಕಳು ಮನವಿ ಸಲ್ಲಿಸಿದ ಮೊದಲ ಪ್ರಕರಣ ಇದಾಗಿದ್ದು, ತಾಪಂ ಹಾಗೂ ತಾಲೂಕಾಡಳಿತ ಈ ವಿಷಯದಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂಬುದು ಜನಾಕ್ರೋಶವಾಗಿದೆ.

ಶುಕ್ರವಾರ ತಾಪಂ ಸಾಮಾನ್ಯ ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಯಕ್ ನಮ್ಮ ತಾಲೂಕಿನ ಯಾವುದೇ ಶಾಲೆಗಳಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆಗಳಿಲ್ಲ. ಪ್ರತಿದಿನ ನಾನೇ ಸ್ವತ: ನಾಲ್ಕೈದು ಶಾಲೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹ ಮಾಡಿಕೊಂಡಿದ್ದೇನೆ ಎಂದು ಜಿಪಂ ಮುಖ್ಯ ಯೋಜನಾಧಿಕಾರಿ ಎನ್.ಕೆ.ನಿರ್ಮಲಾ ಅವರಿಗೆ ಉತ್ತರ ನೀಡಿದ್ದು, ಇದೀಗ ಪಟ್ಟಣದ ಸರ್ಕಾರಿ ಶಾಲೆಯ ಮಕ್ಕಳು ತಹಸೀಲ್ದಾರ್ ಅವರಿಗೆ ಮನವಿ ಮಾಡಿರುವದು ಅಚ್ಚರಿಯ ಸಂಗತಿ.

ತಾಪಂ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಂದ ತಪ್ಪು ಸಂದೇಶ ನೀಡಿರುವದು ಅಕ್ಷಮ್ಯ ಅಪರಾಧ. ಅಧಿಕಾರಿಗಳ ತಪ್ಪು ಮಾಹಿತಿಯಿಂದ ಮಕ್ಕಳು ಸಂಕಷ್ಟಪಡುವಂತಹ ಸ್ಥಿತಿ ಬಂದೊದಗಿದೆ. ತಕ್ಷಣ ನಮ್ಮ ನ್ಯಾಯುತ ಬೇಡಿಕೆ ಈಡೇರಿಸದೇ ಇದ್ದಲ್ಲಿ ತಹಸೀಲ್ದಾರ್ ಕಾರ್ಯಾಲಯದಲ್ಲಿ ಉಗ್ರ ಹೋರಾಟ ಮಾಡುವದಾಗಿ ಮಕ್ಕಳು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ, ಪಪಂ ಮುಖ್ಯಾಧಿಕಾರಿ, ತಹಸೀಲ್ದಾರ ಹಾಗೂ ಜನಪ್ರತಿನಿಧಿಗಳಿಗೆ ಲಿಖಿತ ಮನವಿ ಸಲ್ಲಿಸಿದರೂ ಯಾವುದೇ ಸೌಲಭ್ಯ ಒದಗಿಸಲು ಮುಂದಾಗದೇ ಇರುವ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯವೈಖರಿಗೆ ಮಕ್ಕಳು ಬೇಸತ್ತಿದ್ದು, ಶಾಲೆಯಿಂದ ಟಿಸಿ ತೆಗೆದುಕೊಡಿ ಬೇರೆಡೆಗೆ ಹೋಗುತ್ತೇವೆ ಎಂದು ಪಟ್ಟುಹಿಡಿದಿದ್ದಾರೆ. ಇನ್ನಾದರೂ ಕ್ಷೇತ್ರ ಶಿಕ್ಷಣಾಧಿಕಾರಿ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಎಚ್ಚೆತ್ತುಕೊಳ್ಳಬೇಕಾಗಿದೆ.

ಮೇಗೇರಿ ಶಾಲೆಯ ಮಕ್ಕಳು ಸುಮಾರು ಒಂದು ಕಿಮೀ ವರೆಗೆ ನಡೆದುಕೊಂಡು ಬಂದು ರಸ್ತೆಯುದ್ದಕ್ಕೂ ಕುಡಿಯುವ ನೀರು ಮತ್ತು ಮೂಲಭೂತ ಸೌಲಭ್ಯಕ್ಕಾಗಿ ಘೋಷಣೆ ಕೂಗುತ್ತಾ ಅಧಿಕಾರಿಗಳ ನಡೆ ಬಗ್ಗೆ ಆಕ್ರೋಶ ಹೊರ ಹಾಕುತ್ತಾ ತಹಸೀಲ್ದಾರ ಕಾರ್ಯಾಲಯಕ್ಕೆ ಆಗಮಿಸಿ ತಹಸೀಲ್ದಾರ ಅನುಪಸ್ಥಿತಿಯಲ್ಲಿ ಶಿರಸ್ತೇದಾರಗೆ ಮನವಿ ಸಲ್ಲಿಸಿದರು.