ಸಾರಾಂಶ
ಕನ್ನಡಪ್ರಭವಾರ್ತೆ ಚನ್ನಗಿರಿ
ರಾಜ್ಯ ಕಾಂಗ್ರೆಸ್ ಸರ್ಕಾರ ಬಡವರ, ಹಿಂದುಳಿದವರ, ದೀನ ದಲಿತರ, ಕಾರ್ಮಿಕರ ಪರವಾದ ಸರ್ಕಾರವಾಗಿದ್ದು, ನಿಮ್ಮಗಳ ನ್ಯಾಯ ಸಮ್ಮತ ಬೇಡಿಕೆ ಮತ್ತು ಕಾರ್ಮಿಕರಿಗೆ ಆಗುತ್ತಿರುವ ತೊಂದರೆ ಬಗ್ಗೆ ನನ್ನ ಗಮನಕ್ಕೆ ತಂದರೆ, ಕಾರ್ಮಿಕ ಇಲಾಖೆ ಸಚಿವರೊಂದಿಗೆ ಚರ್ಚಿಸಿ ಸಮಸ್ಯೆಗಳಿಗೆ ಪರಿಹಾರ ಕೊಡಿಸುತ್ತೇನೆ ಎಂದು ಶಾಸಕ ಬಸವರಾಜು ವಿ.ಶಿವಗಂಗಾ ಹೇಳಿದರು.ಶನಿವಾರ ಪಟ್ಟಣದ ರಾಮ ಮನೋಹರ ಲೋಹಿಯಾ ಭವನದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ತಾಲೂಕು ಸಮಿತಿಯಿಂದ ಹಮ್ಮಿಕೊಂಡಿದ್ದ ಕಟ್ಟಡ ಕಾರ್ಮಿಕರಿಗೆ ಮದುವೆ ಧನ ಸಹಾಯದ ಬಾಂಡ್ ವಿತರಣೆ ಹಾಗೂ ಹಿರಿಯ ಕಟ್ಟಡ ಕಾರ್ಮಿಕರ ಸನ್ಮಾನ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಜು.15ರಿಂದ ವಿಧಾನಸಭೆ ಅಧಿವೇಶನ ಪ್ರಾರಂಭಗೊಳ್ಳಲಿದ್ದು ನಿಮ್ಮ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಧ್ವನಿ ಎತ್ತುತ್ತೇನೆ. ನಾನು ಶಾಸಕನಾದ ಮೇಲೆ ಕಾರ್ಮಿಕ ಕಲ್ಯಾಣ ಮಂಡಳಿಯಿಂದ 2022-23ನೇ ಸಾಲಿನಲ್ಲಿ ಮದುವೆ ಸಹಾಯ ಧನವಾಗಿ 298 ಜನ ಫಲಾನುಭವಿಗಳಿಗೆ ₹1.49ಕೋಟಿ, 17ಜನ ತಾಯಂದಿರ ಪ್ರಸೂತಿ ಕಾರ್ಯಕ್ಕೆ ₹4.40ಲಕ್ಷ, ತಾಯಿ ಮಗು ಯೋಜನೆಯಲ್ಲಿ 9 ತಾಯಂದಿರಿಗೆ ₹94000, ಹಾಗೂ 23-24ನೇ ಸಾಲಿನ ಪ್ರಸ್ತುತ ವರ್ಷದಲ್ಲಿ ತಾಲೂಕಿನ ಎಲ್ಲಾ ಕಾರ್ಮಿಕರ ಏಳಿಗೆಗೆ ₹1.87ಕೋಟಿ ಸಹಾಯಧನ ನೀಡಲಾಗಿದೆ ಎಂದರು.
ನಿವೇಶನಗಳಿಲ್ಲದ ಕಾರ್ಮಿಕರಿಗೆ ನಿವೇಶನ ನೀಡಲು ಚನ್ನಗಿರಿ ಪಟ್ಟಣ ಸೇರಿ ಪಟ್ಟಣಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಸರ್ಕಾರಿ ಜಮೀನನ್ನು ಗುರುತಿಸಲು ಈಗಾಗಲೇ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸ್ಲಂ ಬೋರ್ಡ್‌ನಲ್ಲಿ ಮನೆ ನಿರ್ಮಾಣ ಮಾಡಿಕೊಳ್ಳಲು ಯಾರಾದರೂ ಮುಂದೆ ಬಂದರೆ ಈ ದಿನವೇ ಮನೆಗಳನ್ನು ಮಂಜೂರು ಮಾಡಿಕೊಡಲಿದ್ದೇನೆ ಎಂದರು. ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲು ಸರ್ಕಾರಕ್ಕೆ ಇಂತಿಷ್ಟು ಹಣ ಪಾವತಿ ಮಾಡಬೇಕು. ಆ ಹಣವನ್ನೂ ಪಾವತಿಸಲು ಸಾಧ್ಯವಾಗದ ಬಡವರಿದ್ದರೆ ಹೇಳಿ. ಅವರ ಪರವಾಗಿ ನಾನೇ ಡಿ.ಡಿ ತೆಗಿಸಿ ಸರ್ಕಾರಕ್ಕೆ ಕಟ್ಟಬೇಕಾದ ಹಣ ಭರಿಸುತ್ತೇನೆ ಎಂದರು.ರಾಜ್ಯ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಅವರಗೆರೆದೆ ಎಚ್.ಜಿ. ಉಮೇಶ್ ಮಾತನಾಡಿ, ಕಾರ್ಮಿಕರ ಬೆವರಿನ ಶ್ರಮದಿಂದ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಇಂದು ಕೋಟ್ಯಾಂತರ ಹಣ ಸಂಗ್ರಹವಾಗಿದೆ. ಆದರೆ ಈ ಹಣವನ್ನು ಕಾರ್ಮಿಕರ ಕಲ್ಯಾಣಕ್ಕಾಗಿ ಉಪಯೋಗಿಸದೇ ಕಾರ್ಮಿಕರಿಗೆ ಉಪಯೋಗವಿಲ್ಲದ ಕಿಟ್ ಗಳನ್ನು ನೀಡುತ್ತಿದ್ದಾರೆ. ಇದು ಭ್ರಷ್ಟಾಚಾರ ಮಾಡುವ ಮೂಲವಾಗಿದೆ ಎಂದು ಟೀಕಿಸಿದರು. ಕಾರ್ಮಿಕರಿಗೆ ಏನಾದರೂ ಸಹಾಯ ಮಾಡಬೇಕು ಎನಿಸಿದರೆ ಆರ್ಥಿಕ ಸಹಾಯ ಮಾಡಿ. ಇದರ ಬಗ್ಗೆ ಚರ್ಚಿಸಲು ಕಾರ್ಮಿಕ ಸಚಿವರ ಬಳಿ ಹೋದರೆ ಉಡಾಫೆ ಉತ್ತರಗಳನ್ನೇ ನೀಡುತ್ತಾರೆ. ಕಾರ್ಮಿಕ ಕಲ್ಯಾಣ ಮಂಡಳಿ ಇರುವುದು ಕಾರ್ಮಿಕರ ಒಳಿತಿಗಾಗಿಯೇ ಹೊರತು ಮಂತ್ರಿಗಳ ಮೋಜು ಮಸ್ತಿಗಲ್ಲ ಎಂದು ಕಾರ್ಮಿಕ ಸಚಿವರ ಕಾರ್ಯವೈಖರಿಗೆ ಆಕ್ರೋಶ ಹೊರಹಾಕಿದರು. ಸಭೆಯ ಅಧ್ಯಕ್ಷತೆಯನ್ನು ತಾಲೂಕು ಸಂಘದ ಉಪಾಧ್ಯಕ್ಷ ಹನುಮಂತರಾವ್ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಅಧ್ಯಕ್ಷ ಲಕ್ಷ್ಮಣ, ತಾಲೂಕು ಸಂಘದ ಉಪಾಧ್ಯಕ್ಷ ಹನುಮಂತರಾವ್, ತಾಲೂಕು ಅಧ್ಯಕ್ಷ ಸೈಯದ್ ಗೌಸ್ ಪೀರ್, ಕಾರ್ಮಿಕ ನಿರೀಕ್ಷಕ ಟಿ.ರಾಜಪ್ಪ, ಜೈನುಲ್ಲಾ ಖಾನ್, ಪಿ.ಎಸ್.ಮಧು, ಮಹಮ್ಮದ್ ರಫೀಕ್, ವಿ.ಲೋಕೇಶ್, ಶರ್ಘುದ್ದೀನ್, ಶಾಂತರಾಜ್, ಚಿದಾನಂದ, ಜಬೀಉಲ್ಲಾ, ಶಿವಲಿಂಗಪ್ಪ ಸೇರಿದಂತೆ ಮೊದಲಾದವರು ಹಾಜರಿದ್ದರು.