ಸಾರಾಂಶ
ಹುಬ್ಬಳ್ಳಿ: ಶಿರಹಟ್ಟಿ ಫಕೀರ ಸಿದ್ಧರಾಮ ಸ್ವಾಮೀಜಿ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ನಡೆಯಲಿರುವ ಆನೆ ಅಂಬಾರಿ ಸಮೇತ ಸಿದ್ಧರಾಮ ಶ್ರೀಗಳ ತುಲಾಭಾರ ಕಾರ್ಯಕ್ರಮಕ್ಕೆ ಸಿದ್ಧತೆಗಳು ಪೂರ್ಣಗೊಂಡಿವೆ. ಫೆ. 1ರಂದು ಸಂಜೆ 6ಗಂಟೆಗೆ ನೆಹರು ಮೈದಾನದಲ್ಲಿ ತುಲಾಭಾರ ಕಾರ್ಯಕ್ರಮ ನಡೆಯಲಿದೆ ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ತಿಳಿಸಿದರು.
ತುಲಾಭಾರಕ್ಕೆ ಸಿದ್ಧಪಡಿಸಲಾದ ತಕ್ಕಡಿಗೆ ಪೂಜೆ ನೆರವೇರಿಸಿದ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.5555 ನಾಣ್ಯಗಳಿಂದ ತುಲಾಭಾರ ನಡೆಸಲಾಗುತ್ತಿದೆ. ಎಲ್ಲವೂ ₹10 ನಾಣ್ಯಗಳಾಗಿವೆ. ₹73.40 ಲಕ್ಷ ಆಗಿದೆ. ಫೆ.1ರಂದು ಮಧ್ಯಾಹ್ನ 3ಗಂಟೆಗೆ ಆನೆ ಅಂಬಾರಿಯ ಮೆರವಣಿಗೆಗೆ ಮೂರುಸಾವಿರ ಮಠದಿಂದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಚಾಲನೆ ನೀಡಲಿದ್ದಾರೆ. ಅದು ದಾಜಿಬಾನ್ ಪೇಟೆ, ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗವಾಗಿ ಹಾಯ್ದು ನೆಹರು ಮೈದಾನ ತಲುಪಲಿದೆ. ಸಂಜೆ 4.30 ವೇದಿಕೆ ಕಾರ್ಯಕ್ರಮ ನಡೆಯಲಿದೆ. ಅಂದಿನ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನ ಭಕ್ತರು ಸೇರುವ ಸಾಧ್ಯತೆ ಇದೆ ಎಂದರು.
ವೇದಿಕೆ ಕಾರ್ಯಕ್ರಮವನ್ನು ಸಚಿವ ಎಚ್.ಕೆ.ಪಾಟೀಲ ಉದ್ಘಾಟಿಸಲಿದ್ದಾರೆ. ಸಚಿವ ಸಂತೋಷ ಲಾಡ್, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಭಾಪತಿ ಬಸವರಾಜ ಹೊರಟ್ಟಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮೇಯರ್ ವೀಣಾ ಬರದ್ವಾಡ, ವಿವಿಧ ಮಠಾಧೀಶರು ಪಾಲ್ಗೊಳ್ಳಲಿದ್ದಾರೆ.ಎರಡು ಪುಸ್ತಕ ಬಿಡುಗಡೆ: ತಾವು ಪ್ರವಚನ ಮಾಡಿದ ವಿಷಯಗಳ ಪುಸ್ತಕವನ್ನು ಹೊರತರಲಾಗಿದೆ. ಇದು ಕನ್ನಡ ಮತ್ತ ಆಂಗ್ಲ ಭಾಷೆಯಲ್ಲಿ ಹೊರತರಲಾಗಿದೆ. 525 ಪುಟಗಳ ಈ ಪುಸ್ತಕಗಳನ್ನು ಅಂದು ವೇದಿಕೆಯಲ್ಲಿ ಬಿಡುಗಡೆಗೊಳಿಸಲಾಗುವುದು. ಆನೆ ಅಂಬಾರಿಯ ಮೆರವಣಿಗೆಯಲ್ಲಿ ಐರಣಿ, ಹೊನ್ನಾಳಿ, ದಾವಣಗೆರೆ, ಚಿತ್ರದುರ್ಗದ ವಿವಿಧ ಮಠಗಳ 5 ಆನೆಗಳು ಪಾಲ್ಗೊಳ್ಳಲಿವೆ. ಶಿರಹಟ್ಟಿ ಮಠದಲ್ಲಿನ ಎರಡು ಒಂಟೆಗಳೂ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿವೆ ಎಂದರು.
ಅಂಬಾರಿಯಲ್ಲಿ ಬೆಳ್ಳಿ ಮೂರ್ತಿ ಇಟ್ಟು ಮೆರವಣಿಗೆ ನಡೆಸಲಾಗುವುದು. ಬಳಿಕ ತುಲಾಭಾರದ ವೇಳೆ ಶ್ರೀಗಳನ್ನು ಕೂರಿಸಲಾಗುವುದು. ಇದಕ್ಕಾಗಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದರು.ಈ ಕಾರ್ಯಕ್ರಮದಲ್ಲಿ ಹಣ್ಣು ಮಾರಿ ಶಾಲೆ ಕಟ್ಟಿಸಿರುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಗಳೂರಿನ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಗುವುದು ಎಂದರು.
1 ಲಕ್ಷ ಜನರಿಗೆ ದಾಸೋಹ: ಫೆ.1ರಂದು ನಡೆಯಲಿರುವ ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಮೂರುಸಾವಿರ ಮಠದ ಮೈದಾನದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. 1 ಲಕ್ಷ ಜನರಿಗೆ ಊಟ ಮಾಡಿಸಲಾಗುತ್ತಿದೆ. ಹಾಲ ಹುಗ್ಗಿಯ ಜವಾಬ್ದಾರಿಯನ್ನು ಗಂಗಾವತಿ ಸಿಲ್ಕ್ ಪ್ಯಾಲೇಸ್‌ನವರು ವಹಿಸಿಕೊಂಡಿದ್ದಾರೆ. ಅಂದು ಬೇಕಾಗುವ ಅನ್ನಕ್ಕಾಗಿ ಮೂವರು ಪಾಲಿಕೆ ಸದಸ್ಯರು ಸೇರಿಕೊಂಡು 100 ಕ್ವಿಂಟಲ್ ಅಕ್ಕಿ ಕೊಡಿಸಲಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿರುವ ಮಹ್ಮದ ರಫೀಕ್ ಎನ್ನುವವರು ಸಾಂಬಾರಿನ ವ್ಯವಸ್ಥೆ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಅಂದು ಬೆಳಗ್ಗೆ 10ರಿಂದ ಅನ್ನಸಂತರ್ಪಣೆ ಪ್ರಾರಂಭವಾಗಿ ಮಧ್ಯಾಹ್ನ 3ಗಂಟೆಗೆ ಮುಕ್ತಾಯಗೊಳ್ಳಲಿದೆ. ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಗುತ್ತಿದೆ ಎಂದು ತಿಳಿಸಿದರು.75 ದಿನದ ಪ್ರವಚನ:
ಇನ್ನು ಇದು ಮುಗಿದ ಬಳಿಕ ಇಲ್ಲಿ ನಡೆಯುತ್ತಿರುವ ಭಾವೈಕ್ಯತಾ ಯಾತ್ರೆಯು ವಿವಿಧ ಊರುಗಳಲ್ಲಿ ಸಂಚರಿಸಲಿದೆ. ಎಲ್ಲ ಊರುಗಳಲ್ಲಿ ಸಂಚರಿಸಿ ಬಂದ ಬಳಿಕ ಶಿರಹಟ್ಟಿಯಲ್ಲಿ 75 ದಿನಗಳ ಕಾಲ ತಮ್ಮ ಪ್ರವಚನ ನಡೆಯಲಿದೆ. ಈ ವೇಳೆ 75 ಪುಸ್ತಕಗಳನ್ನು ಬಿಡುಗಡೆ ಮಾಡಲಾಗುವುದು. 75ಕ್ಕಿಂತ ಹೆಚ್ಚು ಜೋಡಿಗಳ ಸಾಮೂಹಿಕ ವಿವಾಹ ಕೈಗೊಳ್ಳಲಾಗುವುದು. ಕೊನೆಯ ದಿನ ಶ್ರೀಗಳ ಸುವರ್ಣ ತುಲಾಭಾರ ನಡೆಸಲಾಗುವುದು. ಇದಕ್ಕೆ 63 ಕೆಜಿ ಬಂಗಾರ ಬೇಕಾಗುತ್ತದೆ. ಇಲ್ಲಿ ತುಲಾಭಾರ ಮಾಡಿದ ನಾಣ್ಯಗಳಿಂದಲೂ ಬಂಗಾರ ಖರೀದಿಸಲಾಗುವುದು. ಅದನ್ನು ಬಂಗಾರ ತುಲಾಭಾರಕ್ಕೆ ಬಳಸಲಾಗುವುದು. ಬಂಗಾರ ತುಲಾಭಾರದ ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಸ್ಥಾಯಿ ನಿಧಿ ಸ್ಥಾಪಿಸಲಾಗುವುದು ಎಂದು ನುಡಿದರು.ಸುದ್ದಿಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಸಾವಕಾರ, ಪ್ರಕಾಶ ಬೆಂಡಿಗೇರಿ, ಪಾಲಿಕೆ ಸದಸ್ಯರಾದ ಶಿವು ಮೆಣಸಿನಕಾಯಿ, ಮಲ್ಲಿಕಾರ್ಜುನ ಗುಂಡೂರ, ಚಂದ್ರಶೇಖರ ಗೋಕಾಕ, ಸದಾಶಿವ ಚೌಶೆಟ್ಟಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪೂಜೆ: ಫಕೀರ ಸಿದ್ಧರಾಮ ಶ್ರೀಗಳ ತುಲಾಭಾರಕ್ಕೆ ನಿರ್ಮಿಸಲಾಗಿರುವ ತಕ್ಕಡಿ ಮತ್ತು ಅಂಬಾರಿಗೆ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಸೋಮವಾರ ಪೂಜೆ ಸಲ್ಲಿಸಲಾಯಿತು.ಬಿಜೆಪಿ ಮುಖಂಡ ಜಗದೀಶ ಶೆಟ್ಟರ್ ಮಾತನಾಡಿ, ‘ಇಂತಹ ಕಾರ್ಯಕ್ರಮ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದು ಎಲ್ಲರ ಪುಣ್ಯ. ಫೆ.1ರಂದು ನಡೆಯುವ ಕಾರ್ಯಕ್ರಮ ಯಶಸ್ವಿಯಾಗಲಿ. ಭಾವೈಕ್ಯ ಯಾತ್ರೆ ಮೂಲಕ ದಿಂಗಾಲೇಶ್ವರ ಸ್ವಾಮೀಜಿ ಧರ್ಮ ಜಾಗೃತಿ ಕೆಲಸ ಮಾಡುತ್ತಿದ್ದಾರೆ ಎಂದರು.
ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿ, ಶ್ಯಾಮ ಕೊಲ್ಹಾರ ಅವರು ತುಲಾಭಾರಕ್ಕೆ ತಕ್ಕಡಿ ಮಾಡಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.