ಸೀರೆ ಜಪ್ತಿ ಪ್ರಕರಣದ ಸತ್ಯಾಸತ್ಯತೆ ಜನರ ಮುಂದಿಡಿ

| Published : Mar 21 2024, 01:06 AM IST

ಸೀರೆ ಜಪ್ತಿ ಪ್ರಕರಣದ ಸತ್ಯಾಸತ್ಯತೆ ಜನರ ಮುಂದಿಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರದಲ್ಲಿ ಸೀರೆಗಳು ಜಪ್ತಿಯಾದ ಪ್ರಕರಣದ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದು, ಆಯೋಗ ಪ್ರಕರಣದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದಿಟ್ಟು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ರಾಮನಗರದಲ್ಲಿ ಸೀರೆಗಳು ಜಪ್ತಿಯಾದ ಪ್ರಕರಣದ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಿದ್ದು, ಆಯೋಗ ಪ್ರಕರಣದ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಜನರ ಮುಂದಿಟ್ಟು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತದಾರರಿಗೆ ಕುಕ್ಕರ್, ಸೀರೆಗಳನ್ನು ರಾಜಾರೋಷವಾಗಿ ಹಂಚಿಕೆ ಮಾಡುತ್ತಿರುವುದನ್ನು ಗಮನಿಸಿದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಪಾರದರ್ಶಕವಾಗಿ ಚುನಾವಣೆ ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಇದನ್ನು ರಾಜ್ಯ ಚುನಾವಣಾ ಆಯೋಗ ಅರ್ಥ ಮಾಡಿಕೊಂಡು ಅಕ್ರಮಗಳಿಗೆ ಕಡಿವಾಣ ಹಾಕಬೇಕು. ಇಲ್ಲದಿದ್ದರೆ ಅರೆಸೇನಾ ಪಡೆ ನಿಯೋಜನೆಗೆ ಒತ್ತಾಯ ಮಾಡುತ್ತೇವೆ ಎಂದರು.

ರಾಜ್ಯ ಚುನಾವಣಾ ಆಯೋಗ, ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆಗೆ ತಮ್ಮದೇ ಆದ ಜವಾಬ್ದಾರಿಗಳಿವೆ. ಸರ್ಕಾರದ ಒತ್ತಡಕ್ಕೆ ಮಣಿಯದೆ ನ್ಯಾಯಯುತವಾಗಿ ಚುನಾವಣೆ ನಡೆಸಬೇಕು. ಚುನಾವಣಾ ಅಕ್ರಮ ಎಸಗುತ್ತಿರುವವರ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ರಾಮನಗರದ 1ನೇ ವಾರ್ಡಿನಲ್ಲಿರುವ ವಿಆರ್‌ಎಲ್ ಗೋದಾಮು ಹಾಗೂ ವಾಹನದಲ್ಲಿದ್ದ 3700 ಸೀರೆಗಳು, ಡ್ರೆಸ್ ಪೀಸ್ ಗಳು ಮಂಗಳವಾರ ರಾತ್ರಿ ಜಪ್ತಿಯಾಗಿವೆ. ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮತ್ತು ಎಸ್ಪಿ ಇದರ ಅಂದಾಜು ಮೌಲ್ಯ 14 ಲಕ್ಷ ಇರಬಹುದೆಂದು ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ವಿಆರ್‌ಎಲ್ ಲಾರ್ಜಸ್ಟಿಕ್ ಟ್ರಾಬ್ಸ್‌ಪೋರ್ಟ್ ಮ್ಯಾನೇಜರ್‌ ಅನ್ನು ವಿಚಾರಿಸಿದಾಗ ರಾಮನಗರ ಕ್ಷೇತ್ರ ಶಾಸಕ ಇಕ್ಬಾಲ್ ಹುಸೇನ್ ತಮ್ಮ ಒಡೆತನದ ಎನ್ಎಂ ಗ್ರಾನೈಟ್ ಕಂಪನಿಯ ಮೂಲಕ ಸಾಯಿ ಡ್ರೆಸಸ್ಸ್, ಸೂರತ್ ಟೆಕ್ಸ್ಟ್ ಟೈಲ್ ಮಾರ್ಕೆಟ್‌ನಿಂದ ಈ ಸೀರೆಗಳನ್ನು ಖರೀದಿ ಮಾಡಿದ್ದಾರೆ ಎಂಬುದು ಗೊತ್ತಾಗಿದೆ ಎಂದು ಹೇಳಿದರು.

ಕಳೆದ 20 ದಿನಗಳ ಹಿಂದೆ ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಪಿಜನ್ ಹಾಗೂ ಸ್ಟೌ ಕ್ರಾಫ್ಟ್ ಕಂಪನಿಯಿಂದ 10 ಲಕ್ಷ ಕುಕ್ಕರ್‌ಗಳನ್ನು ನೀಡಲು ಮುಂಗಡ ಹಣ ನೀಡಿದ್ದಾರೆ. ಈಗಾಗಲೇ 5 ಲಕ್ಷಕ್ಕು ಹೆಚ್ಚು ಕುಕ್ಕರ್‌ಗಳು ವಿತರಣೆ ಆಗಿವೆ. ಇದೆಲ್ಲವನ್ನು ಗಮನಿಸಿದರೆ ಅಕ್ರಮಗಳಿಗೆ ಕಡಿವಾಣ ಹಾಕಿ ಪಾರದರ್ಶಕ ಚುನಾವಣೆ ನಡೆಸುವ ಪ್ರಯತ್ನ ನಡೆಯುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಟೀಕಿಸಿದರು.

ಆಫರ್ ಕೊಟ್ಟು ಖರೀದಿ ಪ್ರಯತ್ನ:

ನೂರಾರು ಕೋಟಿ ಅಕ್ರಮ ಹಣ ತಂದು ಜೆಡಿಎಸ್ - ಬಿಜೆಪಿ ಕಾರ್ಯಕರ್ತರನ್ನು ಖರೀದಿ‌‌ ಮಾಡುವ ಸಂಸ್ಕೃತಿಯೂ ಆರಂಭವಾಗಿದೆ. ಪ್ರತಿನಿತ್ಯ ಮಧ್ಯರಾತ್ರಿವರೆಗೂ ಕಾರ್ಯಕರ್ತರಿಗೆ ಆಮಿಷ ಒಡುತ್ತಿದ್ದಾರೆ. ಒಬ್ಬೊಬ್ಬರಿಗೆ 25-50 ಲಕ್ಷ ಆಫರ್ ಕೊಟ್ಟು ಖರೀದಿ ಮಾಡುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಹಣಕ್ಕೆಲ್ಲ ತಲೆ ಬಾಗುವ ಕಾರ್ಯಕರ್ತರು ಜೆಡಿಎಸ್ - ಬಿಜೆಪಿ ಪಕ್ಷದಲ್ಲಿ ಯಾರೂ ಇಲ್ಲ. ಪಕ್ಷದ ತತ್ವಸಿದ್ಧಾಂತ ಒಪ್ಪಿ, ನಾಯಕರ ನಡೆ ಮೆಚ್ಚಿ ಕಾರ್ಯಕರ್ತರು ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು. ನಮ್ಮ ಕಾರ್ಯಕರ್ತರು ನಾನು ರಾಮನಗರಕ್ಕೆ ಬಂದಾಗಲೆಲ್ಲ ಕಣ್ಣೀರು ಹಾಕುತ್ತಾರೆ. ನಮ್ಮ ಕಾರ್ಯಕರ್ತರಿಗೆ ಪಕ್ಷಕ್ಕೆ ಬರಲಿಲ್ಲವೆಂದರೆ ಕೇಸು ಹಾಕಿಸಿ ಜೈಲಿಗೆ ಕಳುಹಿಸುವುದಾಗಿ ಕಾಂಗ್ರೆಸ್ ನವರು ಬೆದರಿಸುತ್ತಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಶಾಸಕರಾಗಿದ್ದಾಗ ಆ ರೀತಿ ಕೆಲಸ ಮಾಡಲಿಲ್ಲ. ಎಂದೂ ಅಧಿಕಾರ ದುರುಪಯೋಗ ಪಡಿಸಿಕೊಂಡಿಲ್ಲ. ಆ ರೀತಿ‌ ಏನಾದರು ಮಾಡಿದ್ದರೆ ನಮ್ಮ ಕುಟುಂಬ ರಾಮನಗರಕ್ಕೆ ಕಾಲಿಡಲ್ಲ ಎಂದು ತಿಳಿಸಿದರು.

ಈ ರೀತಿಯ ಚುನಾವಣೆಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತದೆ. ನಾನೂ ಮತದಾರನಾಗಿ ಕೇಳುತ್ತೇನೆ. ಇನ್ನೂ ‌ಎಷ್ಟು ದಿನ ಈ‌ ರೀತಿ ಅಕ್ರಮ ದುಡ್ಡು ತಂದು ಚುನಾವಣಾ ನಡೆಸುತ್ತೀರಾ? ಇದು ಧರ್ಮ ಹಾಗೂ ಅಧರ್ಮದ ನಡುವಿನ ಚುನಾವಣೆ ಆಗಿದೆ. ಧರ್ಮ ಗೆದ್ದೇ ಗೆಲ್ಲುತ್ತದೆ ಎಂದು ನಿಖಿಲ್ ವಿಶ್ವಾಸ ವ್ಯಕ್ತಪಡಿಸಿದರು.

ಕೈ ಶಾಸಕರಿಗೆ ಟಾಂಗ್:

ಎನ್‌ಡಿಎ ಮೈತ್ರಿ ಅಭ್ಯರ್ಥಿ ಡಾ.ಸಿ.ಎನ್ .ಮಂಜುನಾಥ್ ಅವರ ಬಗ್ಗೆ ಕಾಂಗ್ರೆಸ್‌ನ ಶಾಸಕರು ತುಂಬಾ ಕೀಳಾಗಿ ಮಾತನಾಡುತ್ತಿದ್ದಾರೆ. ಅತ್ಯಂತ ಪ್ರಾಮಾಣಿಕವಾಗಿ ನಿಷ್ಠೆಯಿಂದ‌ ರಾಜಕೀಯ ಸೇವೆ ಮಾಡಲು ಮಂಜುನಾಥ್ ಬಂದಿದ್ದಾರೆ. ಆದರೆ, ಪ್ರತಿನಿತ್ಯ ಅವರಿಗೆ ಮಾನಸಿಕವಾಗಿ ಹಿಂಸೆ ನೀಡಿ ಕುಗ್ಗಿಸುವ ಪ್ರಯತ್ನ ನಡೆಯುತ್ತಿದೆ. ಇದೆಲ್ಲ ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು. ಮಾಗಡಿ ಶಾಸಕರು ರಾಜಕೀಯಕ್ಕೆ ತೆವಲಿಗೆ ಬಂದಿದ್ದಾರೆ ಅಂತಾ ಹೇಳುತ್ತಿದ್ದಾರೆ. ಮಿಸ್ಟರ್ ಮಾಗಡಿ ಶಾಸಕರೇ ತೆವಲಿನ ಪದದ ಅರ್ಥ ಗೊತ್ತಿದಿಯಾ. ಶಾಸಕ ಇಕ್ಬಾಲ್ ರವರು ರಾಜಕೀಯ ಗಂಧ ಗಾಳಿ ಗೊತ್ತಿಲ್ಲ ಅನ್ನುತ್ತಾರೆ. ನೀವೆಲ್ಲ ಚೆನ್ನಾಗಿ ಅರ್ಥ ಮಾಡಿಕೊಂಡದ್ದೀರಾ. ಎಲ್ಲೆಲ್ಲಿ ಹಣ ಇಟ್ಟು, ಯಾವ್ಯಾವ ರೀತಿ ಹಣ ಹಂಚಿ ಹೇಗೆ ಚುನಾವಣೆ ನಡೆಸಬೇಕೆಂದು ನೀವು ಚೆನ್ನಾಗಿ ತಿಳಿದುಕೊಂಡಿದ್ದೀರಾ ಎಂದು ಟಾಂಗ್ ನೀಡಿದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹೇಗೆ ಸೋತರು ಅಂತಾ ಜನ ಚರ್ಚೆ ಮಾಡುತ್ತಿದ್ದಾರೆ. ನಾನು ಸೋಲುವುದಕ್ಕೆ ಕಾರಣ ಕ್ಷೇತ್ರದ ಜನ ಅಲ್ಲ. ಮತದಾನದ ಹಿಂದಿನ ದಿನ ಮಧ್ಯರಾತ್ರಿ ಕೊಟ್ಟ ಗಿಫ್ಟ್ ಕಾರ್ಡ್ ನಿಂದಾಗಿ ನಾನು ಸೋತೆ‌. ಆ ಮುಗ್ದಜನರಿಗೆ ಗಿಫ್ಟ್ ಕಾರ್ಡ್ ಹೆಸರಿನಲ್ಲಿ ಮೋಸ ಮಾಡಿದರು. ಯುವಕನಾಗಿ ನಾನೇ ಬಲಿಪಶುವಾದೆ, ಆ ರೀತಿಯ ಮೋಸ ಪ್ರಾಮಾಣಿಕ ವೈದ್ಯನಿಗೆ ಆಗಬಾರದೆಂದು ಹೋರಾಟ ನಡೆಸುತ್ತೇವೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಗಿಫ್ಟ್ ಕೊಡುತ್ತಿದ್ದು, ನಾವೂ ಏನಾದರು ಕೊಡಬೇಕೆಂದು ನಮ್ಮ ಕಾರ್ಯಕರ್ತರು ಹೇಳುತ್ತಿದ್ದರು. ಆದರೆ, ನಾನು ನಮ್ಮ ತಾತಾ, ತಂದೆ ಆ ರೀತಿ ಗಿಫ್ಟ್ ಚುನಾವಣೆ ನಡೆಸಿಲ್ಲ. ಯುವಕರಾಗಿ ನಾವು ಮಾದರಿ ಆಗರಿಬೇಕೆಂದು ಹೇಳಿ ಅದರ ಅವಶ್ಯಕತೆ ಇಲ್ಲವೆಂದು ಹೇಳಿದೆ ಎಂದು ನಿಖಿಲ್ ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ರಾಜಶೇಖರ್, ಮುಖಂಡರಾದ ನರಸಿಂಹಮೂರ್ತಿ, ಶಿವಲಿಂಗಯ್ಯ, ದೊರೆಸ್ವಾಮಿ, ರವಿ, ಸುಗ್ಗನಹಳ್ಳಿ ರಾಮಕೃಷ್ಣ, ಜಯಕುಮಾರ್, ಪಾಂಡು, ಬಿಜೆಪಿ ಮುಖಂಡರಾದ ಗೌತಮ್ ಗೌಡ, ದರ್ಶನ್ ರೆಡ್ಡಿ, ರುದ್ರದೇವರು, ಚಂದ್ರಶೇಖರ್ ರೆಡ್ಡಿ ಇತರರಿದ್ದರು.

ಕಾಂಗ್ರೆಸ್‌ ನಾಯಕರ ಕಾಡುತಿರುವ ಹತಾಶೆ

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಮತದಾರರು ನೀಡುವ ತೀರ್ಪಿನ ಮೇಲೆ ಯಾವ ಪಕ್ಷ ಸೂಸೈಡ್ (ಆತ್ಮಹತ್ಯೆ) ಮಾಡಿಕೊಳ್ಳುತ್ತದೆ ಎಂಬುದು ನಿರ್ಧಾರವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟಾಂಗ್ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ - ಬಿಜೆಪಿ ಮೈತ್ರಿ ನೋಡಿ ಕಾಂಗ್ರೆಸ್ ನಾಯಕರಲ್ಲಿ ಹತಾಶೆ ಕಾಡುತ್ತಿದೆ. ಈ ರೀತಿಯ ಚುನಾವಣೆಯನ್ನು ಕಾಂಗ್ರೆಸ್ ಎಂದೂ ಮಾಡಿರಲಿಲ್ಲ. ಚುನಾವಣಾ ಫಲಿತಾಂಶ ಯಾವ ಪಕ್ಷ ಸೆಲ್ಫ್ ಸೂಸೈಡ್ ಮಾಡಿಕೊಳ್ಳುತ್ತದೆ ಎಂಬುದು ಮತದಾರರು ನೀಡುವ ತೀರ್ಪಿನ ಮೇಲೆ ನಿರ್ಧಾರವಾಗುತ್ತದೆ. ಮತದಾರರು ಪ್ರಬುದ್ಧರಾಗಿದ್ದು, ಪ್ರಜ್ಞಾವಂತರಾಗಿದ್ದಾರೆ. ಮೈತ್ರಿ ಪಕ್ಷವನ್ನು ಬೆಂಬಲಿಸುವ ವಿಶ್ವಾಸವಿದೆ ಎಂದರು.

ಜೆಡಿಎಸ್ ಪ್ರಾದೇಶಿಕ ಪಕ್ಷವಾಗಿರುವ ಕಾರಣ ದುರಾಸೆ ಬೀಳದೆ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುವ ತೀರ್ಮಾನ ಮಾಡಿದೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಿಜೆಪಿಯೊಂದಿಗೆ ಕೈಜೋಡಿಸಿ ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಎರಡೂ ಪಕ್ಷಗಳ ಮತಗಳ ವರ್ಗಾವಣೆ ಆರೋಗ್ಯಕರವಾಗಿ ಆಗಬೇಕಿದೆ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಮಂಡ್ಯ ಕ್ಷೇತ್ರದಿಂದ ನೀವು ಸ್ಪರ್ಧೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಯುವ ಕಾರ್ಯಕರ್ತನಾಗಿ ನಾನು ಫಲಿತಾಂಶಕ್ಕಾಗಿ ಹೋರಾಟ ಮಾಡುತ್ತೇನೆ. ಮಂಡ್ಯದಿಂದ ಸ್ಪರ್ಧಿಸಿದರೆ ಅಲ್ಲಿಗೆ ಸೀಮಿತ ಆಗಬೇಕಾಗುತ್ತದೆ. ಉಳಿದ ಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ತಾವು ಸ್ಪರ್ಧೆ ಮಾಡುವುದಿಲ್ಲ ಎಂಬ ಸುಳಿವು ನೀಡಿದರು.

ಪಕ್ಷೇತರ ಸಂಸದೆ ಸುಮಲತಾ ಮಾತ್ರವಲ್ಲದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ. ಸುಮಲತಾರವರು ಬಿಜೆಪಿ ರಾಷ್ಟ್ರೀಯ ನಾಯಕರನ್ನು ಭೇಟಿಯಾಗಿದ್ದು, ಅವರು ಒಂದಿಷ್ಟು ಸಲಹೆ ನೀಡಿದ್ದಾರೆ. ಸುಮಲತಾ ಅವರೊಂದಿಗೂ ಚರ್ಚೆ ನಡೆಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ನಿಖಿಲ್ ಕುಮಾರಸ್ವಾಮಿ ಉತ್ತರಿಸಿದರು.