ಐತಿಹಾಸಿಕ ತಾಣ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಡಾ. ಪರಮಶಿವಮೂರ್ತಿ

| Published : Aug 18 2025, 12:00 AM IST

ಐತಿಹಾಸಿಕ ತಾಣ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಡಾ. ಪರಮಶಿವಮೂರ್ತಿ
Share this Article
  • FB
  • TW
  • Linkdin
  • Email

ಸಾರಾಂಶ

ಆಧುನಿಕತೆಯ ಭರಾಟೆಯಲ್ಲಿ ಅಪರೂಪದ ಐತಿಹಾಸಿಕ ತಾಣಗಳು ಕ್ರಮೇಣ ನೆಲೆಸಮವಾಗುತ್ತಿದ್ದು, ಇವುಗಳನ್ನು ಉಳಿಸುವ, ಸಂರಕ್ಷಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ.

ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಉದ್ಘಾಟಿಸಿದ ಹಂಪಿ ಕನ್ನಡ ವಿವಿ ಕುಲಪತಿ

ಕನ್ನಡಪ್ರಭ ವಾರ್ತೆ ಬಳ್ಳಾರಿ

ಆಧುನಿಕತೆಯ ಭರಾಟೆಯಲ್ಲಿ ಅಪರೂಪದ ಐತಿಹಾಸಿಕ ತಾಣಗಳು ಕ್ರಮೇಣ ನೆಲೆಸಮವಾಗುತ್ತಿದ್ದು, ಇವುಗಳನ್ನು ಉಳಿಸುವ, ಸಂರಕ್ಷಿಸುವ ಕಾರ್ಯ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ. ಡಿ.ವಿ. ಪರಮಶಿವಮೂರ್ತಿ ತಿಳಿಸಿದರು.

ಇಲ್ಲಿನ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ ಮತ್ತು ಕರ್ನಾಟಕ ಇತಿಹಾಸ ಅಕಾಡೆಮಿಯ ಜಂಟಿ ಸಹಯೋಗದಲ್ಲಿ ಆಯೋಜಿಸಿದ್ದ ಐತಿಹಾಸಿಕ ಪರಂಪರೆ ಉಳಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಆದಿಮಾನವರ ಶಿಲಾಯುಗದಲ್ಲಿ ನೆಲೆಸಿದ್ದ ಹೆಚ್ಚಿನ ಕುರುಹುಗಳು ಬಳ್ಳಾರಿ ಜಿಲ್ಲೆಯಲ್ಲಿವೆ. ಜಿಲ್ಲೆಯ ನಾನಾ ಕಡೆ ಶಿಲಾಯುಗದ ತಾಣಗಳು ಕಂಡು ಬಂದಿವೆ. ಈ ಬಗ್ಗೆ ಹೆಚ್ಚಿನ ಸಂಶೋಧನೆ ನಡೆಯುತ್ತಿದೆ. ಪ್ರಾಗೈತಿಹಾಸಿಕ ಹಸ್ತಪ್ರತಿಗಳು, ನಾಣ್ಯಗಳು, ಸ್ಮಾರಕಗಳು, ತಾಳೆಗರಿಗಳು, ಕುರುಹುಗಳು, ಕಡತಗಳು ನಿರ್ವಹಣೆ ಕೊರತೆಯಿಂದ ನಶಿಸಿ ಹೋಗುತ್ತಿರುವ ಆತಂಕ ಎದುರಾಗಿದ್ದು ಅವುಗಳು ಸಂರಕ್ಷಿಸುವ ಕಾರ್ಯವೂ ಆಗಬೇಕಿದೆ. ಈ ಬಗ್ಗೆ ಜಾಗೃತಿಯ ಕೆಲಸ ಸಹ ನಿರಂತರವಾಗಿ ನಡೆಯಬೇಕು ಎಂದು ತಿಳಿಸಿದರು.

ವಿಶ್ರೀಕೃ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಂ.ಮುನಿರಾಜು, ಐತಿಹಾಸಿಕ ಪರಂಪರೆಯನ್ನು ಉಳಿಸಲು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿದೆ ಎಂದರು. ಹಂಪಿಯ ವಿರೂಪಾಕ್ಷ ದೇವಾಲಯ ಸೇರಿದಂತೆ ಅನೇಕ ಸ್ಮಾರಕಗಳು ಐತಿಹಾಸಿಕವಾಗಿ ವಿಶಿಷ್ಟ ಸ್ಥಾನವನ್ನು ಹೊಂದಿವೆ. ಇತಿಹಾಸ ಸೃಷ್ಟಿಸಿರುವ ಶಿಲ್ಪಿಗಳು, ಕಲಾವಿದರ ಪರಿಚಯ ಇಂದಿನ ಪೀಳಿಗೆಗೆ ತಿಳಿಸುವ ಅಗತ್ಯವಿದೆ. ವಿವಿಯ ಕಲಾ ಮತ್ತು ಸಮಾಜ ವಿಜ್ಞಾನ ನಿಕಾಯಗಳ ಸಂಶೋಧನೆಗೆ ಉತ್ತೇಜನ ನೀಡಲಾಗುವುದು.

ಮುಂಬರುವ ದಿನಗಳಲ್ಲಿ ಪ್ರವಾಸೋದ್ಯಮ ಮತ್ತು ಐತಿಹಾಸಿಕ ಸ್ಮಾರಕಗಳ ಅಧ್ಯಯನಕ್ಕೆ ಹಂಪಿ ವಿವಿಯ ಸಹಭಾಗಿತ್ವದೊಂದಿಗೆ ಹೊಸ ಕೋರ್ಸ್ ಆರಂಭಿಸುವುದಾಗಿ ಪ್ರೊ. ಮುನಿರಾಜು ತಿಳಿಸಿದರು.

ತುಮಕೂರು ವಿಶ್ವವಿದ್ಯಾಲಯದ ಕುಲಸಚಿವ ಡಾ. ಎಂ.ಕೊಟ್ರೇಶ್ ಮಾತನಾಡಿ, ವಿಶ್ವ ಪಾರಂಪರಿಕ ತಾಣಗಳ ಪೈಕಿ 44 ಭಾರತದಲ್ಲಿದ್ದು, ಅದರಲ್ಲಿ 4 ತಾಣಗಳು ಕರ್ನಾಟಕದಲ್ಲಿವೆ. ಐತಿಹಾಸಿಕ ತಾಣಗಳ ಸಂರಕ್ಷಣೆಗೆ ವಿವಿಯಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಆಯಾ ಗ್ರಾಮ ಅಥವಾ ಸ್ಥಳವನ್ನು ದತ್ತು ಪಡೆದು ಅಲ್ಲಿನ ಸ್ಮಾರಕಗಳ ರಕ್ಷಣೆ ಮಾಡಬೇಕು ಎಂದು ಹೇಳಿದರು.

ವಿವಿಯ ಕುಲಸಚಿವ ಸಿ.ನಾಗರಾಜು ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಇತಿಹಾಸ ಅಕಾಡೆಮಿ ಅಧ್ಯಕ್ಷ ಡಾ. ದೇವರಕೊಂಡಾರೆಡ್ಡಿ, ಕರ್ನಾಟಕದ ಐತಿಹಾಸಿಕ ಪರಂಪರೆ ಸಂರಕ್ಷಿಸಲು 40 ವರ್ಷಗಳಿಂದಲೂ ಪ್ರಯತ್ನ ನಡೆದಿದೆ. 6ನೇ ವಿಕ್ರಮಾದಿತ್ಯನ 52 ವರ್ಷಗಳ ಆಡಳಿತ ನಡೆಸಿದ್ದನು. ಆತನು 200ಕ್ಕೂ ಅಧಿಕ ದೇವಾಲಯ ನಿರ್ಮಿಸಿದ್ದನು. ಕುಡುತಿನಿ, ಕುರುಗೋಡುಗಳಲ್ಲಿರುವ ಶಾಸನ, ಕುಡುತಿನಿಯ ಟಂಕಶಾಲೆಯ ಹೊನ್ನಿನ ನಾಣ್ಯ (ನವಿಲು ಪೊನ್ನೂ) ಸಂರಕ್ಷಿಸಲಾಗಿದೆ ಎಂದರು.

ವಿದ್ಯಾರ್ಥಿಗಳು ತಮ್ಮ ಗ್ರಾಮಗಳ ಮತ್ತು ಸುತ್ತಮುತ್ತಲಿನ ಸ್ಥಳಗಳ ಇತಿಹಾಸವನ್ನು ತಿಳಿದುಕೊಂಡು ಯಾವುದಾದರೂ ಶಾಸನ, ಸ್ಮಾಕರ ಅಥವಾ ಕುರುಹುಗಳು ಕಂಡು ಬಂದಲ್ಲಿ ಇತಿಹಾಸ ತಜ್ಞರಿಗೆ ಸಂಪರ್ಕಿಸಬೇಕು ಎಂದು ಹೇಳಿದರು.

ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ರಾಜಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಐತಿಹಾಸಿಕ ಪರಂಪರೆ ಉಳಿಸಿ ಎಂಬ ಭಿತ್ತಿಪತ್ರವನ್ನು ಗಣ್ಯರು ಅನಾವರಣಗೊಳಿಸಿದರು. ಇತಿಹಾಸ ಮತ್ತು ಪುರಾತತ್ವ ವಿಭಾಗದ ಮುಖ್ಯಸ್ಥ ಪ್ರೊ. ತಿಪ್ಪೇಸ್ವಾಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಎಚ್.ಎಂ. ಬಸವರಾಜು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗದ ಡಾ. ಶಿವಪ್ರಕಾಶ್ ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಸಂತೋಷಕುಮಾರ ವಂದಿಸಿದರು. ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.