ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಪಶ್ಚಿಮ ಘಟ್ಟದ ಜೀವವೈವಿಧ್ಯ ಮತ್ತು ಸಂರಕ್ಷಣೆ ಎಂಬ ವಿಷಯದ ಕುರಿತು ವಿಶೇಷ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು.

ಪಶ್ಚಿಮ ಘಟ್ಟದ ಜೀವವೈವಿಧ್ಯ-ಸಂರಕ್ಷಣೆ: ಚಿಂತನ-ಮಂಥನ ಕಾರ್ಯಕ್ರಮಕನ್ನಡಪ್ರಭ ವಾರ್ತೆ ಹೊನ್ನಾವರ

ತಾಲೂಕಿನ ಶ್ರೀಕ್ಷೇತ್ರ ಬಂಗಾರಮಕ್ಕಿಯಲ್ಲಿ ಪಶ್ಚಿಮ ಘಟ್ಟದ ಜೀವವೈವಿಧ್ಯ ಮತ್ತು ಸಂರಕ್ಷಣೆ ಎಂಬ ವಿಷಯದ ಕುರಿತು ವಿಶೇಷ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು.

ಪಶ್ಚಿಮ ಘಟ್ಟಗಳ ಜೀವವೈವಿಧ್ಯ, ಅರಣ್ಯ, ವನ್ಯಜೀವಿಗಳ ಆವಾಸಸ್ಥಾನ ಹಾಗೂ ಪರಿಸರ ಸಂರಕ್ಷಣೆಯ ಅಗತ್ಯದ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು.

ವನ್ಯಜೀವಿ ತಜ್ಞರಾದ ವಿನಾಯಕ ಎಸ್.ಜಿ., ಪರಿಸರ ಸಂರಕ್ಷಕ ಅಖಿಲೇಶ್ ಚಿಪ್ಳಿ ಹಾಗೂ ಪರಿಸರ ವಿಜ್ಞಾನಿ ಡಾ. ಎನ್.ಎಂ. ಗುರುಪ್ರಸಾದ್ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಪಶ್ಚಿಮ ಘಟ್ಟಗಳ ಜೀವವೈವಿಧ್ಯ, ಮಾನವ–ವನ್ಯಜೀವಿ ಸಂಘರ್ಷ,ಅರಣ್ಯ ಸಂರಕ್ಷಣೆ ಹಾಗೂ ಶರಾವತಿಯ ಉಪನದಿಗಳ ಕುರಿತು ಮಾಹಿತಿ ಮತ್ತು ವೈಜ್ಞಾನಿಕ ದೃಷ್ಟಿಕೋನವನ್ನು ಹಂಚಿಕೊಂಡರು.

ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶಗಳು ಛಿದ್ರಗೊಳ್ಳುತ್ತಿರುವುದು, ವನ್ಯಜೀವಿಗಳ ಆವಾಸಸ್ಥಾನಗಳು ಕ್ಷೀಣಿಸುತ್ತಿರುವುದು ಹಾಗೂ ಮಾನವ-ವನ್ಯಜೀವಿ ಸಂಘರ್ಷ ಹೆಚ್ಚುತ್ತಿರುವ ಹಿನ್ನೆಲೆ ಪರಿಸರ ಸಮತೋಲನ ಕಾಪಾಡುವ ಅಗತ್ಯವನ್ನು ತಜ್ಞರು ವಿವರಿಸಿದರು. ಶರಾವತಿ ಕಣಿವೆಯಲ್ಲಿ ಪ್ರಸ್ತಾಪಿತವಾಗಿರುವ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಸೇರಿ ಬೃಹತ್ ಅಭಿವೃದ್ಧಿ ಯೋಜನೆಗಳ ಪರಿಸರ ಮತ್ತು ಜಲಸಂಪನ್ಮೂಲಗಳ ಮೇಲಿನ ದೀರ್ಘಕಾಲೀನ ಪರಿಣಾಮಗಳ ಕುರಿತು ಕೂಡ ಚರ್ಚೆನಡೆಯಿತು.

ಮಾರುತಿ ಗುರೂಜಿ ಮಾತನಾಡಿ, ಪಶ್ಚಿಮ ಘಟ್ಟ ಉಳಿದರೆ ಮಾತ್ರ ನಮ್ಮ ನದಿಗಳು, ಕೃಷಿ, ಹವಾಮಾನ ಮತ್ತು ಮುಂದಿನ ಪೀಳಿಗೆಯ ಬದುಕು ಸುರಕ್ಷಿತವಾಗಿರುತ್ತದೆ. ಜೀವವೈವಿಧ್ಯ ನಮ್ಮ ಶತ್ರುಗಳಲ್ಲ; ಅವುಗಳಿಗೂ ಈ ಭೂಮಿಯಲ್ಲಿ ಬದುಕುವ ಹಕ್ಕಿದೆ. ಪ್ರಕೃತಿಯ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ ಎಂಬ ಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿ ತಜ್ಞರೊಂದಿಗೆ ಸಂವಾದ ನಡೆಸಿದರು.

ಯುವಜನರು ಹಾಗೂ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಕುರಿತು ಅರಿವು ಬೆಳೆಸಿಕೊಳ್ಳುವುದು ಮತ್ತು ಮುಂದಿನ ದಿನಗಳಲ್ಲಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವುದು ಅಗತ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಪಶ್ಚಿಮ ಘಟ್ಟಗಳ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಪರಿಸರ ಸಂಘಟನೆಗಳ ಜವಾಬ್ದಾರಿಯಲ್ಲ. ಸ್ಥಳೀಯರು, ವಿದ್ಯಾರ್ಥಿಗಳು, ಯುವಜನರು, ರೈತರು ಹಾಗೂ ಸಮಾಜದ ಪ್ರತಿಯೊಬ್ಬರೂ ಪ್ರಕೃತಿ ಮತ್ತು ಜೀವವೈವಿಧ್ಯದ ಸಂರಕ್ಷಣೆಯಲ್ಲಿ ಕೈಜೋಡಿಸಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ನೀಡಲಾಯಿತು. ಶೈಲೇಶ್ ಕಾರ್ಯಕ್ರಮ ನಿರೂಪಿಸಿದರು.