ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಸರ್ಕಾರದ ಸ್ವತ್ತಿನ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು, ಈ ಕುರಿತು ಅರಿವು ಮೂಡಿಸುವುದು ಅಗತ್ಯವಾಗಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಅಧ್ಯಕ್ಷ ನ್ಯಾಯಮೂರ್ತಿ ಬಿ.ಎ.ಪಾಟೀಲ್ ತಿಳಿಸಿದರು.ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಣದಲ್ಲಿ ಶನಿವಾರ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳು, ಬೆಂಗಳೂರು, ಕಂದಾಯ ಇಲಾಖೆ, ಜಿಲ್ಲಾ ಕಾನುನು ಸೇವೆಗಳ ಪ್ರಾಧಿಕಾರ ಮತ್ತು ಜಿಲ್ಲಾಡಳಿತ ಶಿವಮೊಗ್ಗ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ ಮತ್ತು ಸಂಬಂಧಿಸಿದ ಕಾಯ್ದೆಗಳ ಬಗೆಗಿನ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ಭೂಮಿ ರಕ್ಷಣೆ ಕೇವಲ ಕಂದಾಯ, ಅರಣ್ಯ, ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಮಾತ್ರವಲ್ಲ. ಬದಲಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಸ್ಥಿರಾಸ್ತಿಗಳ ಬೆಲೆ ಗಗನಕ್ಕೇರಿದಂತೆ ಭೂ ಕಬಳಿಕೆ ಸಹ ಹೆಚ್ಚಾಗಿದೆ. ಇದನ್ನು ತಡೆಯಲು ಎಷ್ಟೋ ಕಾನೂನು ಇದ್ದರೂ ಸಹ ಪರಿಣಾಮಕಾರಿಯಾಗಿ ಅನುಷ್ಠಾನವಾಗದ ಕಾರಣ ಈ ಅಧಿನಿಯಮವನ್ನು ಜಾರಿಗೆ ತರಲಾಗಿದ್ದು, ಈ ಅಧಿನಿಯಮದ ಕುರಿತು ಅರಿವು ಹೆಚ್ಚಿಸಬೇಕಿದೆ ಎಂದರು.ಕೆರೆ, ಕಟ್ಟೆ, ಹಳ್ಳ, ಜಮೀನು, ಇತರೆ ಸರ್ಕಾರದ ಸ್ವತ್ತನ್ನು ಕಾನೂನು ಬಾಹಿರವಾಗಿ ಒತ್ತುವರಿ ಮಾಡುತ್ತಿರುವುದು ಗಮನಕ್ಕೆ ಬಂದ ತಕ್ಷಣ ಕಂದಾಯ ಅಧಿಕಾರಿ ಗಳು, ಗ್ರಾಮ ಲೆಕ್ಕಾಧಿಕಾರಿಗಳು ಸಮರ್ಪಕ ವರದಿ ತಯಾರಿಸಿ, ಸರ್ವೇ ಮಾಡಬೇಕು. ಈ ಅಧಿನಿಯಮದ ಪ್ರಕಾರ (ಸ್ಯುಮೊಟೊ) ಸ್ವಯಂ ಪ್ರಕರಣ ದಾಖಲಿಸ ಬಹುದು ಎಂದು ಎಚ್ಚರಿಸಿದರು.
ಒತ್ತುವರಿ ಆಗಿರುವುದು ಗಮನಕ್ಕೆ ಬಂದರೂ ಕ್ರಮ ಕೈಗೊಳ್ಳದೇ ಸುಮ್ಮನಿರುವುದು ಅಪರಾಧವಾಗುತ್ತದೆ. ಆದ್ದರಿಂದ ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಎಲ್ಲರೂ ಈ ಕಾನೂನಿನ ಉದ್ದೇಶ, ವ್ಯಾಪ್ತಿಯನ್ನು ಅರಿತಲ್ಲಿ ಸರ್ಕಾರಿ ಭೂಮಿ ಸಂರಕ್ಷಣೆ ಸಾಧ್ಯವಾಗುತ್ತದೆ ಎಂದರು.ಕೆರೆ ಸಂರಕ್ಷಣೆ ಅತ್ಯಂತ ಮಹತ್ವದ್ದು. ಕೆರೆ ಕಟ್ಟೆ, ಬಾವಿ, ಜಮೀನು ಇತರೆ ಸರ್ಕಾರಿ ಸ್ವತ್ತನ್ನು ಬಾಂದಗಲ್ಲು ಇತರೆ ಕ್ರಮಗಳಿಂದ ಗುರುತು ಹಾಕಿ ರಕ್ಷಿಸಬೇಕು. ಈ ನಿಟ್ಟಿನಲ್ಲಿ ಶಿವಮೊಗ್ಗದ ಜಿಲ್ಲಾಧಿಕಾರಿಗಳು ಸಮರ್ಥವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಶ್ಲಾಘಿಸಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಮಾತನಾಡಿ, ಈ ಅಧಿನಿಯಮ ಭೂ ಕಬಳಿಕೆಯನ್ನು ತಡೆಯಲು ಒಂದು ದೊಡ್ಡ ಅಸ್ತ್ರ ವಾಗಿದ್ದು, ಈ ಕುರಿತು ತಿಳಿದುಕೊಂಡು ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಹಾಗೂ ಈ ವಿಶೇಷ ನ್ಯಾಯಾಲಯ ವ್ಯಾಪ್ತಿಗೊಳಪಡುವ ಪ್ರಕರಣಗಳು ಸಿವಿಲ್ ನ್ಯಾಯಾಲಯದಲ್ಲಿದ್ದು, ಸರ್ಕಾರಿ ವಕೀಲರ ಮೂಲಕ ವಿಶೇಷ ನ್ಯಾಯಾಲಯಕ್ಕೆ ವರ್ಗಾವಣೆ ಮಾಡಿಕೊಳ್ಳಲು ಸಹಕರಿಸಬೇಕು ಎಂದರು.ಪ್ರಥಮ ಅಧಿವೇಶನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ನ್ಯಾಯಮೂರ್ತಿ ಬಿ.ಎ.ಪಾಟೀಲ್ ಕರ್ನಾಟಕ ಭೂ ಕಬಳಿಕೆ ನಿಷೇಧ ಅಧಿನಿಯಮ 2011 ಮತ್ತು ತಿದ್ದುಪಡಿ ಕಾಯ್ದೆ ಕುರಿತು ಉಪನ್ಯಾಸ ನೀಡಿದರು. ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕಿ ಯಾಸ್ಮೀನ್ ಬಾನು ಸರ್ಕಾರಿ ಜಮೀನು ಒತ್ತುವರಿಯನ್ನು ಕಂಡುಹಿಡಿಯುವ ಸರ್ವೇ ವಿಧಾನ ಮತ್ತು ನಿಯಮಗಳ ಕುರಿತು ಉಪನ್ಯಾಸ ನೀಡಿದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಕೆ.ಎಚ್.ಅಶ್ವಥ್ ನಾರಾಯಣ ಗೌಡ ಅಧ್ಯಕ್ಷತೆ ವಹಿಸಿದ್ದರು.ದ್ವಿತೀಯ ಅಧಿವೇಶನದಲ್ಲಿ ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಕಂದಾಯ ಸದಸ್ಯ ಎಸ್.ಪಾಲಯ್ಯ, ಜಿಲ್ಲಾ ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕ ರಂಗಸ್ವಾಮಿ, ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್. ಸಂತೋಷ್ ಉಪನ್ಯಾಸ ನೀಡಿದರು. ತೃತೀಯ ಅಧಿವೇಶನದಲ್ಲಿ ನಿವೃತ್ತ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎ.ಎಂ.ಅಣ್ಣಯ್ಯ, ಕ.ಭೂ ಕ ನಿ ವಿಶೇಷ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ವಿಲೇಖನಾಧಿಕಾರಿ ಹೆಚ್.ಕೆ.ನವೀನ್ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಎನ್.ಹೇಮಂತ್, ಡಿಸಿಎಫ್ ಶಿವಶಂಕರ್, ಪ್ರಸನ್ನ ಕೃಷ್ಣ ಪಟಗಾರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ ಇದ್ದರು.ಸರ್ಕಾರಿ ಜಮೀನು ರಕ್ಷಿಸುವಲ್ಲಿ ಮಹತ್ವದ ಅಧಿನಿಯಮ: ಡಿಸಿಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಸರ್ಕಾರಿ ಭೂಮಿ ಅತ್ಯಂತ ಮೌಲ್ಯಯುತವಾದ ಆಸ್ತಿ. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಹೊಸ ಹಾಸ್ಟೆಲ್, ಆಸ್ಪತ್ರೆ, ಇಂದಿರಾ ಕ್ಯಾಂಟೀನ್, ಸರ್ಕಾರಿ ಕಟ್ಟಡಗಳನ್ನು ಕಟ್ಟಲಿಕ್ಕೆ ಜಾಗ ಸಿಗುತ್ತಿಲ್ಲ. ಸರ್ಕಾರದ ಅನುದಾನ ಇದೆ. ಆದರೆ ಜಾಗದ ಕೊರತೆ ಇದೆ. ಸರ್ಕಾರಿ ಜಮೀನನ್ನು ಸಂರಕ್ಷಿಸುವಲ್ಲಿ ಈ ಅಧಿನಿಯಮ ತುಂಬಾ ಮಹತ್ವದ್ದಾಗಿದೆ ಎಂದರು.ಈ ಅಧಿನಿಯಮದಡಿ ವಿಡಿಯೋ ಕಾನ್ಫರೆನ್ಸ್ ಮೂಲಕ ಸಾಕ್ಷ್ಯನೀಡುವುದು, ಇ-ಆಫೀಸ್ ಮೂಲಕ ದಾಖಲೆ ತೆಗೆದುಕೊಂಡರೆ ಅನುಕೂಲವಾಗುತ್ತದೆ. ಜೊತೆಗೆ ಅಧಿನಿಯಮ ಅನುಷ್ಠಾನದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಂಡರೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಎಂದರು.