ರೋಣ: ಪ್ರಾಚೀನ ಸಾಹಿತ್ಯ, ಸಂಸ್ಕೃತಿಗೆ ತನ್ನದೇಯಾದ ಶ್ರೇಷ್ಠತೆ, ಗೌರವವಿದ್ದು, ಇವುಗಳ ಸಂರಕ್ಷಣೆ ಅತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಸನ್ಮಾರ್ಗಿಗಳಾಗಬೇಕು ಎಂದು ಬಾಳೆಹೊನ್ನೂರಿನ ಪ್ರಸನ್ನ ರೇಣುಕ ಡಾ. ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಿಳಿಸಿದರು.

ಸೋಮವಾರ ತಾಲೂಕಿನ ಹಿರೇಹಾಳ ಗ್ರಾಮದಲ್ಲಿ ನಿರ್ಮಾಣಗೊಂಡ ಹಿರೇಮಠ ಲೋಕಾರ್ಪಣೆ, ಜಗದ್ಗುರು ರೇಣುಕಾಚಾರ್ಯ ಮೂರ್ತಿ ಪ್ರತಿಷ್ಠಾಪನೆ, ರಂಭಾಪುರಿ ಶ್ರೀಗಳ ಅಡ್ಡಪಲ್ಲಕಿ ಮಹೋತ್ಸವ, ರೇಣುಕ ಶಿವಾಚಾರ್ಯರ ಕರ್ತೃ ಗದ್ದುಗೆ ಪ್ರತಿಷ್ಠಾಪನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವೀರಶೈವ ಪಂಚಪೀಠಗಳಿಂದ ಸೈದಾಂತಿಕ ನಿಲುವನ್ನು, ಸಂಸ್ಕೃತಿಯನ್ನು ಬೆಳೆಸುವ ಮಹತ್ವದ ಕಾರ್ಯಗಳಾಗುತ್ತಿವೆ. ಧರ್ಮ ಜಾಗೃತಿ ಕಾರ್ಯಗಳ ಜತೆಗೆ ಜನಹಿತ ಕಾರ್ಯಗಳು, ಸಮಾಜಮುಖಿ ಕಾರ್ಯಗಳು ಜರುಗುವಂತಾಗಬೇಕು. ಇತ್ತೀಚೆಗೆ ಕೆಲವರಿಂದ ಧರ್ಮದ ದಾರಿ ತಪ್ಪಿಸುವ ಕಾರ್ಯವಾಗುತ್ತಿದೆ.

ಬಾಳೆಹೊನ್ನೂರ ಪೀಠ ಜನರ ಕಲ್ಯಾಣಕ್ಕಾಗಿ, ಗುರುಸ್ಥಲದ ಆದರ್ಶ ಚಿಂತನೆಗಳನ್ನು, ಶರಣರ ಕಳಕಳಿಯನ್ನು ಜನರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದೆ. ವೀರಶೈವ ಧರ್ಮದ ಮೂಲ ಪಂಚಾರ್ಯರನ್ನು ಬದಲಿಸುವುದು ಅಸಾಧ್ಯ. ಅದಕ್ಕೆ ಕೈ ಹಾಕುವುದನ್ನು ಮಾಡಬಾರದು. ಸತ್ಯವನ್ನು ನಾಶ ಮಾಡುವ ಪ್ರಯತ್ನಗಳು ನಡೆಯುತ್ತಿವೆಯಾದರೂ ಎಂದಿಗೂ ಸತ್ಯ ನಾಶವಾಗುವುದಿಲ್ಲ. ಮೂಲ ತತ್ವ, ಆಚಾರ ಎಂದಿಗೂ ನಾಶವಾಗುವುದಿಲ್ಲ.

ಮಹೇಶ್ವರಸ್ವಾಮಿ ಹಿರೇಮಠ ಅವರಿಗೆ ಧರ್ಮ ದಾಸೋಹಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಈ ವೇಳೆ ಅನೇಕ‌ ಗಣ್ಯರನ್ನು, ಭಜನಾ ತಂಡದವರನ್ನು, ಸಾಧಕರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಬೆನಹಾಳ ಹಿರೇಮಠದ ಸದಾಶಿವ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಚಳಗೇರಿ ವೀರಾಂಗಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಯಲಬುರ್ಗಾ ಬಸವಲಿಂಗೇಶ್ವರ ಶಿವಾಚಾರ್ಯರು, ಗದಗ ವೀರೇಶ್ವರ ಪುಣ್ಯಾಶ್ರಮದ ಡಾ. ಕಲ್ಲಯ್ಯಜ್ಜನವರು, ಲಿಂಗಸ್ಗೂರು ಮಾತಾ ನಂದಿಕೇಶ್ವರಿ ಅಮ್ಮನವರು, ರಾಜೂರ- ಅಡ್ನೂರ ಬೃಹನಗಮಠದ ಅಭಿನವ ಪಂಚಾಕ್ಷರ ಶಿವಾಚಾರ್ಯ, ಮಹೇಶ್ವರಸ್ವಾಮಿ ಹಿರೇಮಠ, ಸುಮಂಗಲಾ ಹಿರೇಮಠ, ಪ್ರಕಾಶಯ್ಯ ಶಾಸ್ತ್ರಿಗಳು, ಕುಮಾರಸ್ವಾಮಿ ಹಿರೇಮಠ, ಧನರಾಜ ಕರ್ಣಿ ಮುಂತಾದವರು ಉಪಸ್ಥಿತರಿದ್ದರು. ಅಂದಾನಯ್ಯ ವಿರಕ್ತಮಠ ನಿರೂಪಿಸಿದರು.