ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ, ಬೆಳೆಸಿ: ಚಲುವರಾಜು

| Published : Nov 13 2025, 12:30 AM IST

ಸಾರಾಂಶ

ಶ್ರಮ ಸಂಸ್ಕೃತಿಯ ಮೂಲಕ ಹುಟ್ಟಿಕೊಂಡ ವಿವಿಧ ಬಗೆಯ ಜಾನಪದ ಕಲಾ ಪ್ರಕಾರಗಳು ಅಳಿವಿನಂಚಿಗೆ ತಲುಪಿರುವುದು ನೋವಿನ ಸಂಗತಿ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜಾನಪದ ಕಲಾ ಪ್ರಕಾರ ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ.

ಕನ್ನಡಪ್ರಭ ವಾರ್ತೆ ಹಲಗೂರು

ಇತಿಹಾಸ, ಸಂಸ್ಕೃತಿ ಬಿಂಬಿಸುವ ಜೊತೆಗೆ ಮುಂದಿನ ತಲೆಮಾರಿಗೆ ನಮ್ಮ ಸಂಸ್ಕೃತಿಯನ್ನು ಕೊಂಡೊಯ್ಯುವ ಜಾನಪದ ಕಲಾ ಪ್ರಕಾರಗಳನ್ನು ಉಳಿಸಿ ಬೆಳೆಸಬೇಕಾದ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಗ್ರಾಪಂ ಅಧ್ಯಕ್ಷ ನಡಕಲಪುರ ಚಲುವರಾಜು ತಿಳಿಸಿದರು.

ಹಾಡ್ಲಿ ಸರ್ಕಾರಿ ಪ್ರೌಢಶಾಲೆ ಅವರಣದಲ್ಲಿ ಭೈರವಿ ಸಾಮಾಜಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್‌ನಿಂದ ಆಯೋಜಿಸಿದ್ದ ಜಾನಪದ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರು ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ಪ್ರಭಾವಕ್ಕೆ ಸಿಲುಕಿದ್ದಾರೆ. ಇದರಿಂದ ಮನಸ್ಸಿಗೆ ಮುದ ನೀಡುವ ಹಲವು ದೇಶಿ ಸಂಸ್ಕೃತಿಯ ಆಚರಣೆಗಳು ಕಣ್ಮರೆಯಾಗುತ್ತಿವೆ ಎಂದರು.

ಶ್ರಮ ಸಂಸ್ಕೃತಿಯ ಮೂಲಕ ಹುಟ್ಟಿಕೊಂಡ ವಿವಿಧ ಬಗೆಯ ಜಾನಪದ ಕಲಾ ಪ್ರಕಾರಗಳು ಅಳಿವಿನಂಚಿಗೆ ತಲುಪಿರುವುದು ನೋವಿನ ಸಂಗತಿ. ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಜಾನಪದ ಕಲಾ ಪ್ರಕಾರ ಉಳಿಸಿ ಬೆಳೆಸುವ ಕೆಲಸ ಆಗಬೇಕಿದೆ ಎಂದರು.

ಕುಂತೂರು ಕುಮಾರ್ ಮಾತನಾಡಿ, ಅಳಿವಿನ ಅಂಚಿನಲ್ಲಿರುವ ಜಾನಪದ ಕಲೆಗಳ ಪ್ರಕಾರಗಳ ಉಳಿವಿಗೆ ರಾಜ್ಯ ಸರ್ಕಾರ ವಿಶೇಷ ಕಾಳಜಿ ವಹಿಸಬೇಕಿದೆ ಎಂದರು.

ಬಾಣಸಮುದ್ರ ಪ್ರಸನ್ನ ಮತ್ತು ಚಕ್ಕರೆ ಲೋಕೇಶ್ ತಂಡದಿಂದ ಗೀತ ಗಾಯನ, ರುದ್ರೇಶ್ ಮತ್ತು ತಂಡದಿಂದ ತಮಟೆ ವಾದನ, ಗಂಗರಾಜು ತಂಡದಿಂದ ಪೂಜಾ ಕುಣಿತ, ಮಂಜುಬಾಥ್ ತಂಡದಿಂದ ವೀರಗಾಸೆ, ಮಲ್ಲೇಶ್ ತಂಡದಿಂದ ಚಿಲಿಪಿಲಿ ಗೊಂಬೆ, ಹರ್ಷ ತಂಡದಿಂದ ಪಟದ ಕುಣಿತ, ಪಾರ್ಥಸಾರಥಿ ತಂಡದಿಂದ ಡೊಳ್ಳು ಕುಣಿತ, ಕೀರ್ತಿ ತಂಡದಿಂದ ಮಹಿಳಾ ಪೂಜಾ ಕುಣಿತ ನಡೆಯಿತು.

ಇದೇ ವೇಳೆ ಜಾನಪದ ಕಲಾವಿದರಾದ ಕುಂತೂರು ಕುಮಾರ್, ಎಚ್.ಸಿ.ನಿಂಗರಾಜು, ನಾಗೇಶ್, ಸುಂದರೇಶ್, ಅಣ್ಣಯ್ಯ, ಸಾಹುಕಯ್ಯ ಅವರನ್ನು ಟ್ರಸ್ಟ್‌ನಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಚಲುವರಾಜು, ಎಸ್.ಕೆ.ಪಿ ಗ್ರೂಪ್ ಮಾಲೀಕ ಪ್ರಕಾಶ್, ಮುಖಂಡರಾದ ಶಿವಮೂರ್ತಿ, ಶಿವಲಿಂಗೇಗೌಡ, ಮುದ್ದುರಾಜು, ಸಿದ್ದರಾಜು, ಟ್ರಸ್ಟ್ ಅಧ್ಯಕ್ಷ ರಂಜಿತ್ ಕುಮಾರ್, ಮುಖ್ಯ ಶಿಕ್ಷಕಿ ರೇಣುಕಾ, ಶಿಕ್ಷಕರಾದ ಶಿವಪ್ರಕಾಶ್, ಶರವಣ ಸೇರಿದಂತೆ ಹಲವರು ಭಾಗವಹಿಸಿದ್ದರು.