ಸಾರಾಂಶ
ಶಿರಹಟ್ಟಿ: ಪಾಶ್ಚಿಮಾತ್ಯ ಸಂಸ್ಕೃತಿಯಿಂದ ನಮ್ಮ ಯುವ ಪೀಳಿಗೆಯನ್ನು ರಕ್ಷಿಸುವ ಜತೆಗೆ ಜನಪದ ಸಂಸ್ಕೃತಿಯ ಒಲವು ಮೂಡಿಸುವ ಕೆಲಸ ಮಾಡಬೇಕು. ನಶಿಸುತ್ತಿರುವ ಜಾನಪದ ಕಲೆ ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ನಿವೃತ್ತ ಪ್ರಾಂಶುಪಾಲ ಡಾ. ಎಸ್.ಆರ್. ಶಿರಹಟ್ಟಿ ಹೇಳಿದರು.
ಶ್ರೀಜಗದ್ಗುರು ಫಕೀರೇಶ್ವರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಹಟ್ಟಿಯಿಂದ ಏರ್ಪಡಿಸಿದ್ದ ಜಾನಪದ ಉತ್ಸವ ೨೦೨೫ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಇಂದಿನ ಪಾಶ್ಚಾತ್ಯ ಶೈಲಿಯ ಆಧುನಿಕ ಜೀವನದಲ್ಲಿ ದೇಸಿ/ ನೆಲದ ಸಂಸ್ಕೃತಿಯು ತನ್ನ ಹಿಂದಿನ ವೈಭವವನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಿದೆ ಎಂದೆನಿಸಿದರೂ ತನ್ನ ಮೂಲ ನೆಲೆಯಾದ ಹಳ್ಳಿಗಳಲ್ಲಿ ಇನ್ನೂ ಭದ್ರವಾಗಿ ಉಳಿಸಿಕೊಂಡಿರುವುದು ಸಮಾಧಾನ ತರುವ ಸಂಗತಿಯಾಗಿದೆ ಎಂದು ತಿಳಿಸಿದರು.
ನಮ್ಮ ಜನಪದರ ಸಾಹಿತ್ಯ, ಪರಿಸರ, ಭಾಷೆ, ಸಂಸ್ಕೃತಿ, ಕಲೆ, ವ್ಯವಸಾಯ, ಪಾರಂಪರಿಕ ಕರ-ಕುಶಲ ತಯಾರಿಕೆ, ಅಡುಗೆ-ಉಡುಗೆ-ತೊಡುಗೆ, ನೆಲದ (ದೇಸಿ) ನೃತ್ಯ-ಸಂಗೀತ-ಆಟ ಈ ಎಲ್ಲ ಸಂಗತಿ ಒಳಗೊಂಡಿರುವುದೇ ಜಾನಪದ. ಇಂದಿನ ಶಿಷ್ಟ ಜೀವನ ವಿಧಾನಕ್ಕೆ ಜಾನಪದವೇ ಮೂಲ ಬೇರು ಆಗಿದ್ದು, ಈ ಮೂಲ ಜಾನಪದ ಸಂಸ್ಕೃತಿಯ ಸೊಗಡಿನ ಅರಿವನ್ನು ಮೂಡಿಸಲು ಉತ್ಸವಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ತಿಳಿಸಿದರು.ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಜಾನಪದ ಪ್ರಸಿದ್ಧ ಕಲಾವಿದ ಸಾಂಬಯ್ಯ ಹಿರೇಮಠ ಮಾತನಾಡಿ, ಅಂದಿನ ನಮ್ಮ ಜನಪದರ ಸವಿ ಸಂಸ್ಕೃತಿಗೂ ಮತ್ತು ಇಂದಿನ ನಾಗರಿಕ ಯಂತ್ರ ಬದುಕಿನ ಸಂಸ್ಕೃತಿಗೂ ತುಂಬಾ ವ್ಯತ್ಯಾಸವಿದೆ. ಪ್ರಕೃತಿಯ ಮಕ್ಕಳಾಗಿ ಬೆಳೆದ ನಮ್ಮ ಪೂರ್ವಜರು ನಿಸರ್ಗ ಪೂರಕವಾಗಿ ಜೀವನ ಸಾಗಿಸಿದರು.
ಭೂ ತಾಯಿ ನಂಬಿ ದುಡಿದು ಊಟ ಮಾಡುತ್ತಿದ್ದರು. ಚೆನ್ನಾಗಿ ಆರೋಗ್ಯ ಕಾಪಾಡಿಕೊಂಡಿದ್ದರು. ನಮ್ಮ ಪೂರ್ವಜರ ಸಂಸ್ಕೃತಿ ಬಿಂಬಿಸಲು ಕಾಲೇಜಿನಲ್ಲಿ ಏರ್ಪಡಿಸಿದ ದೇಶೀಯ ಆಹಾರ, ವ್ಯವಸಾಯ ಸಂಬಂಧಿ ಸಲಕರಣೆಗಳ ವಸ್ತು ಪ್ರದರ್ಶನ ಜತೆಗೆ ಜನಪದ ಉಡುಗೆ-ತೊಡುಗೆಗಳ ಮೂಲಕ ಸಂಭ್ರಮಿಸುತ್ತಿರುವುದು ಶ್ಲಾಘನೀಯ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ಉಮೇಶ ಅರಹುಣಸಿ ಮಾತನಾಡಿ, ಮೂಲ ಜನಪದ ಕಲೆಗಳು ಭಾರತೀಯ ಸಂಸ್ಕೃತಿ ಬೆಳೆಸುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ನಮ್ಮ ಜನಪದ ಸಂಸ್ಕೃತಿ ಮೌಲ್ಯಯುತವಾದದು. ಅದನ್ನು ಉಳಿಸಿ ಬೆಳೆಸಬೇಕಾದ ಅವಶ್ಯಕತೆ ಇದೆ ಎಂದರು.
ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ದೇಶಿ ಸಂಸ್ಕೃತಿ ಧಿಕ್ಕರಿಸುತ್ತಿದ್ದಾರೆ. ಅವರಲ್ಲಿ ಜನಪದ ಸಂಸ್ಕೃತಿಯ ಮೂಲಕ ಮಾನವೀಯ ಮೌಲ್ಯ ಬೆಳೆಸಬೇಕಿದೆ. ಆಧುನಿಕತೆಯ ಭರಾಟೆಯಲ್ಲಿ ಜನಪದ ಸಂಸ್ಕೃತಿ ಅಳಿಯಲು ಅವಕಾಶ ನೀಡಬಾರದು. ಜನಪದ ಸಂಸ್ಕೃತಿ ಅಳಿದರೆ ನಮ್ಮತನ ನಾವು ಕಳೆದುಕೊಂಡಂತೆ ಎಂದರು.ಸಾಂಸ್ಕೃತಿಕ ವಿಭಾಗದ ಸಂಚಾಲಕ ಡಾ.ಶಂಕರ ಬಾರಿಕೇರ ಪ್ರಾಸ್ತಾವಿಕ ಮಾತನಾಡಿದರು. ಶೀಲಾ ಹಳ್ಳೆಮ್ಮನವರ ಮತ್ತು ಸಂಗಡಿಗರು ಪ್ರಾರ್ಥಿಸಿದರು, ಫಕೀರವ್ವ ಜಮಗಿ ಸ್ವಾಗತಿಸಿದರು, ವಿಜು ತಳವಾರ ವಂದಿಸಿದರು. ಸೌಮ್ಯ ಅಂದಾನಶೆಟ್ಟರ ಮತ್ತು ಜಾನಕಿ ಕದಂ ಕಾರ್ಯಕ್ರಮ ನಿರೂಪಿಸಿದರು. ಪವನ, ಫಕೀರೇಶ, ಪಾರ್ವತಿ, ರಕ್ಷಿತಾ ಜನಪದ ಗೀತೆ ಹಾಡಿದರು, ಪ್ರಿಯ ಮತ್ತು ಸಂಗಡಿಗರು ಜನಪದ ನೃತ್ಯ ಪ್ರದರ್ಶಿಸಿದರು.