ಜಾನಪದ ಸಂಸ್ಕೃತಿ ಉಳಿಸಿ ಬೆಳೆಸಿ

| Published : Jun 29 2024, 12:37 AM IST

ಸಾರಾಂಶ

ಎಲ್ಲರೂ ಜಾನಪದ ಸಂಸ್ಕೃತಿ ಕಲೆಗಳನ್ನು ಪ್ರೀತಿಸಿ, ಗೌರವಿಸಿ, ಉಳಿಸಿ ಬೆಳೆಸುವಂತಾಗಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಎಲ್ಲರೂ ಜಾನಪದ ಸಂಸ್ಕೃತಿ ಕಲೆಗಳನ್ನು ಪ್ರೀತಿಸಿ, ಗೌರವಿಸಿ, ಉಳಿಸಿ ಬೆಳೆಸುವಂತಾಗಬೇಕು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಬಿ.ಮಂಜಮ್ಮ ಜೋಗತಿ ಹೇಳಿದರು.

ಪಟ್ಟಣದ ಎಂ.ಜಿ.ವಿ.ಸಿ ಕಲಾ, ವಾಣಿಜ್ಯ ಮತ್ತು ವಿಜ್ಞಾನದ ಸಹಯೋಗದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾನಪದ ಪರಂಪರೆ ಮತ್ತು ಪ್ರಯೋಗ-ತಾತ್ವಿಕ ಚಿಂತನೆ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿ, ಮಕ್ಕಳು ಗುಣಮಟ್ಟ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಜೀವನದಲ್ಲಿ ನೀವು ಸಾಧನೆ ಮಾಡಲು ಸಾಧ್ಯ. ಜಾನಪದದಲ್ಲಿ ಸಮಾಜದ ಭಾಗವಾಗಿರುವ ಲಿಂಗತ್ವ ಅಲ್ಪಸಂಖ್ಯಾತರಿಗೂ ಗೌರವ ದೊರಕುವಂತಾಗಬೇಕು. ಅವರ ಬದುಕು ಕೂಡಾ ಯಶಸ್ಸಿನತ್ತ ಕೊಂಡ್ಯೂಯ್ಯುವ ಜವಾಬ್ದಾರಿ ಈ ಸಮಾಜದ ಮೇಲಿದೆ ಎಂದರು.ಲಿಂಗತ್ವ ಅಲ್ಪಸಂಖ್ಯಾತರಿಗೆ ಜನಿಸಿದ ಮಕ್ಕಳು ಸಹಿತ ಶಿಕ್ಷಣವಂತರಾಗಬೇಕು. ಎಲ್ಲರಂತೆ ಸಾಮಾಜಿಕವಾಗಿ ಮುನ್ನೆಲೆಗೆ ಬರುವಂತೆ ಉಳ್ಳುವರು ಶಕ್ತಿ ತುಂಬಬೇಕಿದೆ. ಸಂವಿಧಾನ ಬದ್ಧ ಪ್ರಜಾಪ್ರಭುತ್ವದ ಹಕ್ಕು ದೊರಕಿಸುವಂತೆ ಪ್ರೇರಪಿಸಬೇಕು. ಎಲ್ಲೋ ಕೆಲವರು ಶ್ರೀಮಂತರು ಆಸರೆ ನಿಂತಿದ್ದಾರೆ. ಆದರೆ, ಕೆಲವರು ಇಚ್ಚಾಸಕ್ತಿ ಕೊರತೆ ಎದ್ದು ಕಾಣುತ್ತಿದೆ ಎಂದು ಹೇಳಿದರು.

ಎಂಜಿವಿಸಿ ಕಾಲೇಜಿನ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ತಡಸದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಡುಬಡತನದಲ್ಲಿ ಬೆಳೆದು ಬಂದಿರುವ ಮಂಜಮ್ಮ ಜೋಗತಿ ಅವರ ಕಾರ್ಯ ಸಾಧನೆ ಸಾಮಾಜಿಕ ಕಳಕಳಿ, ಜಾನಪದ ಕಲೆ, ನಮ್ಮೆಲ್ಲ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ. ಅವರ ಆದರ್ಶಗಳನ್ನು ವಿದ್ಯಾರ್ಥಿಗಳು ಅಳವಡಿಸಿಕೊಳ್ಳಬೇಕು ಎಂದರು.

ಆಡಳಿತಾಧಿಕಾರಿ ಎ.ಬಿ.ಕುಲಕರ್ಣಿ, ಪ್ರಾಚಾರ್ಯ ಎಸ್.ಎನ್.ಪೊಲೇಶಿ, ಎಂ.ಆಯ್.ಬಿರಾದಾರ, ಎ.ಎ.ಮುಲ್ಲಾ ಇದ್ದರು. ಜಮಖಂಡಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಯೋಜಕ ವೈ.ವೈ.ಕೊಕ್ಕನವರ ಕನ್ನಡ ಜಾನಪದ ಸಾಹಿತ್ಯದ ವೈವಿಧ್ಯತೆ ರೂಪ-ತಂತ್ರ ಮತ್ತು ವಿನ್ಯಾಸ ಕುರಿತು ಉಪನ್ಯಾಸ ನೀಡಿದರು. ಕನ್ನಡ ಜಾನಪದ ಪರಿಷತ್ ತಾಲೂಕಾಧ್ಯಕ್ಷ ಎ.ಆರ್. ಮುಲ್ಲಾ, ಸಾಹಿತಿ ಉಪನ್ಯಾಸಕ ಪ್ರಕಾಶ ನರಗುಂದ, ವಾಲು ಲಮಾಣಿ ಉಪಸ್ಥಿತರಿದ್ದರು.