ಸಾರಾಂಶ
ಶಿರಸಿ: ಪ್ರಾಚೀನ ಕಾಲದಿಂದಲೂ ಪ್ರಸಿದ್ಧಿ ಪಡೆದ ಕಾವಿಕಲೆಯು ಇತ್ತೀಚೆಗೆ ನಾಶವಾಗುತ್ತಿದೆ. ಇಂದಿನ ಪೀಳಿಗೆ ಇದನ್ನು ಉಳಿಸಿ ಬೆಳೆಸಬೇಕಾಗಿರುವುದು ಅತಿ ಅವಶ್ಯಕವಾಗಿದೆ. ಕಾವಿಕಲೆ ಎಂಬುದು ಅದ್ಭುತ ಕಲೆಯಾಗಿದ್ದು, ಚಿನ್ಹೆಯ ಮೂಲಕ ಎಲ್ಲರ ಭಾವನೆಯನ್ನು ವ್ಯಕ್ತಪಡಿಸುವ ಸುಂದರ ಸಂವಹನ ಪದ್ಧತಿಯಾಗಿದೆ ಎಂದು ಎಂಎಂ ಕಾಲೇಜಿನ ಪ್ರಾಚಾರ್ಯ ಪ್ರೊ. ಜಿ.ಟಿ. ಭಟ್ಟ ತಿಳಿಸಿದರು.ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು, ಎಂಇಎಸ್ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಆಯೋಜಿಸಿದ್ದ ನಾಲ್ಕು ದಿನಗಳ ರಾಜ್ಯ ಮಟ್ಟದ ಕಾವಿಕಲೆ ತರಬೇತಿ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.ಕೈಗಾ ಅಣು ವಿದ್ಯುತ್ ಸ್ಥಾವರದ ಮಾಜಿ ಸಂಪರ್ಕಾಧಿಕಾರಿ ಸುಭಾಷ್ ಕಾನಡೆ ಮಾತನಾಡಿ, ಸೂರತ್‌ನಿಂದ ಕನ್ಯಾಕುಮಾರಿಯ ಕೊಂಕಣಪಟ್ಟಿಯ ಮಧ್ಯದಲ್ಲಿ ಬರುವ ಜೇಡಿಮಣ್ಣು ಮತ್ತು ಕೆಂಪುಮಣ್ಣು ಮಿಶ್ರಿತದಿಂದ ತಯಾರಿಸಿದ ಬಣ್ಣದಿಂದ ಕೆಂಪು ಬಣ್ಣದ ಕಲೆಯೇ ಕಾವಿಕಲೆ. ಒಬ್ಬ ವ್ಯಕ್ತಿಚಿತ್ರ ಬರೆಯುವಾಗ ತನ್ನ ನೆರಳನ್ನೇ ಕಂಡು ಅದಕ್ಕೆ ಕೈ, ಕಾಲು, ತಲೆ ಆಕಾರ ಕೊಟ್ಟು ಬಿಳಿ ಗೋಡೆಯ ಮೇಲೆ ಕೆಂಪು ಬಣ್ಣದಿಂದ ಮೆರಗುಗೊಳಿಸುವುದೇ ಕಾವಿಕಲೆ ಎಂದರು.ಹಿರಿಯ ಕಲಾವಿದ ನೀರ್ನಹಳ್ಳಿ ಗಣಪತಿ ಮಾತನಾಡಿ, ಮಹಾವಿದ್ಯಾಲಯದ ಆವರಣ ಕಾವಿ ಕಲೆಯ ಅನಾವರಣ ಏಕವರ್ಣದಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಈ ಕಲೆಯು ಹೆಚ್ಚು ಕಾಲ ಉಳಿಯಬೇಕಾಗಿದೆ ಎಂದರು.ಚಿತ್ರ ಕಲಾವಿಧ ಕಿಶೋರ್ ಮಾತನಾಡಿ, ಶಿರಸಿಯಲ್ಲಿ ಆರ್ಟ್ ಗ್ಯಾಲರಿ ಎಲ್ಲಿದೆ ಎಂದರೆ ಶಿರಸಿ ಮಾರಿಕಾಂಬಾ ದೇವಸ್ಥಾನದಲ್ಲಿದೆ. ೧೯೯೧ರಲ್ಲಿ ಆರ್ಟ್ ಎಕ್ಸಿಬಿಷನ್‌ನಲ್ಲಿ ಭಾಗವಹಿಸಬೇಕಂಬ ಕುತೂಹಲ ಮತ್ತು ಆಸೆಯನ್ನು ಹೊಂದಿದವನು ಕಾವಿ ಕಲೆಯನ್ನು ನೋಡುತ್ತಲೇ ಕಲೆಯ ಕಲಾಕಾರನಾದದ್ದು. ಕಲಾವಿದ ಎಂದರೆ ಅದೊಂದು ಸಾಧಾರಣ ಅಲ್ಲ, ಅದೊಂದು ದೇವಿಶಕ್ತಿಯ ಪ್ರತಿರೂಪವಾಗಿದೆ. ಅಳಿವಿಂಚಿನಲ್ಲಿರುವ ಈ ಕಲೆಯು ಈ ಕಾಲೇಜಿನಲ್ಲಿ ಪುನರ್ಜನ್ಮ ಪಡೆದಿದೆ. ಹಲವಾರು ಕಲಾವಿದರ ಕಲೆಯು ಕಾವಿಕಲೆಗೆ ಮತ್ತಷ್ಟು ಮೆರುಗು ತಂದಿದೆ. ಕಾವಿ ಕಲೆಯು ನಿಂತ ನೀರಲ್ಲ ಹರಿಯುತ್ತ ಸಾಗುವ ಪ್ರತಿಭೆ ಎಂದರು.ಹಿರಿಯ ಕಲಾವಿದ ಜಿ.ಎಂ. ಹೆಗಡೆ ತಾರಗೋಡ್ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ಶ್ರದ್ಧೆ ಇದ್ದರೆ ಏನನ್ನಾದರೂ ಸಾಧಿಸಬಹುದು. ಅನೇಕ ಹಿರಿಯ ಕಲಾವಿದರು ಹಿಂದೆ ಮಾಡಿದ ಅನೇಕ ಕಲೆಗಳು ಯಾವುದೊ ಒಂದು ಮೂಲೆಯಲ್ಲಿ ನಶಿಸಿ ಹೋಗಿವೆ ಅವರ ಕಲೆಗಳನ್ನು ಪುನಃ ಅನಾವರಣಗೊಳಿಸುವ ವಾತಾವರಣ ಉಂಟಾಗಬೇಕು ಎಂದರು. ಕಾಲೇಜು ಉಪ ಸಮಿತಿ ಅಧ್ಯಕ್ಷ ಎಸ್.ಕೆ. ಭಾಗವತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಾಲೇಜಿನ ವಾತಾವರಣ ಅತ್ಯಂತ ಸೌಂದರ್ಯಭರಿತವಾಗಿದ್ದು, ಪ್ರಾಚಾರ್ಯರು ಎಲ್ಲ ಕಲಾವಿದರಿಗೆ ಗೌರವ ಸಲ್ಲಿಸಿರುವುದು ನಮ್ಮ ಸಂಸ್ಥೆಗೆ ಹೆಮ್ಮೆ ತಂದಿದೆ. ಮುಂದೆಯೂ ಇಂತಹ ಅಕಾಡೆಮಿಗಳು ನಮ್ಮ ಕಾಲೇಜಿಲ್ಲಿ ಕಾರ್ಯಾಗಾರ ನಡೆಸಲು ಅವಕಾಶವನ್ನು ಒದಗಿಸುತ್ತದೆ ಎಂದರು.ಲಲಿತಕಲಾ ಅಕಾಡಮಿ ಸದಸ್ಯೆ ಆಶಾರಾಣಿ, ಲಲಿತಕಲಾ ಅಕಾಡಮಿ ಸದಸ್ಯೆ ಶಾಂತಾ ಪ್ರವೀಣ್ ಕೊಲ್ಲೆ, ಬಾಬುರಾವ್ ನಡುಗುಣಿ, ಉಪಸ್ಥಿತರಿದ್ದರು. ಮನೋಜ್ ನಿರೂಪಿಸಿದರು.