ವೈದ್ಯ ಪರಂಪರೆ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ

| Published : May 27 2024, 01:25 AM IST

ವೈದ್ಯ ಪರಂಪರೆ ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸಿ
Share this Article
  • FB
  • TW
  • Linkdin
  • Email

ಸಾರಾಂಶ

ಋಷಿಮುನಿಗಳ ಕಾಲದಿಂದಲೂ ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಪಾರಂಪರಿಕ ವೈದ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ ನಾಗಮಂಗಲ

ಋಷಿಮುನಿಗಳ ಕಾಲದಿಂದಲೂ ನಮ್ಮ ಪೂರ್ವಿಕರಿಂದ ಬಳುವಳಿಯಾಗಿ ಬಂದಿರುವ ಪಾರಂಪರಿಕ ವೈದ್ಯ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು.ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ಹಾಗೂ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ವತಿಯಿಂದ ಶ್ರೀ ಕ್ಷೇತ್ರದ ತಪೋವನದಲ್ಲಿ 10 ದಿನಗಳ ಕಾಲ ನಡೆಯುವ ಗುರು ಶಿಷ್ಯ ಪರಂಪರೆ ತರಬೇತಿ ಶಿಬಿರವನ್ನು ಉದ್ಘಾಟಿಸಿ ಶ್ರೀಗಳು ಮಾತನಾಡಿದರು.

ಪ್ರತಿಯೊಂದು ಗಿಡದಲ್ಲೂ ಔಷಧಿ ಇದೆ: ಪಾರಂಪರಿಕ ವೈದ್ಯ ಪದ್ಧತಿ ವೈದ್ಯಕೀಯ ಜಗತ್ತಿಗೆ ಮೂಲ ಬೇರಿದ್ದಂತೆ. ಮೂಲ ಬೇರಿಲ್ಲವೆಂದರೆ ಆಧುನಿಕ ಶೈಲಿಗೆ ಬಂದವರೆಲ್ಲರೂ ನಶಿಸಿಹೋಗುತ್ತಾರೆ. ಭೂಮಿ ಮೇಲಿರುವ ಪ್ರತಿಯೊಂದು ಗಿಡವೂ ಸಹ ಒಂದಲ್ಲ ಒಂದು ರೀತಿಯ ಔಷಧಿಗೆ ಬಳಕೆಯಾಗುತ್ತದೆ. ನಮ್ಮ ಗಿಡಮೂಲಿಕೆಗಳ ಪ್ರಬೇಧಗಳು ಅಳಿಯಬಾರದು, ಮುಂದಿನ ಪೀಳಿಗೆಗೆ ಅದು ಅನುಕೂಲವಾಗಬೇಕಿದೆ ಎಂದರು.ಹಿರಿಯ ಹಾಗೂ ನುರಿತ ಅನುಭವಿ ಪಾರಂಪರಿಕ ವೈದ್ಯರು ತಮ್ಮಲ್ಲಿರುವ ಅನುಭವಗಳನ್ನು ಈ ಶಿಬಿರದಲ್ಲಿ ಪ್ರಾಯೋಗಿಕವಾಗಿ ತಿಳಿಸಿಕೊಡಲಿದ್ದಾರೆ. ಶಿಬಿರಕ್ಕೆ ಬಂದಿರುವ ವೈದ್ಯರು ಇದರ ಪ್ರಯೋಜನವನ್ನು ಪಡದುಕೊಂಡು ಮತ್ತಷ್ಟು ಜ್ಞಾನವನ್ನು ಹಚ್ಚಿಸಿಕೊಳ್ಳಬೇಕು. ಶ್ರೀಮಠದ ವತಿಯಿಂದ ಧನ್ವಂತರಿ ವನವನ್ನು ನಿರ್ಮಿಸಿ ಕಣ್ಮರೆಯಾಗುತ್ತಿರುವ ಅಪರೂಪದ ಔಷಧಿ ಸಸ್ಯಗಳನ್ನು ಈ ವನದಲ್ಲಿ ನಿರ್ಮಿಸಲಾಗುವುದು ಎಂದು ತಿಳಿಸಿದರು.ನಿವೃತ ಐಎಫ್‌ಎಸ್ ಅಧಿಕಾರಿ ಗಾ.ನಂ. ಶ್ರೀಕಂಠಯ್ಯ ಮಾತನಾಡಿ, ಪಾರಂಪರಿಕ ವೈದ್ಯ ಪರಿಷತ್ ಜನ್ಮತಾಳಿ 24ವರ್ಷಗಳ ನಂತರ ಶ್ರೀಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳು ಶಾಶ್ವತ ಗುರು ಶಿಷ್ಯ ಪರಂಪರೆ ತರಬೇತಿ ಕೇಂದ್ರವನ್ನು ಪ್ರಾರಂಭಿಸಲು ಅವಕಾಶ ಮಾಡಿಕೊಟ್ಟಿರುವುದು ಬಹಳ ಸಂತೋಷಕರ ಸಂಗತಿ ಎಂದರು.ರಾಜ್ಯದಲ್ಲಿ ಇದು ಪ್ರಥಮ ತರಬೇತಿ ಕೇಂದ್ರವಾಗಿದ್ದು, ಈ ತರಬೇತಿ ಕೇಂದ್ರ ದೇಶದಲ್ಲಿಯೇ ಪ್ರಖ್ಯಾತಿ ಹೊಂದುವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡಲಿ ಎಂದು ಆಶಿಸುತ್ತೇನೆ. ಪಾರಂಪರಿಕ ವೈದ್ಯಕೀಯದಲ್ಲಿ ಹೆಚ್ಚಿನ ಜ್ಞಾನ ಪಡೆಯುವವರಿಗೆ ಇದು ಸಹಕಾರಿ ಆಗಲಿದೆ ಎಂದು ಹೇಳಿದರು.ಪರಿಷತ್ತಿನ ಮತ್ತೋರ್ವ ಸಂಸ್ಥಾಪಕ ಪ್ರೊ. ಹರಿರಾಮಮೂರ್ತಿ ಮಾತನಾಡಿ. ಪಾರಂಪರಿಕ ವೈದ್ಯ ಪರಂಪರೆ ಉಳಿವಿಗೆ ಪೂರಕವಾಗಿ ಶ್ರೀಮಠದ ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳು ಬಹಳ ಉತ್ತೇಜನ ನೀಡುತ್ತಿದ್ದರು. ಇದಕ್ಕೆ ಶಾಶ್ವತ ಪರಿಹಾರವನ್ನು ಕಲ್ಪಿಸುತ್ತಿರುವ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥಶ್ರೀಗಳಿಗೆ ಪರಿಷತ್ ಸದಾ ಋಣಿಯಾಗಿರುತ್ತದೆ ಎಂದರು.10 ದಿನಗಳ ಕಾಲ ನಡೆಯುವ ತರಬೇತಿ ಶಿಬಿರಕ್ಕೆ ಯಾವುದೇ ಕೊರತೆಯಾಗದಂತೆ ಎಲ್ಲಾ ರೀತಿಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಶ್ರೀಮಠದ ತಪೋವನದಲ್ಲಿ ಬಹಳ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿತ್ತು. ಮೊದಲ ದಿನದ ತರಬೇತಿಯಲ್ಲಿ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ ಪಾರಂಪರಿಕ ವೈದ್ಯರಿಗೆ ಇರಬೇಕಾದ ಸಾಮಾನ್ಯ ಜ್ಞಾನ ಮತ್ತು ಚಿಕಿತ್ಸಾ ವಿಧಾನಗಳ ಕುರಿತು ಮಾಹಿತಿ ನೀಡಿ ಕಫ ಮತ್ತು ಕೆಮ್ಮಿಗೆ ಕುಪ್ಪೆ ಮಾತ್ರೆ, ಅಮೃತಬಳ್ಳಿಯಿಂದ ಸತ್ವ ತೆಗೆಯುವ ವಿಧಾನವನ್ನು ಪಾಲ್ಗೊಂಡಿದ್ದ ಶಿಬಿರಾರ್ಥಿಗಳಿಂದಲೇ ಪ್ರಾಯೋಗಿಕವಾಗಿ ಮಾಡಿಸಿದರು.ಸಮಾರಂಭದಲ್ಲಿ ಪರಿಷತ್ತಿನ ರಾಜ್ಯಾಧ್ಯಕ್ಷ ಜಿ.ಮಹಾದೇವಯ್ಯ ವಹಿಸಿದ್ದರು. ನಿಕಟಪೂರ್ವ ಅಧ್ಯಕ್ಷ ನೇರ್ಲಿಗೆ ಗುರುಸಿದ್ದಪ್ಪ, ಪ್ರಧಾನ ಕಾರ್ಯದರ್ಶಿ ಅನುಗನಾಳು ಕೃಷ್ಣಮೂರ್ತಿ, ಖಜಾಂಚಿ ಶಿವಾನಂದ ಜಂಗಿನ ಮಠ, ರಾಜ್ಯ ಕಾರ್ಯ ಸಮಿತಿ ಸದಸ್ಯ ವೈದ್ಯ ಡಿ.ಜೆ. ಶಂಕರಪ್ಪ ಸೇರಿದಂತೆ ಪಾರಂಪರಿಕ ವೈದ್ಯರು ಹಾಗೂ ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು.