ಸುಸ್ಥಿರ ಕೃಷಿ ಭೂಮಿಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಾಗಿರುವುದರಿಂದ ಭೂಮಿಗೆ ರಾಸಾಯನಿಕ, ಕಳೆನಾಶಕ, ಕೀಟನಾಶಕ ಕ್ರಿಮಿನಾಶಕಗಳನ್ನು ಯಥೇಚ್ಛವಾಗಿ ಬಳಕೆಯನ್ನು ನಿಲ್ಲಿಸಬೇಕೆಂದು ರೈತರಿಗೆ ಮನವಿ ಮಾಡಿದರು. ಸಹಜ ಕೃಷಿ, ಸಾವಯವ ಕೃಷಿಯತ್ತ ರೈತರು ಮುಖ ಮಾಡುವ ಪರಿಸ್ಥಿತಿ ಅನಿವಾರ್ಯವಾಗುತ್ತಿದೆ. ಇಂದಿನ ಆಧುನಿಕ ಬೇಸಾಯ ಪದ್ಧತಿಯಲ್ಲಿ ಇಳುವರಿ ಹೆಚ್ಚಾಗುವುದರ ಜೊತೆಗೆ ರೈತರಿಗೆ ಹೆಚ್ಚು ಖರ್ಚು ಕೂಡ ಬರುತ್ತದೆ.
ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪೂರ್ವಜರ ಕಾಲದಿಂದಲೂ ಕಾಪಾಡಿಕೊಂಡು ಬಂದಿರುವ ಕೃಷಿ ಭೂಮಿಯ ಫಲವತ್ತತೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಕೊಂಡೊಯ್ಯಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಮೋಹನ್ ಕುಮಾರ್ ತಿಳಿಸಿದರು.ಪಟ್ಟಣದ ಪತ್ರಕರ್ತರ ಭವನದಲ್ಲಿ ಪತ್ರಕರ್ತರೊಂದಿಗೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡುತ್ತಾ, ಸುಸ್ಥಿರ ಕೃಷಿ ಭೂಮಿಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯಬೇಕಾಗಿರುವುದರಿಂದ ಭೂಮಿಗೆ ರಾಸಾಯನಿಕ, ಕಳೆನಾಶಕ, ಕೀಟನಾಶಕ ಕ್ರಿಮಿನಾಶಕಗಳನ್ನು ಯಥೇಚ್ಛವಾಗಿ ಬಳಕೆಯನ್ನು ನಿಲ್ಲಿಸಬೇಕೆಂದು ರೈತರಿಗೆ ಮನವಿ ಮಾಡಿದರು. ಸಹಜ ಕೃಷಿ, ಸಾವಯವ ಕೃಷಿಯತ್ತ ರೈತರು ಮುಖ ಮಾಡುವ ಪರಿಸ್ಥಿತಿ ಅನಿವಾರ್ಯವಾಗುತ್ತಿದೆ. ಇಂದಿನ ಆಧುನಿಕ ಬೇಸಾಯ ಪದ್ಧತಿಯಲ್ಲಿ ಇಳುವರಿ ಹೆಚ್ಚಾಗುವುದರ ಜೊತೆಗೆ ರೈತರಿಗೆ ಹೆಚ್ಚು ಖರ್ಚು ಕೂಡ ಬರುತ್ತದೆ. ರೈತರು ತಮ್ಮ ಭೂಮಿಯಲ್ಲಿ ಹಸಿರೆಲೆ ಗೊಬ್ಬರ ಕೊಟ್ಟಿಗೆ ಗೊಬ್ಬರ ಬಳಸುವುದರ ಜೊತೆಗೆ ಅಗತ್ಯಕ್ಕೆ ತಕ್ಕಂತೆ ಉಳುಮೆಯನ್ನು ಮಾಡಬೇಕು. ಅತಿ ಹೆಚ್ಚು ಪ್ಲಾಸ್ಟಿಕ್ ಬಳಸುತ್ತಿರುವುದರಿಂದ ಜೈವಿಕ ವೈವಿಧ್ಯತೆ ಏರುಪೇರಾಗುತ್ತಿದೆ. ಈ ವರ್ಷ ಸರಾಸರಿ ೨.೫ ಡಿಗ್ರಿ ಉಷ್ಣಾಂಶ ಹೆಚ್ಚಾಗಿದ್ದು ಮುಂದಿನ ದಿನಗಳಲ್ಲಿ ಕೂಡ ಇನ್ನೂ ಹೆಚ್ಚಿನ ಉಷ್ಣಾಂಶ ಆಗುವ ಸಾಧ್ಯತೆ ಇರುವುದರಿಂದ ಪುರಾತನ ಕಾಲದ ಜೀವನಕ್ಕೆ ನಾವು ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮಾರಕ ಕಾಯಿಲೆಗಳಾದ ಕ್ಯಾನ್ಸರ್, ಅತಿ ಹೆಚ್ಚಿನ ಹೃದಯದ ಒತ್ತಡ, ಸಕ್ಕರೆ ಕಾಯಿಲೆ ಹಾಗೂ ರಕ್ತದ ಒತ್ತಡದ ಕಾಯಿಲೆ ಹೆಚ್ಚಾಗುತ್ತಿರುವುದರಿಂದ ವಾತಾವರಣ ಹಾಗೂ ಭೂಮಿ ಕಲುಷಿತವಾಗುವುದನ್ನು ತಡೆಗಟ್ಟಲು ಕರೆ ನೀಡಿದರು. ತಾಲೂಕಿನಲ್ಲಿ ಈ ಬಾರಿ ಮುಂಗಾರು ಮಳೆ ಕೊರತೆಯಿಂದ ರೈತರು ಸಮರ್ಪಕವಾಗಿ ಬಿತ್ತನೆ ಮಾಡಲಾಗಿಲ್ಲ. ತಾಲೂಕಿನಲ್ಲಿ ೩೮೨ ಗ್ರಾಮಗಳಿದ್ದು ಒಟ್ಟು ೭೪,೩೭೬ ಹೆಕ್ಟೇರ್ ಪ್ರದೇಶದಲ್ಲಿ ಕೃಷಿ ಮಾಡಬಹುದಾಗಿದೆ. ಮುಂಗಾರಿನಲ್ಲಿ ಕೇವಲ ೪೫,೦೦೦ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ, ಬರಗಾಲ ಪೀಡಿತ ಎಂದು ನಮ್ಮ ತಾಲೂಕನ್ನು ಘೋಷಣೆ ಮಾಡಿರುವುದರಿಂದ ರಾಗಿ, ಉದ್ದು , ಹೆಸರು ಕಾಳು, ಹಲ್ಸಂದೆ, ಜೋಳ ಹಾಗೂ ಎಳ್ಳು ಇನ್ನಿತರ ಬೆಳಗಳಿಗೆ ವಿಮೆ ಪಾವತಿ ಮಾಡಿರುವ ರೈತರಿಗೆ ಫಸಲ್ ಭೀಮಾ ಯೋಜನೆಯಡಿ ಪರಿಹಾರ ದೊರಕಲಿದೆ. ಒಟ್ಟು ೪೧,೨೩೯ ರೈತರು ಪಸಲ್ ಭೀಮಾ ಯೋಜನೆಯಡಿ ವಿಮೆ ಪಾವತಿ ಮಾಡಿದ್ದು ಹಲಸಂದೆ ಹೊರತುಪಡಿಸಿ ೩೦೫೯೨ ರೈತರಿಗೆ ವಿಮೆ ಪಾವತಿಯ ಪರಿಹಾರ ನೀಡುವಂತೆ ವಿವರ ಸರ್ಕಾರಕ್ಕೆ ಕಳುಹಿಸಿಕೊಟ್ಟಿದ್ದೇವೆ. ಹಿಂಗಾರು ಬೆಳಗೂ ಕೂಡ ಬೆಳೆ ವಿಮೆ ಪಾವತಿ ಮಾಡಬಹುದಾಗಿದ್ದು ಈ ವರ್ಷ ಯುದ್ಧ ಇನ್ನಿತರೆ ಸಮಸ್ಯೆ ಇದ್ದುದ್ದರಿಂದ ಸಮರ್ಪಕವಾಗಿ ರಸಗೊಬ್ಬರದ ದಾಸ್ತಾನನ್ನ ಮಾಡಲಾಗಿದ್ದು ಯೂರಿಯಾ, ಡಿಎಪಿ, ಎಂ ಓ ಪಿ, ೧೯-೧೯ ಸೇರಿದಂತೆ ೧೮೧೫ ಟನ್ ಗೊಬ್ಬರ ಇನ್ನೂ ಶೇಖರಣೆ ಇದೆ. ಮಳೆ ಕೊರತೆಯಿಂದ ಈ ಸಲ ರಾಸಾಯನಿಕ ಗೊಬ್ಬರ ಬಳಕೆಯಾಗಿಲ್ಲ. ತಾಲೂಕಿನ ಎಲ್ಲಾ ಹೋಬಳಿಗಳ ಆರು ಕ್ಲಸ್ಟರ್ಗಳಲ್ಲಿ ಒಂದೊಂದು ಗ್ರಾಮವನ್ನು ಸಾವಯವ ಕೃಷಿ ಮಾಡಲು ಉತ್ತೇಜನ ನೀಡುತ್ತಿದ್ದು ರೈತರಿಗೆ ಬೀಜಾಮೃತ ಪಂಚಗವ್ಯ ಹಸಿರೆಲೆ ಗೊಬ್ಬರ ತಯಾರಿಕೆಗೆ ಒಂದು ಗ್ರಾಮದಲ್ಲಿ ೧೨೫ ಜನ ರೈತರಿಗೆ ೪೦೦೦ ಸಹಾಯಧನ ನೀಡಲಾಗಿದೆ. ಜಿಪ್ಸಂ ಡಯಾಂಚ ವಿತರಿಸಲಾಗಿದ್ದು ಓಟ್ಟು ೮೭೫ ರೈತರು ಈ ಸೌಲಭ್ಯ ಪಡೆದುಕೊಂಡಿದ್ದಾರೆ. ಶೇಕಡ ೫೦ರ ಸಹಾಯಧನದಲ್ಲಿ ೫೦ ಮೀಟರ್ನಷ್ಟು ಉದ್ದದ ರೋಲರ್ ರೈತರಿಗೆ ವಿತರಿಸಲಾಗುತ್ತಿದೆ. ವಿಬಿಜಿ ರಾಮ್ ಯೋಜನೆ ಅಡಿ ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡ ನಿರ್ಮಿಸಬಹುದಾಗಿದೆ ಆದರೆ ಪ್ರತಿವರ್ಷ ನೀಡುತ್ತಿದ್ದ ಬದು ನಿರ್ಮಾಣವನ್ನು ನಿಲ್ಲಿಸಿದ್ದಾರೆ ಎಂದರು.ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಅಧಿಕಾರಿ ದಿನೇಶ್ ಹಾಗೂ ತಾಂತ್ರಿಕ ಅಧಿಕಾರಿ ಪ್ರಸಾದ್ ಪತ್ರಕರ್ತರ ಸಂಘದ ಅಧ್ಯಕ್ಷ ದಯಾನಂದ್ ಶೆಟ್ಟಿಹಳ್ಳಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಉಳ್ಳಾವಳ್ಳಿ ಸ್ವಾಗತಿಸಿದರು.