ಯಕ್ಷಗಾನದ ಮೂಲತನ ಉಳಿಸಿ, ಹೊಸತನ ಬೆಳೆಸಿ: ಶ್ರೀ ವಿದ್ಯಾಸಾಗರ ತೀರ್ಥರು

| Published : Apr 22 2024, 02:15 AM IST

ಯಕ್ಷಗಾನದ ಮೂಲತನ ಉಳಿಸಿ, ಹೊಸತನ ಬೆಳೆಸಿ: ಶ್ರೀ ವಿದ್ಯಾಸಾಗರ ತೀರ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿ ನಿರ್ಮಿಸಲಾದ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ‘ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್ ಆ್ಯಂಡ್ ಟ್ರೈನಿಂಗ್ ರಿಸರ್ಚ್ ಸೆಂಟರ್ (ಐವೈಸಿ)’ನ ಲೋಕಾರ್ಪಣೆ ಪೂರ್ವದಲ್ಲಿ ದ್ವಾರಪೂಜೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಹೊಸತನದೊಂದಿಗೆ ಯಕ್ಷಗಾನ ಇನ್ನಷ್ಟು ಬೆಳವಣಿಗೆ ಹೊಂದಲು ಇನ್ಫೋಸಿಸ್ ಯಕ್ಷಗಾನ ಅಭಿವೃದ್ಧಿ ತರಬೇತಿ ಕೇಂದ್ರ ಪೂರಕವಾಗಿ ನಡೆಯಲಿ ಎಂದು ಶ್ರೀ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥರು ಹಾರೈಸಿದರು.

ಅವರು ಭಾನುವಾರ ಇಲ್ಲಿನ ಶಾರದಾ ಕಲ್ಯಾಣ ಮಂಟಪ ರಸ್ತೆಯಲ್ಲಿ ನಿರ್ಮಿಸಲಾದ ಯಕ್ಷಗಾನ ಕಲಾರಂಗದ ನೂತನ ಕಟ್ಟಡ ‘ಇನ್ಫೋಸಿಸ್ ಫೌಂಡೇಶನ್ ಯಕ್ಷಗಾನ ಡೆವಲಪ್‌ಮೆಂಟ್ ಆ್ಯಂಡ್ ಟ್ರೈನಿಂಗ್ ರಿಸರ್ಚ್ ಸೆಂಟರ್ (ಐವೈಸಿ)’ನ ಲೋಕಾರ್ಪಣೆ ಪೂರ್ವದಲ್ಲಿ ದ್ವಾರಪೂಜೆಯಲ್ಲಿ ಭಾಗವಹಿಸಿ ಕಲಾರಂಗದ ಶ್ರೀಕೃಷ್ಣನ ಮೂರ್ತಿಗೆ ಆರತಿ ಬೆಳಗಿ ಆಶೀರ್ವಚನ ನೀಡಿದರು.

ಕಾಣಿಯೂರು ಮಠಾಧೀಶ ಶ್ರೀ ವಿದ್ಯಾವಲ್ಲಭತೀರ್ಥರು ಆಶೀರ್ವಚನ ನೀಡುತ್ತಾ, ನಿರಂತರವಾಗಿ ಯಕ್ಷ ಶಿಕ್ಷಣ, ವಿದ್ಯಾಪೋಷಕ್, ಸೂರಿಲ್ಲದವರಿಗೆ ಮನೆ ನಿರ್ಮಾಣ ಸಹಿತ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬಂದ ಸಂಸ್ಥೆಯ ಮುಂದಿನ ಎಲ್ಲ ಚಟುವಟಿಕೆಗಳಿಗೆ ಕಟ್ಟಡ ಉಪಯೋಗವಾಗಲಿ, ಕಲೆಗೆ ನೆಲೆಯಾಗಲಿ ಎಂದು ಹರಸಿದರು.

ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥರು, ಕಲೆಯ ಸಂರಕ್ಷಣೆಗೆ ನೂತನ ಕಟ್ಟಡ ಉತ್ತಮ ವೇದಿಕೆಯಾಗಿ ಮೂಡಿಬರಲಿ ಎಂದು ಅನುಗ್ರಹ ಸಂದೇಶ ನೀಡಿದರು.

ಕಲಾರಂಗದ ನಿಕಟ ಪೂರ್ವಾಧ್ಯಕ್ಷ ಕೆ. ಗಣೇಶ ರಾವ್, ಉಪಾಧ್ಯಕ್ಷರಾದ ಪಿ. ಕಿಶನ್ ಹೆಗ್ಡೆ, ವಿ.ಜಿ. ಶೆಟ್ಟಿ ಶ್ರೀಪಾದತ್ರಯರನ್ನು ಗೌರವಿಸಿದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ನಿರೂಪಿಸಿ, ವಂದಿಸಿದರು.