ಆಂಗ್ಲ ಭಾಷಾ ವ್ಯಾಮೋಹ ಮಾತೃಭಾಷೆಯನ್ನೇ ಉಳಿಸುವ ಸವಾಲಾಗಿ ಕನ್ನಡಿಗರ ಮುಂದಿರುವುದು ದುರದೃಷ್ಟಕರ ಎಂದು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್ ಹೇಳಿದ್ದಾರೆ.

ಮೂಡುಬಿದಿರೆ: ಆಂಗ್ಲ ಭಾಷಾ ವ್ಯಾಮೋಹ ಮಾತೃಭಾಷೆಯನ್ನೇ ಉಳಿಸುವ ಸವಾಲಾಗಿ ಕನ್ನಡಿಗರ ಮುಂದಿರುವುದು ದುರದೃಷ್ಟಕರ ಎಂದು ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನ ಆಡಳಿತ ನಿರ್ದೇಶಕ ಡಾ. ಬಿ.ಪಿ. ಸಂಪತ್ ಕುಮಾರ್ ಹೇಳಿದ್ದಾರೆ.

ಕಾಂತಾವರ ಕನ್ನಡ ಸಂಘದ ಸಹಯೋಗದೊಂದಿಗೆ ಮೂಡುಬಿದಿರೆ ರೋಟರಿ ಕ್ಲಬ್ ವತಿಯಿಂದ ಕನ್ನಡ ಭವನದ ವಚನ ವೇದಿಕೆಯಲ್ಲಿ ಭಾನುವಾರ ನಡೆದ ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿ ಪ್ರಧಾನ ಉಪನ್ಯಾಸ ನೀಡಿದರು. ಕನ್ನಡಿಗರ ಆಶಯ ಮತ್ತು ಮನಸ್ಸು, ಭಾವನೆಗಳಿಗೆ ಪೂರಕವಾಗಿರುವ ಮಹಾಜನ್ ಆಯೋಗದ ವರದಿ ಜಾರಿಯಾದಲ್ಲಿ ಕನ್ನಡ ನಾಡು ನುಡಿಗೆ ಅವಿರತ ಶ್ರಮಿಸಿದ ಚೇತನಗಳ ಹೋರಾಟ ಸಾರ್ಥಕವಾಗುತ್ತದೆ ಎಂದದರು. ಕನ್ನಡ ಸಂಘದ ಮೂಲಕ ಕಾಂತಾವರನ್ನು ನಾಡಿಗೇ ಮಾದರಿಯಾಗಿ ರೂಪಿಸಿದ ಕನ್ನಡ ಸೇನಾನಿ ಡಾ. ನಾ. ಮೊಗಸಾಲೆ ಅವರನ್ನು ಗೌರವಿಸಲಾಯಿತು. ಸಂಘದ ಅಭಿವೃದ್ಧಿ ಕಾರ್ಯಗಳಿಗಾಗಿ ರು. ಹತ್ತು ಸಾವಿರ ಆರ್ಥಿಕ ನೆರವು ಹಸ್ತಾಂತರಿಸಲಾಯಿತು. ಡಾ. ನಾ. ಮೊಗಸಾಲೆ ಮಾತನಾಡಿ, ಕನ್ನಡ ಇಲ್ಲದ ಕಾಂತಾವರದಲ್ಲಿ ಕನ್ನಡಿಗ ಸ್ನೇಹಿತರನ್ನು ಸಂಪಾದಿಸುವುದಕ್ಕಾಗಿ ಸಾಹಿತ್ಯ ಪರಿಚಾರಿಕೆ ಮಾಡಿಕೊಂಡದ್ದು ಎಲ್ಲರ ಪ್ರೋತ್ಸಾಹ ಈ ಹಂತಕ್ಕೆ ತನ್ನನ್ನು ಬೆಳೆಸಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ರೋಟರಿ ಅಧ್ಯಕ್ಷ ಡಾ. ಆಶೀರ್ವಾದ್, ನಮ್ಮ ಮಾತು, ಮನಸ್ಸು , ಮುಂದಿನ ಪೀಳಿಗೆಯ ಬದುಕಿಗೂ ಕನ್ನಡ ಉಳಿದು ಬೆಳೆಯುವಲ್ಲಿ ನಮ್ಮೆಲ್ಲರ ಕೊಡುಗೆ ಅಗತ್ಯವಿದೆ ಎಂದರು. ರೋಟರಿ ಅಸಿಸ್ಟೆಂಟ್ ಗವರ್ನರ್ ಬಿ. ಶ್ರೀಕಾಂತ್ ಕಾಮತ್ ಹಾಜರಿದ್ದರು.ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ. ಪುಂಡಿಕಾಯ್ ಗಣಪಯ್ಯ ಭಟ್ ಸ್ವಾಗತಿಸಿದರು. ಗಣೇಶ್ ಕಾಮತ್ ಎಂ. ನಿರೂಪಿಸಿದರು. ರೋಟರಿ ಕಾರ್ಯದರ್ಶಿ ಪ್ರಜ್ವಲ್ ಆಚಾರ್ ವಂದಿಸಿದರು.