ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿಕ್ಕಾಡೆ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷ, ಉಪಾಧ್ಯಕ್ಷರಾಗಿ ರೈತಸಂಘ-ಕಾಂಗ್ರೆಸ್ ಬೆಂಬಲಿತ ಸಿ.ಟಿ.ನಾರಾಯಣ ಮತ್ತು ಲಕ್ಷ್ಮೀರಾಮಕೃಷ್ಣ ಬುಧವಾರ ಅವಿರೋಧವಾಗಿ ಆಯ್ಕೆಯಾದರು.ಸಂಘದಲ್ಲಿ ರೈತಸಂಘ-ಕಾಂಗ್ರೆಸ್ ಬೆಂಬಲಿತ 5 ಹಾಗೂ ಜೆಡಿಎಸ್ ಬೆಂಬಲಿತ 5 ಮಂದಿ ನಿರ್ದೇಶಕರು ಹಾಗೂ ಸರ್ಕಾರಿ ನಾಮಿನಿ ಸದಸ್ಯರಿದ್ದರು. ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಸರ್ಕಾರಿ ನಾಮಿನಿ ಸೇರಿ ರೈತಸಂಘ - ಕಾಂಗ್ರೆಸ್ ಬೆಂಬಲಿತ ಸದಸ್ಯರ ಸಂಖ್ಯಾಬಲ 6 ಕ್ಕೆ ಏರಿಕೆಯಾದ ಹಿನ್ನೆಲೆಯಲ್ಲಿ ರೈತಸಂಘ ಬೆಂಬಲಿತ ಸಿ.ಟಿ.ನಾರಾಯಣ ಹಾಗೂ ಲಕ್ಷ್ಮೀರಾಮಕೃಷ್ಣ ಅವರು ನಾಮಪತ್ರ ಸಲ್ಲಿಸಿದರು.
ಇವರನ್ನು ಹೊರತುಪಡಿಸಿ ಉಳಿದ ಯಾವೊಬ್ಬ ನಿರ್ದೇಶಕರು ನಾಮಪತ್ರ ಸಲ್ಲಿದ ಹಿನ್ನೆಲೆಯಲ್ಲಿ ನೂತನ ಅಧ್ಯಕ್ಷ- ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ನಿರ್ಮಲಾ ಘೋಷಿಸಿದರು. ನೂತನ ಅಧ್ಯಕ್ಷ ಸಿ.ಟಿ.ನಾರಾಯಣ ಹಾಗೂ ಉಪಾಧ್ಯಕ್ಷೆ ಲಕ್ಷ್ಮೀರಾಮಕೃಷ್ಣ ಅವರನ್ನು ಎಲ್ಲಾ ನಿರ್ದೇಶಕರು ಹಾಗೂ ಗ್ರಾಮದ ಮುಖಂಡರು ಅಭಿನಂದಿಸಿದರು.ಅಧ್ಯಕ್ಷ ಸಿ.ಟಿ.ನಾರಾಯಣ ಮಾತನಾಡಿ, ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಮುಖಂಡ ಹರೀಶ್ ಮಾತನಾಡಿ, ಅಧ್ಯಕ್ಷ - ಉಪಾಧ್ಯಕ್ಷರು ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಎಲ್ಲಾ ನಿರ್ದೇಶಕರನ್ನು ಅಭಿನಂದಿಸಿದರು. ಪಕ್ಷಾತೀತವಾಗಿ ಜತೆಗೂಡಿ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಸಲಹೆ ನೀಡಿದರು.ಈ ವೇಳೆ ನಿರ್ದೇಶಕರಾದ ಸಿ.ಟಿ.ಕೃಷ್ಣಕುಮಾರ್, ಎಚ್.ಪಿ.ಲತಾ, ಸುವರ್ಣಮ್ಮ, ಸರಕಾರಿ ನಾಮಿನಿ ನಿರ್ದೇಶಕ ಸಿ.ಎಂ.ಜಯರಾಮು, ಮುಖಂಡರಾದ ರೈತಸಂಘದ ಮಾಜಿ ಅಧ್ಯಕ್ಷ ಹರೀಶ್, ವಿಜಯೇಂದ್ರ, ಟಿಎಪಿಸಿಎಂಎಸ್ ನಿರ್ದೇಶಕ ಶ್ರೀಕಾಂತ್, ಯಜಮಾನ್ ಲೋಕೇಶ್, ಕೃಷ್ಣೇಗೌಡ, ಪ.ವೆಂಕಟೇಶ್ ಗೌಡ, ಸಿ.ಟಿ.ನಾಗರಾಜು, ಕೇಬಲ್ ಹರೀಶ್, ಸಿ.ಆರ್.ರಘು, ಸಿ.ವಿ.ರವಿ, ಸಿ.ಎಂ.ರಾಜಶೇಖರ್, ರಮೇಶ್ ಸೇರಿದಂತೆ ಹಲವು ಮುಖಂಡರು ಹಾಜರಿದ್ದರು.