ಕುಂದಗೋಳ:

ಪಟ್ಟಣದ ಹರಭಟ್ಟ ಶಿಕ್ಷಣ ಸಂಸ್ಥೆಯು 150ನೇ ವರ್ಷದ ವಾರ್ಷಿಕೋತ್ಸವಕ್ಕೆ ರಾಷ್ಟ್ರಪತಿ ಮುರ್ಮು ದ್ರೌಪದಿ ಸೇರಿದಂತೆ ಹಲವು ಗಣ್ಯಾತಿಗಣ್ಯರನ್ನು ಆಹ್ವಾನಿಸಲಾಗುವುದು ಎಂದು ಹರಭಟ್ಟ ಶಿಕ್ಷಣ ಸಮಿತಿ ಚೇರಮನ್‌ ಅರವಿಂದ ಕಟಗಿ ತಿಳಿಸಿದರು.

ಪಟ್ಟಣದ ಹರಭಟ್ಟ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾಜಿ ಸಚಿವ ದಿ. ಎಂ.ಎಸ್. ಕಟಗಿ ಅವರ ಹೆಸರಿನ ನೂತನ ಸಭಾಮಂಟಪ ಹಾಗೂ ಬಾಲಭವನ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಪರಶುರಾಮ ಪುಟವರ್ಧನ ಅವರಿಂದ ನಾಮಕರಣಗೊಂಡು, ಜಮಖಂಡಿ ಸಂಸ್ಥಾನದ ಕಾಲದಲ್ಲಿ ನಾಡಿಗೇರ ಹಾಗೂ ಕುಲಕರ್ಣಿ ಮನೆತನದವರು ನೀಡಿದ ದಾನದ ಜಮೀನಿನಲ್ಲಿ ಬೆಳೆದು ನಿಂತ ಈ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಸೇನೆ, ಪೊಲೀಸ್, ವೈದ್ಯಕೀಯ, ರೈಲ್ವೆ, ಉನ್ನತ ಶಿಕ್ಷಣ, ವ್ಯವಸಾಯ ಹಾಗೂ ಖಾಸಗಿ ಕ್ಷೇತ್ರ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ದೇಶದ ಸೇವೆ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಸಂಸ್ಥೆಯಲ್ಲಿ ಒಂದೇ ಸೂರಿನಡಿ ಎಲ್‌ಕೆಜಿಯಿಂದ ಪದವಿ ವರೆಗೂ ಶಿಕ್ಷಣ ನೀಡುವ ಮಹತ್ವಾಕಾಂಕ್ಷೆ ಹೊಂದಲಾಗಿದೆ ಎಂದರು.

ನೂತನ ಸಭಾಮಂಟಪ ಉದ್ಘಾಟಿಸಿದ ವಿಧಾನ ಪರಿಷತ್ ಸದಸ್ಯ ಎಫ್.ಎಚ್‌. ಜಕ್ಕಪ್ಪನವರ, ಹರಭಟ್ಟ ಶಿಕ್ಷಣ ಸಂಸ್ಥೆಯ ಮಣ್ಣಿನಲ್ಲಿಯೇ ಒಂದು ವಿಶೇಷ ಶಕ್ತಿಯಿದ್ದು, ಇಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಐಎಎಸ್ ಅಂತಹ ಉನ್ನತ ಪರೀಕ್ಷೆಗಳಲ್ಲಿ ತೇರ್ಗಡೆಯಾದರೆ ವೈಯಕ್ತಿಕವಾಗಿ ₹ 1 ಲಕ್ಷ ಗೌರವಧನ ನೀಡುವುದಾಗಿ ಘೋಷಿಸಿದರು. ಅಲ್ಲದೆ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆಯ ನಾಲ್ಕು ಕೊಠಡಿಗಳ ನಿರ್ಮಾಣಕ್ಕಾಗಿ ತಮ್ಮ ಅನುದಾನದಿಂದ ₹ 10 ಲಕ್ಷ ಮಂಜೂರು ಮಾಡುವುದಾಗಿ ಭರವಸೆ ನೀಡಿದರು.


ನೂತನ ಬಾಲಭವನ ಉದ್ಘಾಟಿಸಿದ ಮಾಜಿ ಸಂಸದ ಪ್ರೊ. ಐ.ಜಿ. ಸನದಿ, ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗಿ ಜ್ಞಾನಾರ್ಜನೆ ಮಾಡಿ ಸಮಾಜದ ಉತ್ತಮ ಪ್ರಜೆಗಳಾಗಿ ಬದುಕಬೇಕು ಎಂದರು. ಮಾಜಿ ಸಚಿವರಾದ ಎಂ.ಎಂ. ಹಿಂಡಸಗೇರಿ ಮಾತನಾಡಿದರು. ಟಿ.ಎಸ್. ಗೌಡಪ್ಪನವರ ಅಧ್ಯಕ್ಷತೆ ವಹಿಸಿದ್ದರು.ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಿ ಪ್ರೋತ್ಸಾಹಿಸಲಾಯಿತು. ಸಮಾರಂಭದ ನಂತರ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.

ಶಿಕ್ಷಣ ಸಮಿತಿಯ ಉಪಾಧ್ಯಕ್ಷ ಬಸವರಾಜ ಬ್ಯಾಹಟ್ಟಿ, ಕಾರ್ಯದರ್ಶಿ ಎಲ್.ಎಸ್. ಕೊನೇರಿ, ಶ್ರೀಮಂತ ಅರ್ಜುನ ನಾಡಗೇರ, ಈಶ್ವರಗೌಡ ಪಾಟೀಲ, ಶಿವರಾಜ ಕಟಗಿ, ಎಸ್.ಜಿ. ಅವಾರಿ, ಬಾಬಾಜಾನ್ ಮಿಸ್ತ್ರೀಕೋಟಿ, ಶ್ರೀಕಾಂತ್ ಕಲಾಲ್, ಭರಮಣ್ಣ ಸೊರಟೂರ್, ಪ್ರಾಚಾರ್ಯ ಎಲ್.ಎಲ್. ಲಮಾಣಿ, ಹಾಲೇಶ‌ ದೊಡ್ಡಮನಿ, ಬಿ.ಡಿ. ಕಾಲಾರಿ ಸೇರಿದಂತೆ ಸಮಿತಿಯ ನಿರ್ದೇಶಕರು ಉಪಸ್ಥಿತರಿದ್ದರು.