ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್. ನಗರ
ಪಟ್ಟಣದ ನವನಗರ ಬ್ಯಾಂಕ್ ಕೇಂದ್ರ ಕಚೇರಿಯಲ್ಲಿ ಅಧ್ಯಕ್ಷ ಕೆ.ಎನ್. ಬಸಂತ್ ಅವರ 52ನೇ ವರ್ಷದ ಜನ್ಮ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಶುಭಾಶಯ ಕೋರಿ ಮಾತನಾಡಿ, ನಿಮ್ಮ ಕುಟುಂಬದ ಜೊತೆಯೂ ಜನರಿದ್ದು ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ಮುಂದಿನ ದಿನಗಳಲ್ಲಿ ನೀವು ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರೊಡನೆ ಬೆರೆತು ಗಟ್ಟಿಯಾಗಿ ನಿಂತು ರಾಜಕಾರಣ ಮಾಡದಿದ್ದರೆ ಅದು ಎಸ್. ನಂಜಪ್ಪನವರಿಗೆ ಮಾಡುವ ಅಪಮಾನವಾಗುತ್ತದೆ ಎಂದರಲ್ಲದೆ, ರಾಜಕೀಯ ಅಧಿಕಾರ ಯಾರ ಸ್ವತ್ತು ಅಲ್ಲ, ಅದು ಜನರ ತೀರ್ಮಾನವಾಗಿದೆ ಎಂದು ತಿಳಿಸಿದರು.ಭವಿಷ್ಯದಲ್ಲಿ ನವ ನಗರ ಬ್ಯಾಂಕ್ ಅಧ್ಯಕ್ಷರಿಗೆ ಉತ್ತಮ ರಾಜಕೀಯ ಅವಕಾಶ ದೊರೆತು ಉತ್ತುಂಗಕ್ಕೇರಲಿ ಎಂದು ಅವರು ಹಾರೈಸಿದರು. ಕೆ.ಎನ್. ಬಸಂತ್ ಸ್ನೇಹಿತರು ಮತ್ತು ವಿವಿಧ ಪಕ್ಷಗಳ ರಾಜಕೀಯ ಮುಖಂಡರು ಜನ್ಮದಿನದ ಶುಭಾಶಯ ಕೋರಿದರು.
ಬ್ಯಾಂಕಿನ ಹೆಸರಿಗೆ ಮಸಿ ಬಳಿಯು ಕೆಲಸಉತ್ತಮವಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ವಿವಿಧೆಡೆಗಳಲ್ಲಿ ಶಾಖೆಗಳನ್ನು ತೆರೆದು ಜನಸ್ನೇಹಿಯಾಗಿರುವ ನವನಗರ ಅರ್ಬನ್ ಬ್ಯಾಂಕಿನ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಕೆಲವರು ಮಾಡುತ್ತಿದ್ದು, ಇಂತಹ ವರ್ತನೆ ಸರಿಯಲ್ಲ ಎಂದು ಹುಣಸೂರು ಶಾಸಕ ಜಿ.ಡಿ. ಹರೀಶ್ ಗೌಡ ಹೇಳಿದರು.
ಸಹಕಾರಿ ಧುರೀಣರೂ ಆಗಿದ್ದ ಮಾಜಿ ಸಚಿವರಾದ ದಿ.ಎಸ್. ನಂಜಪ್ಪನವರು ದೂರದೃಷ್ಠಿಯಿಂದ ಆರಂಭಿಸಿದ್ದ ಬ್ಯಾಂಕಿನ ಏಳಿಗೆ ಸಹಿಸದವರು ಮಾಡುತ್ತಿರುವ ಅಪಪ್ರಚಾರಕ್ಕೆ ಯಾರು ಕಿವಿಗೊಡಬಾರದು ಎಂದರು.ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರಿಂದ ಹಿಡಿದು ಎಲ್ಲ ವರ್ಗದವರಿಗೂ ಸಾಲ ನೀಡುವ ಮೂಲಕ ಜನಪರವಾಗಿರುವ ಬ್ಯಾಂಕ್ ಅನ್ನು ಕೆ.ಎನ್. ಬಸಂತ್ ಮುನ್ನಡೆಸಿಕೊಂಡು ಹೋಗುತ್ತಿದ್ದು, ಇವರು ಇತರರಿಗೆ ಮಾದರಿಯಾಗಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಪುರಸಭೆ ಅಧ್ಯಕ್ಷ ಶಿವುನಾಯಕ್, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್. ಮಹೇಶ್, ಮಾಜಿ ಅಧ್ಯಕ್ಷ ವೈ.ಎಸ್. ಕುಮಾರ್, ಪುರಸಭೆ ಸದಸ್ಯರಾದ ಕೆ.ಎಲ್. ಜಗದೀಶ್, ಕೆ.ಪಿ. ಪ್ರಭುಶಂಕರ್, ಸಂತೋಷ್ ಗೌಡ, ಶಂಕರ್ ಸ್ವಾಮಿ, ಮಾಜಿ ಸದಸ್ಯ ಎನ್. ಶಿವಕುಮಾರ್ ಇತರರು ಇದ್ದರು.