ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಯುವ ಪೀಳಿಗೆಗೆ ಸಾಧಕರ ಆದರ್ಶಗಳು ಅನುಕರಣೀಯ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ.ಸಿ. ಸೋಮಶೇಖರ್ ಹೇಳಿದರು.ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ಶರಣ ಸಾಹಿತ್ಯ ಪರಿಷತ್ತು ಮೈಸೂರು ನಗರ ಘಟಕದ ವತಿಯಿಂದ ಶ್ರೀ ಶಿವರಾತ್ರಿ ರಾಜೇಂದ್ರ ಭವನದಲ್ಲಿ ಆಯೋಜಿಸಿದ್ದ ಶಕುಂತಲ ಜಯದೇವ ಶರಣ ಪ್ರಶಸ್ತಿ- 2024 ಪ್ರದಾನ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವವರನ್ನು ಗಮನಿಸಿದರೆ ಅವರು ತಮ್ಮ ಜೀವನದಲ್ಲಿ ಶಿಸ್ತು ಮತ್ತು ಸಂಮಯ ರೂಢಿಸಿಕೊಂಡಿರುವುದನ್ನು ಕಾಣುತ್ತೇವೆ. ಅವರು ತಾವು ಮಾಡುವ ಕಾರ್ಯದಲ್ಲಿ ಎಳ್ಳಷ್ಟೂ ಉದಾಸೀನ ತೋರದೆ ಕಾಲದ ಮಹತ್ವ ಅರಿತು ಕೆಲಸ ಮಾಡುತ್ತಾರೆ. ಇದನ್ನು ಯುವ ಜನಾಂಗ ರೂಢಿಸಿಕೊಳ್ಳಬೇಕು ಎಂದರು.ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರ ಜೀವನದಲ್ಲಿ ಸಂಭವಿಸುವ ತಿರುವುಗಳು ಮಹತ್ತರ ಸಾಧನೆಗೆ ಕಾರಣವಾಗುತ್ತವೆ. ಅಂತಹ ಘಟನೆಗಳು ಸಾಧಕರಾದ ಎಸ್. ಮಹದೇವಯ್ಯ ಮತ್ತು ಡಾ. ಸೋಮಶೇಖರ್ ಅವರ ಜೀವನದಲ್ಲಿ ನಡೆದು ಮುಂದೆ ಅವರು ಉತ್ತಮ ಸಾಧನೆಯ ಮೂಲಕ ಸಮಾಜದ ಸ್ವಾಸ್ತ್ಯಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವುದು ಶ್ಲಾಘನೀಯ ಎಂದರು.ಬೆಂಗಳೂರಿನ ಸಮಾಜ ಸೇವಕ ಎಸ್. ಮಹಾದೇವಯ್ಯ ಮತ್ತು ಮೈಸೂರಿನ ನಿವೃತ್ತ ಪ್ರಾಧ್ಯಾಪಕಿ ಡಾ.ಎಂ.ಎಸ್. ವೇದಾ ಅವರಿಗೆ ಶಕುಂತಲಾ ಜಯದೇವ ಶರಣ ಪ್ರಶಸ್ತಿ- 2024ನ್ನು ಶ್ರೀಗಳು ಪ್ರದಾನ ಮಾಡಿದರು.ಕೆ.ಆರ್. ನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಅವರು ಅಭಿನಂದನಾ ನುಡಿಗಳನ್ನಾಡಿ, ಬೆಂಗಳೂರು ಜಿಲ್ಲೆ ಕನ್ನಳ್ಳಿಯ ಎಸ್. ಮಹದೇವಯ್ಯ ಅವರು, ಕೃಷಿ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಮೈಸೂರಿನ ಸಿ.ಎಫ್.ಟಿ.ಆರ್.ಐನಲ್ಲಿ ಸಹಾಯಕ ಸಂಶೋಧಕರಾಗಿ, ಬಳಿಕ ಲಂಡನ್ ನಲ್ಲಿ ಎಂ.ಎಸ್ಸಿ ಪದವಿ ಪಡೆದು ಅಲ್ಲಿನ ರಾಯಲ್ ಫ್ರೀ ಹಾಸ್ಪಿಟಲ್ ನಲ್ಲಿ ಆಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಯುಕೆಯಲ್ಲಿ ಕನ್ನಡ ಬಳಗ ಹಾಗೂ ವೀರಶೈವ ಸವಾಜ ಸ್ಥಾಪಿಸಿದ್ದಾರೆ. ಅಲ್ಲಿ ಬಸವ ಅಂತಾರಾಷ್ಟ್ರೀಯ ಪ್ರತಿಷ್ಠಾನ ಸ್ಥಾಪಿಸಿ ಶರಣ ಸಂಸ್ಕೃತಿ, ಸಾಹಿತ್ಯ, ದಾಸೋಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾಗಿ ಅವರು ಹೇಳಿದರು.ಡಾ.ಎಂ.ಎಸ್. ವೇದಾ ಅವರು, ಮೈಸೂರಿನ ಸಿ. ಶಿವಣ್ಣ ಮತ್ತು ದೇವೀರಮ್ಮ ಅವರ ಪುತ್ರಿ. ಮೈಸೂರು ವಿವಿಯಿಂದ ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಪದವಿಗಳಿಸಿ, ಸಹ ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರ ಸಾಹಿತ್ಯ ಸೇವೆಗೆ ಹಲವಾರು ಪ್ರಶಸ್ತಿಗಳು ಸಂದಿವೆ ಎಂದರು.ಶರಣ ಸಾಹಿತ್ಯ ಪರಿಷತ್ ಮೈಸೂರು ನಗರ ಘಟಕದ ಅಧ್ಯಕ್ಷ ಮ.ಗು. ಸದಾನಂದಯ್ಯ ಸ್ವಾಗತಿಸಿದರು. ರಾಜರಾಜೇಶ್ವರಿ ಅಕ್ಕನ ಬಳಗದ ಸದಸ್ಯರು ವಚನ ಗಾಯನ ನಡೆಸಿಕೊಟ್ಟರು. ಪ್ರಶಸ್ತಿ ದತ್ತಿ ದಾಸೋಹಿಗಳಾದ ಡಾ. ಶಕುಂತಲಾ ಜಯದೇವ ಅವರು ಪಾಲ್ಗೊಂಡಿದ್ದರು.