ಮೈಸೂರಿನ ಆಯಿಷ್‌ ಬಗ್ಗೆ ರಾಷ್ಟ್ರಪತಿ ಮೆಚ್ಚುಗೆ

| N/A | Published : Sep 02 2025, 01:00 AM IST

ಸಾರಾಂಶ

ಎರಡು ದಿನಗಳ ಭೇಟಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದರು. ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುರ್ಮು ಅವರನ್ನು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಸ್ವಾಗತಿಸಿದರು.

  ಮೈಸೂರು :  ಎರಡು ದಿನಗಳ ಭೇಟಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸೋಮವಾರ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದರು. ಮೈಸೂರಿನ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುರ್ಮು ಅವರನ್ನು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋತ್‌ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆತ್ಮೀಯವಾಗಿ ಸ್ವಾಗತಿಸಿದರು.

ಬಳಿಕ, ಮಾನಸ ಗಂಗೊತ್ರಿಯ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯ ವಜ್ರ ಮಹೋತ್ಸವ ಸಮಾರಂಭವನ್ನು ಅವರು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ವಜ್ರ ಮಹೋತ್ಸವ ಸಮಾರಂಭದ ಸ್ಮರಣಿಕೆ ಬಿಡುಗಡೆಗೊಳಿಸಿ ಮಾತನಾಡಿದ ಮುರ್ಮು, ಇತರ ಸಮಸ್ಯೆಗಳಂತೆ ವಾಕ್ ಮತ್ತು ಶ್ರವಣ ಸಂಬಂಧಿತ ತೊಂದರೆಗಳಲ್ಲಿ ಕೂಡ ಪ್ರಾಥಮಿಕ ಹಂತದಲ್ಲಿಯೇ ಲಕ್ಷಣಗಳನ್ನು ಗುರುತಿಸುವುದು ಮತ್ತು ಚಿಕಿತ್ಸೆ ನೀಡಲು ತಜ್ಞರ ಅವಶ್ಯಕತೆ ಇದೆ. ಇಂದಿನ ತಂತ್ರಜ್ಞಾನ ಯುಗದಲ್ಲಿ ವಾಕ್ ಮತ್ತು ಶ್ರವಣ ತೊಂದರೆಗಳನ್ನು ನಿವಾರಿಸಲು ಅತ್ಯಾಧುನಿಕ ತಂತ್ರಜ್ಞಾನ ಬಹಳ ಮುಖ್ಯ. ಇವುಗಳ ಬಳಕೆಯಿಂದ ಸಾಮಾನ್ಯ ಜನರು ಶ್ರವಣ ಸಹಾಯಕ ಸಾಧನಗಳು ಮತ್ತು ಸಾಧನೋಪಕರಣಗಳನ್ನು ಸುಲಭವಾಗಿ ಪಡೆಯಬಹುದು ಎಂದು ಅಭಿಪ್ರಾಯಪಟ್ಟರು.

ಆಯಿಷ್‌ ದೇಶದಲ್ಲಿ ದಿವ್ಯಾಂಗ ಮಾನವ ಸಂಪನ್ಮೂಲಗಳನ್ನು ಶಕ್ತಗೊಳಿಸುವ ಪ್ರಮುಖ ಸಂಸ್ಥೆಯಾಗಿದೆ. ಇಲ್ಲಿ ಸ್ಥಾಪಿಸಲ್ಪಟ್ಟ ಉತ್ಕೃಷ್ಟತಾ ಕೇಂದ್ರವು ಶಿಕ್ಷಣ, ವೈದ್ಯಕೀಯ, ತಾಂತ್ರಿಕ ತಜ್ಞತೆ ಹಾಗೂ ಸಂಶೋಧನೆಗಳಿಗೆ ಮಾರ್ಗದರ್ಶನ ನೀಡುತ್ತಿದೆ. ಇದು ದಿವ್ಯಾಂಗ ಜನರ ಸಬಲೀಕರಣಕ್ಕೆ ಪ್ರಮುಖ ಹೆಜ್ಜೆಯಾಗಿದೆ. ಈ ಕಾರ್ಯದಲ್ಲಿ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು, ದೇಶ-ವಿದೇಶಗಳಲ್ಲಿ ಸೇವೆ ನೀಡುತ್ತಿರುವವರು ಕೂಡ ಸಹಭಾಗಿಯಾಗಿರುವುದು ಶ್ಲಾಘನೀಯವಾಗಿದೆ ಎಂದರು.

ರಾತ್ರಿ ನಗರದ ಪ್ರತಿಷ್ಠಿತ ರಾಡಿಸನ್ ಬ್ಲೂ ಹೋಟೆಲ್‌ನಲ್ಲಿ ಅವರು ವಾಸ್ತವ್ಯ ಹೂಡಲಿದ್ದು, ಮಂಗಳವಾರ ವಿಶ್ವವಿಖ್ಯಾತ ಅರಮನೆಗೆ ಭೇಟಿ ನೀಡಲಿದ್ದಾರೆ. ಬಳಿಕ, ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಲಿದ್ದಾರೆ.

Read more Articles on