ಸಾರಾಂಶ
ಬೆಂಗಳೂರು : ಮಹಿಳೆಯರು ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಬೇಕು. ಮಾನಸಿಕವಾಗಿ ಆರೋಗ್ಯವಾಗಿದ್ದರೆ ಸಮಸ್ಯೆಗಳಿಗೆ ಸುಲಭವಾಗಿ ಪರಿಹಾರ ಕಂಡುಕೊಳ್ಳಬಹುದು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಸಲಹೆ ನೀಡಿದರು.
ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್‌ನಲ್ಲಿ ಶುಕ್ರವಾರ ಆಯೋಜಿಸಿದ್ದ 10ನೇ ಅಂತಾರಾಷ್ಟ್ರೀಯ ಮಹಿಳಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಹಿಳೆಯರು ಮಾನಸಿಕ ಆರೋಗ್ಯಕ್ಕೆ ಒತ್ತು ನೀಡಬೇಕು. ಮಾನಸಿಕವಾಗಿ ಸದೃಢವಾಗಿದ್ದರೆ ಅಡೆತಡೆಗಳು, ಹಿನ್ನಡೆಗಳನ್ನು ಮೆಟ್ಟಿ ನಿಲ್ಲಬಹುದು. ಶಾಂತವಾಗಿ ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಿ. ಭಾರತವು ಆಧ್ಯಾತ್ಮ ಕ್ಷೇತ್ರದಲ್ಲಿ ವಿಶ್ವದಲ್ಲೇ ಛಾಪು ಮೂಡಿಸಿದ್ದು, ವಿಶ್ವಾಸಾರ್ಹ ದೇಶವಾಗಿದೆ. ಮಾನಸಿಕ ನೆಮ್ಮದಿಗಾಗಿ ಯೋಗ, ಧ್ಯಾನವನ್ನು ಅನುಸರಿಸಿ ಎಂದು ಕರೆ ನೀಡಿದರು.
ರವಿಶಂಕರ್ ಗುರೂಜಿ ಮತ್ತು ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಜನರಿಗೆ ಧ್ಯಾನ ಹಾಗೂ ಮಾನವೀಯ ಸೇವೆಗಳ ಮೂಲಕ ಶಾಂತಿಯ ಮಾರ್ಗ ತೋರಿಸುತ್ತಿದೆ. ತಂತ್ರಜ್ಞಾನದಲ್ಲಿ ಪ್ರಗತಿ ಸಾಧಿಸುತ್ತಿರುವ ಈ ಯುಗದಲ್ಲಿ ಮಾನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ ನಾವು ಸಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಯ ಮೀಸಲಿಡಿ:
ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಮುಖ್ಯಸ್ಥರಾದ ರವಿಶಂಕರ್ ಗುರೂಜಿ ಮಾತನಾಡಿ, ಬೇರೆಯವರಿಗೆ ಸಮಯ ನೀಡುವಂತೆ ನಿಮಗಾಗಿಯೂ ಸಮಯ ಮೀಸಲಿಟ್ಟುಕೊಳ್ಳಿ. ಮಹಿಳೆಯರು ಸಮಾಜವನ್ನು ಒಗ್ಗೂಡಿಸಲಿದ್ದು, ನಾವು ಮಹಿಳೆಯರ ಕಣ್ಣಲ್ಲಿ ಒಂದು ಹನಿ ಕಣ್ಣೀರನ್ನೂ ಬೀಳಲು ಬಿಡಬಾರದು. ಪ್ರಮುಖ ರಾಷ್ಟ್ರಗಳಲ್ಲಿ ಮಹಿಳೆಯರು ನಾಯಕತ್ವ ವಹಿಸಿದರೆ ಯುದ್ಧ, ಸಾಮಾಜಿಕ ವಿರೂಪಗಳು ಕಡಿಮೆಯಾಗಬಹುದು ಅಥವಾ ನಿಲ್ಲಬಹುದು ಎಂದು ಬಣ್ಣಿಸಿದರು.
ಸಮಾರಂಭದಲ್ಲಿ ಕೇಂದ್ರ ಸಚಿವೆ ಅನ್ನಪೂರ್ಣಾ ದೇವಿ, ಸಂಸದೆ ಹೇಮಾ ಮಾಲಿನಿ, ಮಾಜಿ ಸಂಸದೆ ಸುಮಲತಾ ಅಂಬರೀಷ್, ಪರ್ತಕರ್ತೆ ಸ್ಮಿತಾ ಪ್ರಕಾಶ್ ಮತ್ತಿತರರಿಗೆ ವಿಶಾಲಾಕ್ಷಿ ಪ್ರಶಸ್ತಿ ಹಾಗೂ ಲೆಫ್ಟಿನೆಂಟ್ ಕರ್ನಲ್ ಅನಿಷ್ ಮೋಹನ್, ಪತ್ರಕರ್ತ ಅರ್ಣಬ್ ಗೊಸ್ವಾಮಿ ಅವರಿಗೆ ಆಚಾರ್ಯ ರತ್ನಾನಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್, ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅನ್ನಪೂರ್ಣಾ ದೇವಿ, ಅಂತಾರಾರಾಷ್ಟ್ರೀಯ ಮಹಿಳಾ ಪರಿಷತ್ತಿನ ಅಧ್ಯಕ್ಷೆ ಭಾನುಮತಿ ನರಸಿಂಹನ್ ಉಪಸ್ಥಿತರಿದ್ದರು.
ದೇಶದಲ್ಲಿ ಆಡಳಿತ, ವ್ಯವಹಾರ ಮತ್ತು ವಿಜ್ಞಾನದಲ್ಲಿ ಮಹಿಳೆಯರು ಮುನ್ನಡೆ ಸಾಧಿಸುತ್ತಿದ್ದಾರೆ. ಆರ್ಟ್ ಆಫ್ ಲಿವಿಂಗ್‌ನ ಒತ್ತಡ ನಿವಾರಣಾ ಕಾರ್ಯಕ್ರಮಗಳು ಪ್ರಪಂಚದಾದ್ಯಂತ ಲಕ್ಷಾಂತರ ಜನರಿಗೆ ಆಧ್ಯಾತ್ಮಿಕ ಸಾಂತ್ವನ ನೀಡಿವೆ.
- ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ.