ಸಾರಾಂಶ
ವಿ.ಎಂ. ನಾಗಭೂಷಣ
ಸಂಡೂರು: ಇಲ್ಲಿನ ಅರಣ್ಯ ಸೇರಿದಂತೆ ದೇಶದ ವಿವಿಧೆಡೆ ಇರುವ ವರ್ಜಿನ್ ಅರಣ್ಯ (ಮೊದಲ ಅಥವಾ ಹಳೆಯ ಬೆಳವಣಿಗೆಯ ಕಾಡುಗಳು), ಅಲ್ಲಿಯ ವೈವಿಧ್ಯಮಯ ಜೀವರಾಶಿಗಳ ಸಂರಕ್ಷಣೆ ಕುರಿತಂತೆ ವಿಜಯನಗರ ಜಿಲ್ಲೆಯ ಕೊಟ್ಟೂರಿನ ಡಾ. ಸದಾನಂದ ಹೆಗ್ಡಾಳಮಠ ರಾಷ್ಟ್ರಪತಿಗೆ ಬರೆದಿದ್ದ ಪತ್ರಕ್ಕೆ ರಾಷ್ಟ್ರಪತಿ ಕಾರ್ಯಾಲಯದಿಂದ ಸೂಕ್ತ ಸ್ಪಂದನೆ ದೊರಕಿದೆ. ಸಂಡೂರಿನ ವರ್ಜಿನ್ ಅರಣ್ಯ ಸಂರಕ್ಷಣೆಗಾಗಿ ನಡೆದಿರುವ ಹೋರಾಟಕ್ಕೆ ಹೊಸ ಆಯಾಮ ತಂದು ಕೊಟ್ಟಿದೆ.ದೇಶದಲ್ಲಿನ ಅರಣ್ಯ ಮತ್ತು ಅಲ್ಲಿನ ಜೀವರಾಶಿಗಳ ಪರವಾಗಿ ಅರ್ಜಿ ಸಲ್ಲಿಸಿ, ಅದರಲ್ಲಿ ಅರಣ್ಯ ನಾಶದಿಂದ ಹವಾಮಾನದಲ್ಲಿ ಬದಲಾವಣೆಯಾಗುತ್ತಿದೆ. ದೆಹಲಿ ಮುಂತಾದ ಕಡೆಗಳಲ್ಲಿ ೫೦ ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚು ಉಷ್ಣಾಂಶ ಕಂಡುಬಂದಿದ್ದು, ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಪ್ರಾಕೃತಿಕ ಅವಘಡಗಳು ಸಂಭವಿಸುತ್ತಿದೆ. ಈ ಕಾರಣಕ್ಕೆ ವರ್ಜಿನ್ ಅರಣ್ಯ ಸಂರಕ್ಷಣೆಗೆ ಜು. 3ರಂದು ರಾಷ್ಟ್ರಪತಿಗೆ ಮನವಿ ಕಳುಹಿಸಿದ್ದರು.
ವಿವಿಧ ಪರಿಸರ ಸಂರಕ್ಷಣಾ ಕಾಯ್ದೆ, ವನ್ಯಜೀವಿ ಸಂರಕ್ಷಣಾ ಕಾಯ್ದೆ, ವಿವಿಧ ಸಂವಿಧಾನಿಕ ಕಾಯ್ದೆಗಳ ಆಧಾರದಲ್ಲಿ ಮುಂದಿನ ೫ ವರ್ಷಗಳ ವರೆಗೆ ಅಥವಾ ಈಗ ಹೆಚ್ಚಿರುವ ತಾಪಮಾನ ಸಹಜ ಸ್ಥಿತಿಗೆ ಬರುವ ವರೆಗೆ ದೇಶದಲ್ಲಿನ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಲು, ವರ್ಜಿನ್ ಅರಣ್ಯದಲ್ಲಿನ ವನ್ಯಜೀವಿಗಳ ಮಹತ್ವ ಗುರುತಿಸಿ ಸಂರಕ್ಷಿಸಲು ಮನವಿ ಮಾಡಿಕೊಂಡಿದ್ದರು.ಸಂಡೂರಿನ ವರ್ಜಿನ್ ಅರಣ್ಯಪ್ರದೇಶ, ಕಮ್ಮತ್ತೂರು, ಹದ್ದಿನಪಡೆ, ದೇವದಾರಿ ಅರಣ್ಯ ಪ್ರದೇಶದ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿ, ಅಲ್ಲಿನ ಪರಿಸರ ಮತ್ತು ವನ್ಯಜೀವಿಗಳ ಸಂರಕ್ಷಣೆ ಕುರಿತು ಮನವಿ ಮಾಡಿಕೊಂಡಿದ್ದಾರೆ.
ಹೆಗ್ಡಾಳಮಠ ಮನವಿಗೆ ಸ್ಪಂದಿಸಿದ ರಾಷ್ಟ್ರಪತಿ ಕಾರ್ಯಾಲಯ, ಈ ಕುರಿತು ಗಮನ ಹರಿಸುವಂತೆ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಸಚಿವಾಲಯಕ್ಕೆ ಪತ್ರ ಕಳುಹಿಸಿದೆ.ಈ ಪತ್ರದ ಆಧಾರದಲ್ಲಿ ಕೇಂದ್ರ ಅರಣ್ಯ ಸಂರಕ್ಷಣಾ ವಿಭಾಗದ ಸಹಾಯಕ ಕಮಿಷನರ್ ಆ. ೬ರಂದು ರಾಜ್ಯ ಸರ್ಕಾರದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಪತ್ರ ಬರೆದು, ಡಾ. ಸದಾನಂದ ಹೆಗ್ಡಾಳಮಠ ಪತ್ರದಲ್ಲಿ ಸೂಚಿಸಿದ ಅಂಶಗಳ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ, ವರದಿ ಕಳಿಸುವಂತೆ ಸೂಚಿಸಿದೆ.ಪರಿಸರ ಸಂರಕ್ಷಣೆ ವಿಷಯ ಕುರಿತಂತೆ ನಾನು ಬರೆದ ಪತ್ರಕ್ಕೆ ರಾಷ್ಟ್ರಪತಿ ಕಾರ್ಯಾಲಯದಿಂದ ಸ್ಪಂದನೆ ದೊರೆತಿದೆ. ಎಲ್ಲರೂ ಒಟ್ಟಾಗಿ ವರ್ಜಿನ್ ಅರಣ್ಯ, ಅಲ್ಲಿನ ಜೀವ ಸಂಕುಲ ಸಂರಕ್ಷಿಸಲು ಹೋರಾಟ ನಡೆಸಬೇಕಿದೆ ಎಂದು ಡಾ. ಸದಾನಂದ ಹೆಗ್ಡಾಳಮಠ ಹೇಳುತ್ತಾರೆ.ಸಂಡೂರು ತಾಲೂಕಿನ ವರ್ಜಿನ್ ಅರಣ್ಯ ಪ್ರದೇಶದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ಕಲ್ಪಿಸುವುದನ್ನು ವಿರೋಧಿಸಿ ಅರಣ್ಯ ಇಲಾಖೆಯ ಅಧಿಕಾರಿಗಳೇ ವರದಿ ನೀಡಿದ್ದಾರೆ. ಇದೀಗ ರಾಷ್ಟ್ರಪತಿ ಕಾರ್ಯಾಲಯದಿಂದ ರಾಜ್ಯ ಸರ್ಕಾರದ ಮುಖ್ಯ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗೆ ವರದಿ ನೀಡಲು ನಿರ್ದೇಶಿಸಿದೆ. ಇದರಿಂದ ಇಲ್ಲಿನ ವರ್ಜಿನ್ ಅರಣ್ಯ ಸಂರಕ್ಷಣೆ ಕುರಿತಂತೆ ನಡೆದಿರುವ ಹೋರಾಟಕ್ಕೆ ಹೆಚ್ಚಿನ ಬಲಬಂದಂತಾಗಿದೆ ಎಂದು ಜನ ಸಂಗ್ರಾಮ ಪರಿಷತ್ ಉಪಾಧ್ಯಕ್ಷ ಶ್ರೀಶೈಲ ಆಲ್ದಳ್ಳಿ ಹೇಳುತ್ತಾರೆ.